ಸಾರಾಂಶ
ಚುನಾವಣಾ ಅಕ್ರಮಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆ ಆ.4ರ ಬದಲಾಗಿ ಆ.5ರಂದು ನಡೆಯಲಿದೆ.
ಬೆಂಗಳೂರು : ಚುನಾವಣಾ ಅಕ್ರಮಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆ ಆ.4ರ ಬದಲಾಗಿ ಆ.5ರಂದು ನಡೆಯಲಿದೆ.
ಈ ಪ್ರತಿಭಟನೆಯ ಸ್ವರೂಪ ಹೇಗಿರಲಿದೆ ಎಂಬ ಬಗ್ಗೆ ನಿರ್ಧರಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಗುರುವಾರ ನಗರಕ್ಕೆ ಆಗಮಿಸಲಿದ್ದಾರೆ. ರಾಹುಲ್ ಗಾಂಧಿ ಅವರ ಹೋರಾಟಕ್ಕೆ ಸಂಬಂಧಿಸಿ ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ರಾಹುಲ್ ಗಾಂಧಿ ಆ.5ರಂದು ಚುನಾವಣಾ ಆಯೋಗದ ವಿರುದ್ಧ ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯ ಸ್ವರೂಪ ಯಾವ ರೀತಿಯಿರಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಯಿತು. ಈ ವೇಳೆ ಪ್ರತಿಭಟನಾ ರ್‍ಯಾಲಿ ನಡೆಸಬೇಕೇ ಅಥವಾ ಪ್ರತಿಭಟನಾ ಸಮಾವೇಶ ನಡೆಸಬೇಕೇ ಎಂಬ ಬಗ್ಗೆ ಚರ್ಚಿಸಲಾಯಿತು.
ಇಂದು ಅಂತಿಮ ರೂಪುರೇಷೆ-ಡಿಕೆಶಿ: ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಚುನಾವಣಾ ಆಕ್ರಮದ ಕುರಿತು ಹೋರಾಟ ಮಾಡಲು ರಾಹುಲ್ ಗಾಂಧಿ ಆ.5ಕ್ಕೆ ರಾಜ್ಯಕ್ಕಾಗಮಿಸುತ್ತಿದ್ದಾರೆ. ಆ ಹೋರಾಟ ಯಾವ ರೀತಿ ಇರಬೇಕು ಎಂಬ ಬಗ್ಗೆ ಗುರುವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವರೊಂದಿಗೆ ಸಭೆ ನಡೆಸಿ ಹೋರಾಟದ ಸ್ವರೂಪ ಮತ್ತು ಸ್ಥಳದ ಬಗ್ಗೆ ನಿರ್ಧರಿಸಲಾಗುವುದು. ಅದರಲ್ಲಿ ಮುಖ್ಯಮಂತ್ರಿ ಅವರು, ಶಾಸಕರು, ಪರಾಜಿತ ಅಭ್ಯರ್ಥಿಗಳು, ಕೆಪಿಸಿಸಿ ಪದಾಧಿಕಾರಿಗಳು ಸೇರಿ ಹಲವರು ಇರಲಿದ್ದಾರೆ. ನಾವು ಕೆಲ ಸ್ಥಳಗಳ ಸಲಹೆ ನೀಡಿದ್ದೇವೆ. ಅದನ್ನು ಪ್ರಧಾನ ಕಾರ್ಯದರ್ಶಿ ಅವರು ಪರಿಶೀಲಿಸಿ ಅಂತಿಮ ತೀರ್ಮಾನ ಮಾಡಲಿದ್ದಾರೆ ಎಂದರು.
ಪ್ರತಿಭಟನಾ ರ್‍ಯಾಲಿ ಮಾಡಲು ತಾಂತ್ರಿಕ ಸಮಸ್ಯೆಗಳಿವೆ. ಆ ಬಗ್ಗೆ ಮಾಹಿತಿ ಪಡೆದಿದ್ದು, ಗುರುವಾರದ ಸಭೆಯಲ್ಲಿ ಎಲ್ಲವೂ ಚರ್ಚೆ ಮಾಡಲಾಗುವುದು. ಇನ್ನು, ಹೋರಾಟದ ಸಂದರ್ಭದಲ್ಲಿ ಲೋಕಸಭೆ ಚುನಾವಣೆಯಲ್ಲಿ ಹೇಗೆ ಅಕ್ರಮವಾಗಿದೆ ಎಂಬ ಬಗ್ಗೆ ನಮ್ಮ ನಾಯಕರೇ ಮಾಹಿತಿ ನೀಡಲಿದ್ದಾರೆ. ಹೋರಾಟದ ಯಶಸ್ಸಿಗಾಗಿ ಎಲ್ಲ ಬ್ಲಾಕ್ ಅಧ್ಯಕ್ಷರು, ಶಾಸಕರು ಆ. 3ರೊಳಗೆ ತಮ್ಮ ವ್ಯಾಪ್ತಿಯಲ್ಲಿ ಸಭೆ ನಡೆಸಬೇಕು ಎಂದು ಸೂಚಿಸಿದ್ದೇನೆ ಎಂದು ತಿಳಿಸಿದರು. ಸಭೆಯಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಚಲುವರಾಯಸ್ವಾಮಿ, ಕೆ.ಎಚ್.ಮುನಿಯಪ್ಪ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕ ಶರತ್ ಬಚ್ಚೇಗೌಡ ಸೇರಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಕೂರು, ಬೆಂಗಳೂರು ದಕ್ಷಿಣ, ಮಂಡ್ಯ ಜಿಲ್ಲೆಗಳ ನಾಯಕರು ಭಾಗಿಯಾಗಿದ್ದರು.
ಪ್ರತಿಭಟನಾ ರ್‍ಯಾಲಿ ನಡೆಸಲು ಸುಪ್ರೀಂ ಕೋರ್ಟ್ ಆದೇಶಗಳಲ್ಲಿನ ನಿರ್ಬಂಧದ ಕುರಿತು ಚರ್ಚೆ ನಡೆಸಲಾಯಿತು. ಜತೆಗೆ, ಪ್ರತಿಭಟನಾ ಸಮಾವೇಶ ನಡೆಸಿದರೆ ಎಲ್ಲಿ ನಡೆಸಬೇಕು, ಎಷ್ಟು ಮಂದಿಯನ್ನು ಸೇರಿಸಬೇಕು ಎಂಬ ಬಗ್ಗೆಯೂ ಗೊಂದಲವುಂಟಾಯಿತು. ಹೀಗಾಗಿ ಯಾವ ವಿಚಾರದಲ್ಲೂ ಅಂತಿಮ ನಿರ್ಧಾರಕ್ಕೆ ಬರಲಾಗಲಿಲ್ಲ. ಕೊನೆಗೆ, ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಗುರುವಾರ ಬೆಂಗಳೂರಿಗೆ ಬರಲಿದ್ದು, ಅವರೊಂದಿಗೆ ಚರ್ಚೆ ನಡೆಸಿ ಸ್ಥಳ, ಪ್ರತಿಭಟನೆಯ ರೂಪುರೇಷೆ ಅಂತಿಮಗೊಳಿಸಲು ನಿರ್ಧರಿಸಲಾಯಿತು.
ಹೋರಾಟದಲ್ಲಿ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ರಾಷ್ಟ್ರೀಯ ನಾಯಕರು ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಹೋರಾಟ ದೊಡ್ಡಮಟ್ಟದಲ್ಲಿ ನಡೆಸಬೇಕಿದೆ. ಆದರೆ, ಸುಪ್ರೀಂಕೋರ್ಟ್ ಆದೇಶದಿಂದಾಗಿ ದೊಡ್ಡ ಪ್ರಮಾಣದಲ್ಲಿ ರ್‍ಯಾಲಿ ನಡೆಸಲು ಸಾಧ್ಯವಿಲ್ಲ. ಒಂದು ವೇಳೆ ಪಾದಯಾತ್ರೆಗೆ ಅವಕಾಶ ಸಿಗದಿದ್ದರೆ ಪ್ರತಿಭಟನಾ ಸಮಾವೇಶ ನಡೆಸಬೇಕಾಗಲಿದೆ. ಆದರೆ, ನಗರದೊಳಗೆ ಪ್ರತಿಭಟನಾ ಸಮಾವೇಶ ನಡೆಸಬೇಕೆಂದರೆ ದೊಡ್ಡ ಪ್ರಮಾಣದಲ್ಲಿ ಜನರನ್ನು ಸೇರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಬೆಂಗಳೂರಿನ ಹೊರವಲಯದಲ್ಲಿ ಪ್ರತಿಭಟನೆ ನಡೆಸುವ ಬಗ್ಗೆಯೂ ಚರ್ಚಿಸಲಾಯಿತು.
ಡಿಕೆಸು ಸೋಲುಪ್ರಸ್ತಾಪಿಸಿದ ಡಿಕೆಶಿ: ಸಭೆಯಲ್ಲಿ ಸಹೋದರ ಡಿ.ಕೆ. ಸುರೇಶ್ ಸೋಲಿನ ಕುರಿತಂತೆ ಪ್ರಸ್ತಾಪಿಸಿದ ಡಿ.ಕೆ. ಶಿವಕುಮಾರ್, ರಾಜರಾಜೇಶ್ವರಿನಗರದಲ್ಲಿ ಮತದಾರರ ಗುರುತಿನ ಚೀಟಿಯಲ್ಲಿ ಅಕ್ರಮವಾಗಿದೆ. ಲೋಕಸಭಾ ಚುನಾವಣೆ ವೇಳೆ ಆ ಕ್ಷೇತ್ರದಲ್ಲಿ ನಮಗೆ ಹಿನ್ನಡೆಯಾಯಿತು. ಜತೆಗೆ ಚನ್ನಪಟ್ಟಣದಲ್ಲೂ ಅಕ್ರಮದ ಸಂದೇಹವಿದೆ. ಹೀಗಾಗಿ ರಾಹುಲ್ ಗಾಂಧಿ ಅವರ ಹೋರಾಟ ಯಶಸ್ವಿಯಾಗಲೇಬೇಕು. ಅವರು ನಮ್ಮ ಕೈ ಬಲಪಡಿಸಲು ಬರುತ್ತಿದ್ದು, ಮತ್ತೊಮ್ಮೆ ಅಧಿಕಾರಕ್ಕೆ ತರಲು ಅದು ಸಹಕಾರಿಯಾಗಲಿದೆ ಎಂದು ಹೇಳಿದರು.
ಇದೇ ವೇಳೆ ನಿಗಮ-ಮಂಡಳಿ ಅಧ್ಯಕ್ಷ, ಸದಸ್ಯರ ನೇಮಕದ ಕುರಿತು ಮಾತನಾಡಿದ ಡಿ.ಕೆ.ಶಿವಕುಮಾರ್, ನಿಗಮ-ಮಂಡಳಿಗಳಿಗೆ ಎರಡು ಲಾರಿಯಷ್ಟು ಅರ್ಜಿಗಳು ಬಂದಿವೆ. ಯಾರನ್ನು ಮಾಡಬೇಕು, ಬಿಡಬೇಕು ಎಂಬುದೇ ನನಗೆ ಮತ್ತು ಮುಖ್ಯಮಂತ್ರಿ ಅವರಿಗೆ ಸಂಕಟವಾಗಿದೆ. ನಾನು ಕಳುಹಿಸಿದ್ದ ಪಟ್ಟಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವರು ಆಕ್ಷೇಪ ಎತ್ತಿದ್ದಾರೆ ಎಂದರು.