ಸಾರಾಂಶ
ರಾಜ್ಯದಲ್ಲಿ ಒಟ್ಟು ಆರು ದಿನ 100ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಜು.16ಕ್ಕೆ ಬೆಂಗಳೂರಿಗೆ ಆಗಮಿಸುತ್ತಿದ್ದು, ಸಚಿವರೊಂದಿಗೆ ಒನ್ ಟು ಒನ್ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು : ರಾಜ್ಯದಲ್ಲಿ ಒಟ್ಟು ಆರು ದಿನ 100ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಜು.16ಕ್ಕೆ ಬೆಂಗಳೂರಿಗೆ ಆಗಮಿಸುತ್ತಿದ್ದು, ಸಚಿವರೊಂದಿಗೆ ಒನ್ ಟು ಒನ್ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಎರಡು ಹಂತದಲ್ಲಿ ಒಟ್ಟು ಆರು ದಿನಗಳ ಕಾಲ ಶಾಸಕರೊಂದಿಗೆ ಮುಖಾಮುಖಿ ಪ್ರತ್ಯೇಕ ಸಭೆ ನಡೆಸಿದ್ದ ಸುರ್ಜೇವಾಲ ಅವರು ಸಾಧನೆ, ಕ್ಷೇತ್ರದ ಸಮಸ್ಯೆಗಳು, ಅನುದಾನ, ಸಚಿವರೊಂದಿಗಿನ ಸಮಸ್ಯೆಗಳ ಬಗ್ಗೆ ವರದಿ ಪಡೆದು ಪ್ರತಿಯೊಂದನ್ನೂ ಲಿಖಿತವಾಗಿ ದಾಖಲಿಸಿಕೊಂಡಿದ್ದರು.
ಇದೀಗ ಜು.16 ರಂದು ಮೂರನೇ ಹಂತದ ಸಭೆಯಲ್ಲಿ ಸಚಿವರೊಂದಿಗೆ ಮುಖಾಮುಖಿ ಆಗಲಿದ್ದಾರೆ. ಪ್ರತಿಯೊಬ್ಬ ಸಚಿವರೊಂದಿಗೂ ಮುಖಾಮುಖಿ ಚರ್ಚೆ ನಡೆಸಿ ವೈಯಕ್ತಿಕವಾಗಿ ಸಚಿವರ ಸಾಧನೆಗಳೇನು? ಮುಂದಿನ ಗುರಿಗಳೇನು? ಈವರೆಗೆ ಗುರಿ ಹಾಗೂ ಉದ್ದೇಶಿತ ಯೋಜನೆಗಳು ಎಷ್ಟು ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿವೆ. ಉಳಿದವು ಬಾಕಿ ಉಳಿಯಲು ಕಾರಣಗಳೇನು? ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸೇರಿ ಇಲಾಖೆಗಳಲ್ಲಿ ಯಾರಾದರೂ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರಾ? ಎಂಬ ಬಗ್ಗೆ ಪ್ರಶ್ನೆ ಮಾಡಿ ಉತ್ತರ ಪಡೆಯಲಿದ್ದಾರೆ.
ಇದೇ ವೇಳೆ ಶಾಸಕರು ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ನೀಡಿರುವ ದೂರುಗಳ ಬಗ್ಗೆಯೂ ಸ್ಪಷ್ಟನೆ ಕೋರಲಿದ್ದಾರೆ. ಉಸ್ತುವಾರಿ ಸಚಿವರ ಜಿಲ್ಲೆಯ ಪ್ರತಿಯೊಬ್ಬ ಶಾಸಕರ ದೂರುಗಳ ಬಗ್ಗೆಯೂ ಸ್ಪಷ್ಟೀಕರಣ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿಗಮ-ಮಂಡಳಿ ಬಗ್ಗೆ ಚರ್ಚೆ?:
ದೆಹಲಿಯ ಕರ್ನಾಟಕ ಭವನದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜು.16ರಂದು ಸಂಜೆ ಸುರ್ಜೇವಾಲಾ ಬೆಂಗಳೂರಿಗೆ ಬರುತ್ತಿದ್ದು, ಆ ಸಂದರ್ಭದಲ್ಲಿ ನಿಗಮ, ಮಂಡಳಿಗಳ ನೇಮಕಕ್ಕೆ ಸಂಬಂಧಿಸಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಜು.16 ರಂದು ನಿಗಮ-ಮಂಡಳಿ ನೇಮಕದ ಬಗ್ಗೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸುವ ಸಾಧ್ಯತೆಯಿದೆ. ಖಾಲಿ ಇರುವ 8 ನಿಗಮ-ಮಂಡಳಿಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸೇರಿ ವಿವಿಧ ಸದಸ್ಯರ ನೇಮಕದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆಯೇ? ಎಂಬ ಕುತೂಹಲ ಮೂಡಿದೆ.