ಸಾರಾಂಶ
ಬೆಂಗಳೂರು : ವಿಶ್ವಗುರು ಬಸವಣ್ಣ ಅವರನ್ನು ಸ್ಮರಿಸಬೇಕಾಗಿರುವುದು ಪ್ರತಿಯೊಬ್ಬ ಕನ್ನಡಿಗರ ಹಾಗೂ ಭಾರತೀಯನ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಸವ ಸಮಿತಿಯು ಬುಧವಾರ ಬಸವೇಶ್ವರ ವೃತ್ತದಲ್ಲಿ ಆಯೋಜಿಸಿದ್ದ ‘ವಿಶ್ವ ಬಸವ ಜಯಂತಿ’ ಕಾರ್ಯಕ್ರಮದಲ್ಲಿ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಬಸವಣ್ಣನವರು ಕೇವಲ ಸಾಮಾಜಿಕ ಕ್ರಾಂತಿ ಮಾಡಿದವರಲ್ಲ. ಸಮಾಜದ ಪರಿವರ್ತನೆಗಾಗಿ ಶಾಶ್ವತವಾಗಿ ಉಳಿಯುವ, ಜನರ ಮನಸ್ಸಿನಲ್ಲಿ ಅಚ್ಚಳಿಯದೆ ನೆಲೆಸುವ ಕಾರ್ಯಗಳನ್ನು ಮಾಡಿದ್ದಾರೆ. ಅವರ ಕೊಡುಗೆಯನ್ನು ಸ್ಮರಿಸುವ ಹಾಗೂ ಕೃತಜ್ಞತೆಯನ್ನು ಸಲ್ಲಿಸುವ ಉದ್ದೇಶದಿಂದ ನಮ್ಮ ಸರ್ಕಾರ ಅವರನ್ನು ‘ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದೆ ಎಂದು ತಿಳಿಸಿದರು.
ನಂತರ ಸಮಿತಿಯ ಸಭಾಂಗಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಬೇಲಿಮಠದ ಶಿವರುದ್ರ ಸ್ವಾಮೀಜಿ ಅವರು, ಬಸವಣ್ಣನವರ ತತ್ವ ಮಾತನಾಡುವುದಲ್ಲ, ಕಾಯಕವೇ ಆಗಿತ್ತು. ಇವತ್ತಿನ ಸಮಾಜಕ್ಕೆ ಬಸವಣ್ಣನವರ ಅಭಿಮಾನಿಗಳಿಗಿಂತ ಬಸವಣ್ಣನವರ ಅನುಯಾಯಿಗಳ ಅಗತ್ಯತೆ ಹೆಚ್ಚಾಗಿದೆ. ವಚನ ಪ್ರಜ್ಞೆ ಜಾಗೃತಗೊಂಡು ಪ್ರಜ್ಞಾಪ್ರಭುತ್ವ ಅರ್ಥಪೂರ್ಣವಾಗಿ ಜಾರಿಯಾಗಬೇಕು ಎಂದರು. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರು ಮಾತನಾಡಿ, ದಯೆಯಿಲ್ಲದ ಧರ್ಮ ಯಾವುದಯ್ಯ ಎಂಬ ಬಸವಣ್ಣನವರ ತತ್ವವನ್ನು ಜಗತ್ತು ಅಳವಡಿಸಿಕೊಂಡಿದ್ದರೆ, ಇಂದು ಪ್ರಪಂಚದಲ್ಲಿ ಯುದ್ಧ, ಹಿಂಸೆ, ಭಯೋತ್ಪಾದನೆಯಂತಹ ಘಟನೆಗಳು ನಡೆಯುತ್ತಿರಲಿಲ್ಲ, ಲಕ್ಷಾಂತರ ಜನ ಪ್ರಾಣವನ್ನೂ ಕಳೆದುಕೊಳ್ಳುತ್ತಿರಲಿಲ್ಲ. ಇಂತಹ ದುಃಖದ ಸಂದರ್ಭದಲ್ಲಿ ನಮ್ಮ ಸಮಿತಿ ಪ್ರಧಾನಮಂತ್ರಿಯವರ ಪರಿಹಾರ ನಿಧಿಗೆ ₹5 ಲಕ್ಷ ದೇಣಿಗೆ ನೀಡಲು ನಿರ್ಧರಿಸಿದೆ ಎಂದು ತಿಳಿಸಿದರು.
ಪ್ರಶಸ್ತಿ ಪ್ರದಾನ:
ಕಾರ್ಯಕ್ರಮದಲ್ಲಿ ಬಸವ ಸಮಿತಿಯ ಟ್ರಸ್ಟ್ ಸದಸ್ಯ ಕೆ.ಮೋಹನ್‌ದೇವ ಆಳ್ವ ಅವರಿಗೆ ‘ದಾಸೋಹರತ್ನ’ ಪ್ರಶಸ್ತಿ, ಚಿತ್ರದುರ್ಗದ ತೋಂಟಪ್ಪ ಉತ್ತಂಗಿ ಅವರು ವಚನ ಸಂಗೀತ ಮತ್ತು ಕಲೆಗೆ ಸಲ್ಲಿಸುತ್ತಿರುವ ಸೇವೆಗಾಗಿ ಪ್ರಶಸ್ತಿ ಹಾಗೂ ₹1 ಲಕ್ಷ ಪುರಸ್ಕಾರ ನೀಡಿ ಗೌರವಿಸಲಾಯಿತು. ಜತೆಗೆ, ಬಸವ ಸಮಿತಿ ಪ್ರಕಟಿಸಿರುವ ಕೃತಿಗಳ ಲೋಕಾರ್ಪಣೆ ಮಾಡಲಾಯಿತು.ಈ ವೇಳೆ ಬಸವ ಸಮಿತಿಯ ಉಪಾಧ್ಯಕ್ಷೆ ಲೀಲಾದೇವಿ ಆರ್.ಪ್ರಸಾದ್, ಹನುಮಂತರೆಡ್ಡಿ ಮುದ್ನಾಳ್, ಮಾಜಿ ಸಚಿವೆ ರಾಣಿ ಸತೀಶ್, ಸಚಿವ ಎಂ.ಬಿ.ಪಾಟೀಲ್ ಅವರ ವಿಶೇಷ ಕರ್ತವ್ಯಾಕಾರಿ ಮಹಾಂತೇಶ್ ಬಿರಾದರ್ ಉಪಸ್ಥಿತರಿದ್ದರು.
ಬಸವಣ್ಣನವರ ಮೂರ್ತಿ ನಿರ್ಮಾಣಕ್ಕೆ ಎಂಬಿಪಾ ಹಣ:
ಕುಂಬಳಗೋಡಿನ ಬಳಿ ಮಾತೆ ಮಹಾದೇವಿ ಅವರು ಕೈಗೊಂಡಿದ್ದ ಬೃಹತ್ ಬಸವಣ್ಣನವರ ಮೂರ್ತಿ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದ್ದು, ನಿರ್ಮಾಣ ಪೂರ್ಣಗೊಳ್ಳಲು ಸಚಿವ ಎಂ.ಬಿ.ಪಾಟೀಲ್ ಅವರು ಅಗತ್ಯವಿರುವ ಹಣ ನೀಡುವುದಾಗಿ ಭರವಸೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದ ಸಚಿವ ಎಂ.ಬಿ.ಪಾಟೀಲ್ ಅವರ ವಿಶೇಷ ಕರ್ತವ್ಯಾಧಿಕಾರಿ ಮಹಾಂತೇಶ್ ಬಿರಾದರ್, ಮಾತೆ ಮಹಾದೇವಿ ಅವರು ಲಿಂಗೈಕ್ಯರಾದ ನಂತರ ಮೂರ್ತಿ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತುಹೋಗಿರುವುದನ್ನು ಗಮನಿಸಿದ ಎಂ.ಬಿ.ಪಾಟೀಲರು ಮೂರ್ತಿ ನಿರ್ಮಾಣ ಪೂರ್ಣಗೊಳಿಸಲು ಹಣ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು. ಕೂಡಲ ಸಂಗಮದಲ್ಲಿನ ಬಸವಣ್ಣನವರ ಐಕ್ಯ ಮಂಟಪವನ್ನು ಎಲ್ಲ ವಯೋಮಾನದವರೂ ಸುಲಭವಾಗಿ ಕ್ರಮಿಸಲು ಅನುಕೂಲವಾಗುವಂತೆ ಮರುವಿನ್ಯಾಸಗೊಳಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.