ಸಾರಾಂಶ
ಕೋಲಾರ : ಕೇಂದ್ರ ಸರ್ಕಾರ ಹಾಗೂ ಬಿಜೆಪಿ, ಜೆಡಿಎಸ್ ಕುತಂತ್ರದಿಂದ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯರಿಗೆ ಶೋಕಾಸ್ ನೋಟಿಸ್ ನೀಡಿದ್ದು ರಾಜ್ಯಪಾಲರ ಈ ನಡೆ ಖಂಡಿಸಿ ರಾಜ್ಯ ಕುರುಬರ ಸಂಘ ಹಾಗೂ ಅಹಿಂದ ಸಮುದಾಯ ಆ.7 ರಂದು ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಂಜನಿ ಸೋಮಣ್ಣ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಏಕೈಕ ಅಹಿಂದ ಹಾಗೂ ದೀನದಲಿತರು, ಶೋಷಿತ ಸಮುದಾಯಗಳ ನಾಯಕರಾಗಿದ್ದಾರೆ. ಸಿದ್ದರಾಮಯ್ಯ ಅವರ 45 ವರ್ಷಗಳ ಕಾಲ ಸುರ್ಧೀಘ ರಾಜಕೀಯ ಜೀವನದಲ್ಲಿ ಅವರಿಗೆ ಒಂದೇ ಒಂದು ಕಪ್ಪು ಕಳಂಕವೂ ಇಲ್ಲ ಎಂದು ತಿಳಿಸಿದ್ದಾರೆ.
ರಾಜಕೀಯ ಜೀವನಕ್ಕೆ ಮಸಿ
ಸಿದ್ದರಾಮಯ್ಯನವರ ರಾಜಕೀಯ ಜೀವನಕ್ಕೆ ಮಸಿ ಬಳಿಯಲು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಡೆಸಿರುವ ದೊಡ್ಡ ಕುತಂತ್ರ ಭಾಗವಾಗಿ ರಾಜ್ಯಪಾಲರಿಂದ ಶೋಕಸ್ ನೋಟಿಸ್ ನೀಡಿರುವುದು. ರಾಜ್ಯಪಾಲರು ಯಾವ ಕಾರಣಕ್ಕೆ ಸಿದ್ದರಾಮಯ್ಯ ಅವರಿಗೆ ಶೋಕಸ್ ನೋಟಿಸ್ ನೀಡಿದ್ದಾರೆ. ಅದರಲ್ಲಿ ಏನೂ ಅರ್ಥವಿದೆ ಎಂಬುದನ್ನು ಜನರಿಗೆ ತಿಳಿಸಬೇಕು.
ಕಾನೂನು ಪ್ರಕಾರವೇ ಸಿದ್ದರಾಮಯ್ಯ ಅವರ ಪತ್ನಿ, ಅಣ್ಣ ಜಮೀನು ಖರೀದಿಸಿ ಸಿಎಂ ಸಿದ್ದರಾಮಯ್ಯ ಅವರ ಶ್ರೀಮತಿಗೆ ಗಿಪ್ಟ್ ಡಿಡಿ ಮಾಡಿಕೊಟ್ಟಿದ್ದಾರೆ. ನಂತರ ಜಮೀನನ್ನು ಮುಡಾ ಖರೀದಿಸಿ ಬದಲಿ ನಿವೇಶನ ಕೊಟ್ಟಿದೆ ಇದರಲ್ಲಿ ಯಾವುದೇ ತಪ್ಪಿಲ್ಲ. ಸಿದ್ದರಾಮಯ್ಯ ವಿರುದ್ಧ ಪಾದಯಾತ್ರೆ ನಡೆಸಲು ಹೊರಟಿರುವ ಬಿಜೆಪಿ ರಾಜ್ಯಾಧ್ಯಕ್ಷ, ಅವರ ತಂದೆ ಯಾಡಿಯೂರಪ್ಪ ಮುಖಾಂತರ ಚೆಕ್ ರೂಪದಲ್ಲಿ ಲಂಚ ಪಡೆದಿರುವ ವ್ಯಕ್ತಿ, ಅವರು ಈಗ ಯಾವ ನೈತಿಕತೆ ಇಟ್ಟುಕೊಂಡು ಪಾದಯಾತ್ರೆ ಮಾಡಲು ಹೊರಟಿದ್ದಾರೆ ಎಂದು ಸೋಮಣ್ಣ ಪ್ರಶ್ನಿಸಿದ್ದಾರೆ.
ಜನಪರ ಯೋಜನೆ ನೀಡಿದ ಸಿಎಂ
ಸಿದ್ದರಾಮಯ್ಯ ಶೋಷಿತ ಸಮುದಾಯಕ್ಕೆ ಅನೇಕ ಜನಪರ ಯೋಜನೆಗಳನ್ನು ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳ ಮೂಲಕ ದೀನದಲಿತರು, ಬಡವರಿಗೆ ನೆರವಾಗಿದ್ದಾರೆ. ಇಂತಹ ನಾಯಕರು ಅಧಿಕಾರದಲ್ಲಿ ಇದ್ದರೆ ತಮ್ಮ ಪಕ್ಷಗಳು ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕು ಎಂದು ಕುಮಾರಸ್ವಾಮಿ ಹಾಗೂ ಬಿಜೆಪಿ ಪಕ್ಷದ ನಾಯಕರು ಕುತಂತ್ರ ನಡೆಸುತ್ತಿದ್ದಾರೆ. ಇವರ ಕುತಂತ್ರಕ್ಕೆ ಜನರು ಮರುಳಾಗುವುದಿಲ್ಲ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಇಂದು ಮನವಿ ಸಲ್ಲಿಕೆ
ಸೋಮವಾರ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ, ಜೆಡಿಎಸ್, ಹಾಗೂ ರಾಜ್ಯಪಾಲರ ನಡೆ ವಿರುದ್ಧ ಜಿಲ್ಲಾಧಿಕಾರಿಗಳಿಗೆ ರಾಜ್ಯದ ಅಹಿಂದ ವರ್ಗದ ಸಮುದಾಯ ನಾಯಕರು ಮತ್ತು ಕುರುಬರ ಸಂಘ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.