ಕಾಂಗ್ರೆಸ್‌ನ ‘ಸಮರ್ಪಣಾ ಸಂಕಲ್ಪ’ಕ್ಕೆ ಮಳೆ ಕಾಟ: ಹೆಲಿಕಾಪ್ಟರ್‌ನಲ್ಲಿ ಬರಲಾಗದೆ ಕಾರಲ್ಲಿ ಬಂದ ಖರ್ಗೆ, ರಾಹುಲ್‌

| Published : May 21 2025, 12:42 AM IST

ಕಾಂಗ್ರೆಸ್‌ನ ‘ಸಮರ್ಪಣಾ ಸಂಕಲ್ಪ’ಕ್ಕೆ ಮಳೆ ಕಾಟ: ಹೆಲಿಕಾಪ್ಟರ್‌ನಲ್ಲಿ ಬರಲಾಗದೆ ಕಾರಲ್ಲಿ ಬಂದ ಖರ್ಗೆ, ರಾಹುಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ರಾಜ್ಯ ಕಾಂಗ್ರೆಸ್‌ ಸರ್ಕಾರದ ಎರಡು ವರ್ಷದ ಸಮರ್ಪಣಾ ಸಂಕಲ್ಪ ಸಮಾವೇಶಕ್ಕೆ ಮಳೆ ಸ್ವಲ್ಪ ಹೊತ್ತು ಕಾಡಿತು. ವೇದಿಕೆಯ ಎಡ, ಬಲ ಭಾಗದ ತುದಿಯಲ್ಲಿ ಕುಳಿತ ಜನರು ಚೇರ್‌ಗಳನ್ನು ತಲೆಯ ಮೇಲೆ ಹೊತ್ತು ಮಳೆ ನೀರಿನಿಂದ ರಕ್ಷಣೆ ಪಡೆದರು. ಮಳೆಯಿಂದಾಗಿ ಪೆಂಡಾಲ್‌ ಒಳಗೆ ನೀರು ಹರಿದು ಬಂತು.

ಬಿ.ರಾಮಪ್ರಸಾದ್ ಗಾಂಧಿ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ರಾಜ್ಯ ಕಾಂಗ್ರೆಸ್‌ ಸರ್ಕಾರದ ಎರಡು ವರ್ಷದ ಸಮರ್ಪಣಾ ಸಂಕಲ್ಪ ಸಮಾವೇಶಕ್ಕೆ ಮಳೆ ಸ್ವಲ್ಪ ಹೊತ್ತು ಕಾಡಿತು. ವೇದಿಕೆಯ ಎಡ, ಬಲ ಭಾಗದ ತುದಿಯಲ್ಲಿ ಕುಳಿತ ಜನರು ಚೇರ್‌ಗಳನ್ನು ತಲೆಯ ಮೇಲೆ ಹೊತ್ತು ಮಳೆ ನೀರಿನಿಂದ ರಕ್ಷಣೆ ಪಡೆದರು. ಮಳೆಯಿಂದಾಗಿ ಪೆಂಡಾಲ್‌ ಒಳಗೆ ನೀರು ಹರಿದು ಬಂತು.

ಸಮಾವೇಶದ ಮುಂಭಾಗದಲ್ಲಿ ಜರ್ಮನ್‌ ಟೆಂಟ್ ಹಾಕಿದ್ದರಿಂದ ಕಾರ್ಯಕ್ರಮಕ್ಕೆ ತೊಂದರೆಯಾಗಲಿಲ್ಲ. ಆದರೆ, ಕ್ರೀಡಾಂಗಣದ ಸುತ್ತಲೂ ಹಾಕಿದ ಶಾಮಿಯಾನದ ಕೆಳಭಾಗದಲ್ಲಿ ಕುಳಿತಿದ್ದ ಜನರು ಪರದಾಡಿದರು. ವೇದಿಕೆ ಕೆಳಭಾಗದಲ್ಲಿ ಮಳೆಯ ನೀರು ಹರಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳನ್ನು ವೇದಿಕೆಯಿಂದ ಕೆಳಗೆ ಇಳಿಸಲಾಯಿತು. ವೇದಿಕೆ ಮೇಲೆ ಹೆಚ್ಚು ಭಾರ ಬೀಳದಿರಲಿ ಎಂಬ ಕಾರಣಕ್ಕಾಗಿ ಕಂದಾಯ ಸಚಿವರು ಅಧಿಕಾರಿಗಳಿಗೆ ಈ ಕುರಿತು ಮನವಿ ಮಾಡಿದರು.

ಬೆಳಗ್ಗೆ 11.30ಕ್ಕೆ ವರುಣನ ಆರ್ಭಟ ಆರಂಭವಾಯಿತು. ಈ ಸಂದರ್ಭದಲ್ಲಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಪ್ರಕೃತಿ ನಮ್ಮನ್ನು ಹರಸುತ್ತಿದೆ. ಇದಕ್ಕಿಂತ ಇನ್ನೇನು ಭಾಗ್ಯ ಬೇಕು. ಯಾವತ್ತಾದರೂ ಬೆಳಗ್ಗೆ ಮಳೆ ಬರುವುದನ್ನು ನೋಡಿದ್ದೀರಾ ಎಂದು ಜನರನ್ನು ಪ್ರಶ್ನಿಸಿದರು. ಕಾರ್ಯಕ್ರಮಕ್ಕೆ ಸ್ವಲ್ಪ ತೊಂದರೆಯಾದರೂ ಪರವಾಗಿಲ್ಲ, ಜನರ ಬದುಕು ಮಳೆಯಿಂದ ಹಸನಾಗುತ್ತದೆ ಎಂದರು.

ನಂತರ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ ಸಹ ಮಳೆ ಬಂದಿದ್ದನ್ನು ಶುಭಶಕುನ ಎಂದರು. ಬಳಿಕ ತಮ್ಮ ಸರ್ಕಾರದ ಸಾಧನೆಗಳನ್ನು ಹೇಳಿದರು. ಸಚಿವ ಕೃಷ್ಣ ಬೈರೇಗೌಡರು ಮಾತನಾಡಿ, ಮಳೆಯಿಂದ ಇನ್ನೂ ಅನೇಕ ಜನರಿಗೆ ಸಭಾಂಗಣಕ್ಕೆ ಬರಲಾಗಲಿಲ್ಲ ಎಂದರು. ಒಟ್ಟಿನಲ್ಲಿ ಮಳೆಯನ್ನು ಶುಭಸೂಚಕ, ನಮಗೆ ಹರಸಲು ಬಂದಿದೆ ಎಂದು ಗಣ್ಯರು ಬಣ್ಣಿಸಿದರು.ರಸ್ತೆ ಮೂಲಕ ಸಮಾವೇಶಕ್ಕೆ ಬಂದ ಗಣ್ಯರು:

ಮೋಡ ಕವಿದ ವಾತಾವರಣ ಇದ್ದ ಹಿನ್ನೆಲೆಯಲ್ಲಿ ಜಿಂದಾಲ್ ವಿಮಾನ ನಿಲ್ದಾಣದಿಂದ ಹೊಸಪೇಟೆಗೆ ಹೆಲಿಕಾಪ್ಟರ್ ಮೂಲಕ ಬರಬೇಕಿದ್ದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಸ್ತೆ ಮಾರ್ಗವಾಗಿ ಆಗಮಿಸಿದರು.