ಸಾರಾಂಶ
ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಹಾಗೂ ಸಿಐಡಿ ಪೊಲೀಸರು ನಡೆಸಿರುವ ತನಿಖೆಯನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಬೆಂಗಳೂರು : ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಹಾಗೂ ಸಿಐಡಿ ಪೊಲೀಸರು ನಡೆಸಿರುವ ತನಿಖೆಯನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ಆದರೆ, ಇದೇ ಪ್ರಕರಣ ಸಂಬಂಧ ಯಡಿಯೂರಪ್ಪ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್, ಆ ನಂತರ ಸಿಐಡಿ ತನಿಖೆ ನಡೆಸಿ ಸಲ್ಲಿಸಿರುವ ಆರೋಪ ಪಟ್ಟಿ ಹಾಗೂ ಅದನ್ನು ಆಧರಿಸಿ ವಿಚಾರಣಾ ನ್ಯಾಯಾಲಯ ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿರುವ ಕ್ರಮ (ಕಾಗ್ನಿಜೆನ್ಸ್ ತೆಗೆದುಕೊಂಡ ಆದೇಶ) ರದ್ದುಪಡಿಸಬೇಕು ಮತ್ತು ಪ್ರಕರಣದಲ್ಲಿ ತಮಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ಯಡಿಯೂರಪ್ಪ ಪ್ರತ್ಯೇಕ ಎರಡು ಅರ್ಜಿ ಸಲ್ಲಿಸಿದ್ದರು.
ಅರ್ಜಿಗಳನ್ನು ಭಾಗಶಃ ಪುರಸ್ಕರಿಸಿರುವ ಹೈಕೋರ್ಟ್, ವಿಚಾರಣಾ ನ್ಯಾಯಾಲಯವು ಪ್ರಕರಣ ಸಂಬಂಧ ಕಾಗ್ನಿಜೆನ್ಸ್ ತೆಗೆದುಕೊಂಡಿರುವುದನ್ನು ರದ್ದುಪಡಿಸಿದೆ. ಆದರೆ, ಈ ಆದೇಶದಲ್ಲಿ ಮಾಡಿರುವ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ಅಂತಿಮ ವರದಿಗೆ ಸಂಬಂಧಿಸಿ ಆದೇಶ ಮಾಡಲು ಪ್ರಕರಣವನ್ನು ಮತ್ತೆ ಸಕ್ಷಮ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶಿಸಿದೆ. ಇದೇ ವೇಳೆ ಪ್ರಕರಣದಲ್ಲಿ ಅಪರಾಧ, ತನಿಖೆ ಮತ್ತು ಅಂತಿಮ ವರದಿ ಎಲ್ಲವೂ ಹಾಗೆಯೇ ಉಳಿಯಲಿದೆ ಎಂದು ಸ್ಪಷ್ಟಪಡಿಸಿದೆ.
ಇನ್ನುಳಿದಂತೆ ವಿಚಾರಣಾ ನ್ಯಾಯಾಲಯವು ಕಾಗ್ನಿಜೆನ್ಸ್ ತೆಗೆದುಕೊಂಡಿರುವುದು ಹೊರತುಪಡಿಸಿ ಅರ್ಜಿಯಲ್ಲಿ ಯಡಿಯೂರಪ್ಪ ಪರ ವಕೀಲರು ಮತ್ತು ಸಿಬಿಐ ಪರ ವಿಶೇಷ ಸರ್ಕಾರಿ ಅಭಿಯೋಜಕರು ಎತ್ತಿರುವ ಯಾವುದೇ ವಾದಗಳಿಗೆ ಉತ್ತರಿಸಿಲ್ಲ. ಅವರ ಎಲ್ಲಾ ವಾದಗಳನ್ನು ಮುಕ್ತವಾಗಿರಿಸಲಾಗಿದೆ. ಅರ್ಜಿದಾರರು ಸೂಕ್ತ ಸಂದರ್ಭದಲ್ಲಿ ಸೂಕ್ತ ವೇದಿಕೆಯಲ್ಲಿ ಪರಿಹಾರ ಪಡೆಯಬಹುದಾಗಿದೆ. ಹಾಗೆಯೇ, ಪ್ರಕರಣದ ಅರ್ಹತೆ ಮೇಲೆ ಯಾವುದೇ ಆದೇಶ ಮಾಡಿಲ್ಲ. ಕೇವಲ ತಾಂತ್ರಿಕ ಅಂಶಗಳ ಬಗ್ಗೆ ಉತ್ತರಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ಇದರಿಂದ ಯಡಿಯೂರಪ್ಪ ಅವರ ವಿರುದ್ಧದ ಪೋಕ್ಸೋ ಪ್ರಕರಣವು ಮಂದುವರಿಯಲಿದೆ. ವಿಚಾರಣಾ ನ್ಯಾಯಾಲಯದಲ್ಲಿ ಯಡಿಯೂರಪ್ಪ ಅವರ ಕಾನೂನು ಹೋರಾಟ ಮುಂದುವರಿಯಲಿದೆ. ಆದರೆ, ನಿರಿಕ್ಷಣಾ ಜಾಮೀನು ಮಂಜೂರು ಮಾಡಿರುವುದರಿಂದ ಸದ್ಯ ಬಂಧನದ ಭೀತಿ ಇಲ್ಲವಾಗಿದ್ದು, ಯಡಿಯೂರಪ್ಪ ಅವರು ಅಲ್ಪಮಟ್ಟಿಗೆ ನಿರಾಳರಾಗಿದ್ದಾರೆ.
ಮತ್ತೊಂದೆಡೆ ಇದೇ ಪ್ರಕರಣದಲ್ಲಿ ಇತರೆ ಆರೋಪಿಗಳಾಗಿರುವ ವೈ.ಎಂ.ಅರುಣ, ರುದ್ರೇಶ ಮರಳಸಿದ್ದಯ್ಯ ಮತ್ತು ಜಿ.ಮರಿಸ್ವಾಮಿ ಅವರ ವಿರುದ್ಧ ವಿಚಾರಣಾ ನ್ಯಾಯಾಲಯ ತೆಗೆದುಕೊಂಡಿರುವ ಕಾಗ್ನಿಜೆನ್ಸ್ ಆದೇಶ ಮುಂದುವರಿಯಲಿದೆ ಎಂದು ಪೀಠ ಹೇಳಿದೆ.
ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 161 ಅಡಿ (ತನಿಖಾಧಿಕಾರಿಗಳ ಮುಂದೆ ಹೇಳಿಕೆ ದಾಖಲು) ಮತ್ತು 164 (ವಿಚಾರಣಾ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲು) ಅಡಿ ಸಂತ್ರಸ್ತೆ ಹೇಳಿಕೆ ದಾಖಲಿಸಿದ ಬಳಿಕ ಅತ್ಯಪರೂಪದ ಸಂದರ್ಭದಲ್ಲಿ ಮಾತ್ರ ಪ್ರಕರಣವನ್ನು ರದ್ದುಪಡಿಸಬಹುದಾಗಿದೆ. ಹೀಗಾಗಿ, ಈ ಹಂತದಲ್ಲಿ ಪ್ರಕರಣ ರದ್ದುಗೊಳಿಸುವ ಅಧಿಕಾರ ಚಲಾಯಿಸಲಾಗದು ಎಂದು ಪೀಠ ಆದೇಶಲ್ಲಿ ಅಭಿಪ್ರಾಯಪಟ್ಟಿದೆ.
ಪ್ರಕರಣವೇನು?:
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮೇಲೆ ಸಂತ್ರಸ್ತೆಯ ತಾಯಿ ನೀಡಿದ ದೂರು ಆಧರಿಸಿ ಸದಾಶಿವನಗರ ಠಾಣಾ ಪೊಲೀಸರು 2024ರ ಮಾ.14ರಂದು ಯಡಿಯೂರಪ್ಪ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ನಂತರ ಪ್ರಕರಣವನ್ನು ಸಿಐಡಿಯ ಎಸ್‌ಐಟಿ ತನಿಖೆಗೆ ಸರ್ಕಾರ ಆದೇಶಿಸಿತ್ತು.
ಪ್ರಕರಣ ಸಂಬಂಧ ತಮ್ಮ ವಿರುದ್ಧದ ಎಫ್‌ಐಆರ್ ರದ್ದುಪಡಿಸಬೇಕು ಮತ್ತು ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ಯಡಿಯೂರಪ್ಪ ಅವರು 2024ರ ಜೂ.12ರಂದು ಹೈಕೊರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಆ ಅರ್ಜಿಯನ್ನು ಜೂ.14ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಪ್ರಕರಣದ ತನಿಖೆಗೆ ತಡೆ ನೀಡಲು ನಿರಾಕರಿಸಿತ್ತು. ಆದರೆ, ಯಡಿಯೂರಪ್ಪ ಅವರನ್ನು ಬಂಧಿಸದಂತೆ ಸಿಐಡಿ ತನಿಖಾಧಿಕಾರಿಗಳಿಗೆ ಸೂಚಿಸಿತ್ತು. ನಂತರ ಪ್ರಕರಣದ ಕುರಿತು ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಖುದ್ದು ಹಾಜರಾಗುವುದರಿಂದ ಯಡಿಯೂರಪ್ಪ ಅವರಿಗೆ ವಿನಾಯ್ತಿ ನೀಡಿ, 2024ರ ಜು.12ರಂದು ಹೈಕೋರ್ಟ್ ಮತ್ತೊಂದು ಆದೇಶ ಮಾಡಿತ್ತು. ಅಂತಿಮವಾಗಿ 2025ರ ಜ.17ರಂದು ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಆ ಕಾಯ್ದಿರಿಸಿದ ತೀರ್ಪನ್ನು ಶುಕ್ರವಾರ ಪ್ರಕಟಿಸಿದೆ.