ಸಾರಾಂಶ
ವಾಷಿಂಗ್ಟನ್: ವ್ಯಾಪಾರ ಒಪ್ಪಂದ ಕುರಿತ ಚೌಕಾಸಿಗೆ ವಿರೋಧ ವ್ಯಕ್ತಪಡಿಸಿ ಭಾರತದ ಮೇಲೆ ಶೇ.25ರಷ್ಟು ತೆರಿಗೆ ಮತ್ತು ರಷ್ಯಾದಿಂದ ತೈಲ ಖರೀದಿಗೆ ದಂಡ ವಿಧಿಸುವುದಾಗಿ ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಭಾರತದ್ದು ಡೆಡ್ ಎಕಾನಮಿ (ಮೃತ ಆರ್ಥಿಕತೆ) ಎಂದು ಟೀಕಿಸಿದ್ದಾರೆ. ಅಲ್ಲದೆ ಭಾರತ- ರಷ್ಯಾ ನಡುವಿನ ವ್ಯಾಪಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಎರಡೂ ದೇಶಗಳು ತಮ್ಮ ‘ಡೆಡ್ ಎಕಾನಮಿ’ಯನ್ನು ಒಟ್ಟಾಗಿ ಮುಳುಗಿಸಬಹುದು ಎಂದು ಹೇಳಿದ್ದಾರೆ.
ಭಾರತದ ಕುರಿತ ಈ ಆಕ್ಷೇಪಾರ್ಹ ಹೇಳಿಕೆಯನ್ನು ಲೋಕಸಭೆಯ ಪ್ರತಿಪಕ್ಷ ನಾಯಕ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಲವಾಗಿ ಸಮರ್ಥಿಸಿಕೊಂಡಿದ್ದರೆ, ರಾಹುಲ್ ಹೇಳಿಕೆ ಬಗ್ಗೆ ಬಿಜೆಪಿ ಕಿಡಿಕಾರಿದೆ.
ಪ್ರಸಕ್ತ ಭಾರತ ವಿಶ್ವದಲ್ಲೇ 4ನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, 2030ರ ವೇಳೆಗೆ 3ನೇ ಸ್ಥಾನಕ್ಕೆ ಏರಲಿದೆ ಎಂದು ಹಲವು ಜಾಗತಿಕ ಆರ್ಥಿಕ ಸಂಸ್ಥೆಗಳು ಭವಿಷ್ಯ ನುಡಿದಿವೆ. ಜೊತೆಗೆ ಹಲವು ವರ್ಷಗಳಿಂದ ಭಾರತವು, ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪೈಕಿ ವಿಶ್ವದಲ್ಲೇ ಅತಿವೇಗದ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆ ಎಂಬ ಹಿರಿಮೆಗೂ ಪಾತ್ರವಾಗಿದೆ. ಪ್ರಸಕ್ತ ವರ್ಷವೂ ಭಾರತದ ಆರ್ಥಿಕ ಪ್ರಗತಿ ಉತ್ತಮವಾಗಿರಲಿದೆ ಎಂದು ಈಗಾಗಲೇ ವಿಶ್ವಬ್ಯಾಂಕ್, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಮೊದಲಾದ ಹಣಕಾಸು ಸಂಸ್ಥೆಗಳು ಹೇಳಿವೆ. ಆದರೂ ಭಾರತದ ಆರ್ಥಿಕತೆಯನ್ನು ಟ್ರಂಪ್ ಮೃತ ಎಂದಿದ್ದು ಭಾರೀ ಟೀಕೆಗೆ ಕಾರಣವಾಗಿದೆ.
ಟ್ರಂಪ್ ಹೇಳಿದ್ದೇನು?:
ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕದ ಭಾರತದ ವಿರುದ್ಧ ಟ್ರಂಪ್ ಅವರು ಬುಧವಾರವಷ್ಟೇ ಶೇ.25ರಷ್ಟು ತೆರಿಗೆ ಹಾಗೂ ರಷ್ಯಾ ಜತೆಗಿನ ವ್ಯವಹಾರದ ಹಿನ್ನೆಲೆಯಲ್ಲಿ ದಂಡ ವಿಧಿಸುವುದಾಗಿ ಘೋಷಣೆ ಮಾಡಿದ್ದರು. ಅದರ ಬೆನ್ನಲ್ಲೇ ಮತ್ತೆ ಪ್ರತಿಕ್ರಿಯಿಸಿರುವ ಟ್ರಂಪ್, ‘ರಷ್ಯಾ ಜತೆಗೆ ಭಾರತ ಏನು ಮಾಡುತ್ತದೆ ಎಂಬ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅವರು ತಮ್ಮ ಮೃತ ಆರ್ಥಿಕತೆಯನ್ನು ಒಟ್ಟಾಗಿ ಮುಳುಗಿಸಿಕೊಳ್ಳಲಿ. ಭಾರತವು ವಿಶ್ವದಲ್ಲೇ ಹೆಚ್ಚಿನ ತೆರಿಗೆ ವಿಧಿಸುವ ದೇಶ. ನಾವು ಅವರ ಜತೆಗೆ ಕಡಿಮೆ ವ್ಯಾಪಾರ ಮಾಡುತ್ತಿದ್ದೇವೆ’ ಎಂದು ಹೇಳಿದ್ದಾರೆ. ಈ ಮೂಲಕ ಭಾರತ ಅಮೆರಿಕಕ್ಕೆ ಅತಿ ಹೆಚ್ಚಿನ ರಫ್ತು ಮಾಡುತ್ತಿದ್ದರೆ, ಅಮೆರಿಕ ಉತ್ಪನ್ನಗಳ ಆಮದಿಗೆ ಭಾರತದ ಅವಕಾಶ ನೀಡುತ್ತಿಲ್ಲ ಎಂದು ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಇದೇ ವೇಳೆ, ‘ರಷ್ಯಾ ಮತ್ತು ಅಮೆರಿಕ ನಡುವೆ ಯಾವುದೇ ವ್ಯಾಪಾರ ನಡೆಯುತ್ತಿಲ್ಲ. ಈ ಸ್ಥಿತಿ ಇದೇ ರೀತಿ ಮುಂದುವರಿಯಲಿ ಎಂದ ಅವರು, ತಮ್ಮನ್ನು ತಾವು ಈಗಲೂ ಅಧ್ಯಕ್ಷರೆಂದು ತಿಳಿದುಕೊಂಡಿರುವ ರಷ್ಯಾದ ಮಾಜಿ ಅಧ್ಯಕ್ಷ ಮೆದ್ವೆದೇವ್ ಅವರಿಗೆ ತಮ್ಮ ಮಾತುಗಳ ಮೇಲೆ ನಿಗಾ ಇರಲಿ. ಅವರು ತೀವ್ರ ಅಪಾಯಕಾರಿ ಜಾಗಕ್ಕೆ ಕಾಲಿಡುತ್ತಿದ್ದಾರೆ’ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಟ್ರಂಪ್ ಹೇಳಿದ್ದು ಸರಿ: ರಾಹುಲ್ ವಿವಾದ
ನವದೆಹಲಿ: ಭಾರತದ್ದು ‘ಮೃತ ಆರ್ಥಿಕತೆ’ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬೆಂಬಲಿಸಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ. ವಿಶೇಷ ಎಂದರೆ, ರಾಹುಲ್ ಹೇಳಿಕೆಗೆ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ನಾಯಕರಿಂದಲೇ ಬೆಂಬಲ ಸಿಕ್ಕಿಲ್ಲ
ಭಾರತ ವಿರೋಧಿ ಪಾಕಿಸ್ತಾನದ ಜತೆ ಟ್ರಂಪ್ ಒಪ್ಪಂದ
ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ.25ರಷ್ಟು ತೆರಿಗೆ ಘೋಷಿಸಿದ ಬೆನ್ನಲ್ಲೇ, ಭಾರತದ ಶತ್ರುದೇಶ ಪಾಕಿಸ್ತಾನದ ಜೊತೆ ಮಹತ್ವದ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವುದಾಗಿ ಘೋಷಿಸಿದ್ದಾರೆ. ಪಾಕಿಸ್ತಾನದ ಬೃಹತ್ ತೈಲ ನಿಕ್ಷೇಪ ಅಭಿವೃದ್ಧಿಪಡಿಸುತ್ತೇವೆ ಎಂದಿದ್ದಾರೆ.