ಬಿಜೆಪಿ ಶಾಸಕರ ಅಮಾನತು ವಾಪಸ್‌ ಪಡೆಯಿರಿ - ಸ್ಪೀಕರ್‌ ಖಾದರ್‌ಗೆ ಯತ್ನಾಳ್‌, ಅಶೋಕ್‌ ಪತ್ರ

| N/A | Published : Apr 02 2025, 12:11 PM IST

R Ashok

ಸಾರಾಂಶ

ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದರೂ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಅವರು ಅಮಾನತುಗೊಂಡಿರುವ ಪಕ್ಷದ 18 ಶಾಸಕರ ಪರ ಬ್ಯಾಟಿಂಗ್‌ ಮಾಡಿದ್ದಾರೆ. ಈ ಸಂಬಂಧ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರಿಗೆ ಪತ್ರ ಬರೆದು ಅಮಾನತು ಆದೇಶ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

  ಬೆಂಗಳೂರು : ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದರೂ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಅವರು ಅಮಾನತುಗೊಂಡಿರುವ ಪಕ್ಷದ 18 ಶಾಸಕರ ಪರ ಬ್ಯಾಟಿಂಗ್‌ ಮಾಡಿದ್ದಾರೆ. ಈ ಸಂಬಂಧ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರಿಗೆ ಪತ್ರ ಬರೆದು ಅಮಾನತು ಆದೇಶ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

ಈ ನಡುವೆ ಯತ್ನಾಳ್ ಪತ್ರ ಬರೆದ ಕೆಲಗಂಟೆಗಳ ಬಳಿಕ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಸಹ ಸಭಾಧ್ಯಕ್ಷರಿಗೆ ಪತ್ರ ಬರೆದು ಬಿಜೆಪಿ ಶಾಸಕರ ಅಮಾನತು ಆದೇಶ ಮರುಪರಿಶೀಲನೆ ನಡೆಸುವಂತೆ ಕೋರಿದ್ದಾರೆ.

ಬಹುತೇಕರು ಹೊಸಬರು:

ಸಭಾಧ್ಯಕ್ಷರಿಗೆ ಪತ್ರ ಬರೆದಿರುವ ಯತ್ನಾಳ್, ವಿಧಾನಸಭೆಯ ಒಟ್ಟಾರೆ ಕಾರ್ಯನಿರ್ವಹಣೆಯಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳೆರಡೂ ಆರೋಗ್ಯಕರ ಚರ್ಚೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ವಿಧಾನಸಭೆ ಆವರಣದಲ್ಲಿ ನಡೆದ ಪ್ರತಿಭಟನೆಗಳು ಜನರ ಧ್ವನಿಯನ್ನು ಪ್ರತಿನಿಧಿಸುತ್ತವೆ. ಅದರ ಜತೆಗೆ ಸದನದಲ್ಲಿ ಸಭ್ಯತೆ ಕಾಪಾಡಿಕೊಳ್ಳುವುದೂ ಮುಖ್ಯ. ಆದರೆ, ಅಮಾನತುಗೊಂಡಿರುವ 18 ಶಾಸಕರ ಪೈಕಿ ಬಹುತೇಕರು ಮೊದಲ ಬಾರಿಗೆ ಶಾಸಕರಾದವರು. ದೀರ್ಘಾವಧಿಯ ಅಮಾನತು ಅವರು ಸೇವೆ ಸಲ್ಲಿಸುವ ಕ್ಷೇತ್ರಗಳ ಪ್ರಾತಿನಿಧ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಶಾಸಕರು ಕಳೆದ ಕೆಲ ದಿನಗಳಿಂದ ಸಾಕಷ್ಟು ಒತ್ತಡ ಮತ್ತು ಪರಿಣಾಮಗಳನ್ನು ಎದುರಿಸಿದ್ದಾರೆ. ಹೀಗಾಗಿ ಅಮಾನತು ಅವಧಿಯನ್ನು ಮರು ಪರಿಶೀಲಿಸಬೇಕು ಮತ್ತು ಪರ್ಯಾಯ ಶಿಸ್ತು ಕ್ರಮಗಳತ್ತ ನೋಡಬೇಕು. ಅಮಾನತು ರದ್ದುಪಡಿಸುವುದರಿಂದ ಪ್ರಜಾಪ್ರಭುತ್ವ ತತ್ವಗಳಿಗೆ ವಿಧಾನಸಭೆಯ ಬದ್ಧತೆ ಪುನರುಚ್ಚರಿಸಿದಂತಾಗುತ್ತದೆ. ನಮ್ಮ ಮನವಿಯನ್ನು ಪರಿಗಣಿಸಿ, ಪ್ರಜಾಪ್ರಭುತ್ವ ಮನೋಭಾವ ಮತ್ತು ಶಾಸಕಾಂಗ ನ್ಯಾಯವನ್ನು ಎತ್ತಿಹಿಡಿಯುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸ್ಪೀಕರ್ ಅವರನ್ನು ಕೋರಿದ್ದಾರೆ.

ಕೇಳಿದ್ದರೆ ವಿವರಣೆ ಕೊಡುತ್ತಿದ್ದೆವು-ಅಶೋಕ್‌:

ಈ ನಡುವೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ವಿಧಾನಮಂಡಲದ ಉಭಯ ಸದನಗಳು ಪ್ರಜಾಪ್ರಭುತ್ವದ ದೇಗುಲಗಳಾಗಿದ್ದು, ಸಭಾಧ್ಯಕ್ಷರು ಮತ್ತು ಸಭಾಪತಿ ಸ್ಥಾನ ಗೌರವಯುತವಾಗಿದೆ. ಪ್ರತಿಭಟನೆ ವೇಳೆ ನಡೆದ ಘಟನೆ ಉದ್ದೇಶಪೂರ್ವಕವಾದುದಲ್ಲ. ಅಲ್ಲದೆ, ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರುವ ಉದ್ದೇಶವೂ ಯಾವುದೇ ಶಾಸಕರಿಗೆ ಇರಲಿಲ್ಲ. ಸಂಸದೀಯ ಚರ್ಚೆಯ ಗುಣಮಟ್ಟ, ಭಾಷೆಯ ಬಳಕೆ, ಕಲಾಪಗಳಲ್ಲಿನ ನಿಯಮಗಳ ಪಾಲನೆ ಇತ್ಯಾದಿಗಳೆಲ್ಲವೂ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಬೇಸರದ ಸಂಗತಿ ಎಂಬುದು ಅರ್ಥವಾಗುತ್ತದೆ ಎಂದಿರುವ ಅವರು, ಘಟನೆ ನಡೆದ ಬಳಿಕ ಪಕ್ಷದ ಎಲ್ಲಾ ಶಾಸಕರನ್ನು ತಮ್ಮ ಕೊಠಡಿಗೆ ಕರೆದು ವಿವರಣೆ ಕೇಳಿದ್ದರೆ ನಾವು ಖಂಡಿತ ಘಟನೆ ಬಗ್ಗೆ ಸ್ಪಷ್ಟೀಕರಣ ಕೊಡುತ್ತಿದ್ದೆವು. ಆದರೆ ಅದಕ್ಕೆ ಅವಕಾಶ ಸಿಗಲಿಲ್ಲ. ಸಭಾಧ್ಯಕ್ಷರ ಪೀಠದಿಂದ ಕಠೋರ ನಿರ್ಧಾರ ಪ್ರಕಟವಾಗಿದೆ ಎಂದರು.

ಬಿಜೆಪಿಗರ ಪ್ರತಿಭಟನೆ ಸಭಾಧ್ಯಕ್ಷರ ವಿರುದ್ಧ ಇರಲಿಲ್ಲ. ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಅನುಗುಣವಾಗಿ ಸದನದ ಗೌರವ ಮತ್ತು ಘನತೆ ಉಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕರ ಅಮಾನತು ಆದೇಶವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಮತ್ತು ಅಮಾನತು ಆದೇಶವನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.