ಸಾರಾಂಶ
ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಸದ ಈ.ತುಕಾರಾಂ ಅವರ ಪತ್ನಿ ಅನ್ನಪೂರ್ಣ ಅವರ ಹೆಸರನ್ನು ಪಕ್ಷದ ವರಿಷ್ಠರು ಅಂತಿಮಗೊಳಿಸಿದ್ದು, ಬಹುತೇಕ ಮಂಗಳವಾರ ಘೋಷಣೆಯಾಗಲಿದೆ.
ಮಂಜುನಾಥ ಕೆ.ಎಂ.
ಬಳ್ಳಾರಿ : ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಸದ ಈ.ತುಕಾರಾಂ ಅವರ ಪತ್ನಿ ಅನ್ನಪೂರ್ಣ ಅವರ ಹೆಸರನ್ನು ಪಕ್ಷದ ವರಿಷ್ಠರು ಅಂತಿಮಗೊಳಿಸಿದ್ದು, ಬಹುತೇಕ ಮಂಗಳವಾರ ಘೋಷಣೆಯಾಗಲಿದೆ.
ಉಪ ಚುನಾವಣೆಗೆ ಪಕ್ಷದ ಅಭ್ಯರ್ಥಿಯನ್ನಾಗಿ ಅನ್ನಪೂರ್ಣ ಅವರ ಹೆಸರನ್ನು ಪಕ್ಷದ ಹೈಕಮಾಂಡ್ ಸೂಚಿಸಿದ್ದು, ಸಂಸದ ಈ.ತುಕಾರಾಂ, ಪತ್ನಿ ಅನ್ನಪೂರ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸೋಮವಾರ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷರು ಕ್ಷೇತ್ರದಲ್ಲಿ ಚುನಾವಣೆಗೆ ಸಿದ್ಧತೆ ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಕುಟುಂಬ ರಾಜಕಾರಣಕ್ಕೆ ಮಣೆ:
ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿಯನ್ನಾಗಿ ಬಂಗಾರು ಹನುಮಂತು ಅವರನ್ನು ಕಣಕ್ಕಿಳಿಸಲಾಗಿದೆ. ಈ ಮಧ್ಯೆ, ಸಂಡೂರಿನಲ್ಲಿ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಬೇಕು. ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆಗೆ ಜಗ್ಗದ ಕಾಂಗ್ರೆಸ್ ಹೈಕಮಾಂಡ್, ತುಕಾರಾಂ ಕುಟುಂಬಕ್ಕೆ ಮಣೆ ಹಾಕಿದೆ.
ಸಂಡೂರು ಉಪ ಚುನಾವಣೆಗೆ ಸಂಸದ ಈ.ತುಕಾರಾಂ ಅವರ ಪತ್ನಿ ಅನ್ನಪೂರ್ಣ ಅಥವಾ ಪುತ್ರಿ ಸೌಪರ್ಣಿಕಾ ಹೆಸರು ಕೇಳಿ ಬಂದಿತ್ತು. ಚುನಾವಣೆ ಘೋಷಣೆ ಮುನ್ನ ಸಂಡೂರಿನಲ್ಲಿ ಜರುಗಿದ ಸಾಧನಾ ಸಮಾವೇಶದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಕಾರಾಂ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವ ಸುಳಿವು ನೀಡಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಸತತ ನಾಲ್ಕು ಬಾರಿ ತುಕಾರಾಂ ಅವರು ಗೆದ್ದಿದ್ದು, ಸಚಿವರಾಗಿಯೂ ಅಧಿಕಾರ ಅನುಭವಿಸಿದ್ದಾರೆ. ಹೀಗಾಗಿ, ಬೇರೆ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಬೇಕು ಎಂದು ಪಕ್ಷದ ಸ್ಥಳೀಯ ನಾಯಕರು ಒತ್ತಾಯಿಸಿದ್ದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಸಚಿವ ಸಂತೋಷ್ ಲಾಡ್ ಬೆಂಬಲಿಗ ತುಮಟಿ ಲಕ್ಷ್ಮಣ ಕಾಂಗ್ರೆಸ್ ಟಿಕೆಟ್ ಗೆ ಪಟ್ಟು ಹಿಡಿದಿದ್ದರು. ಹೀಗಾಗಿ, ಕೈ ಪಕ್ಷದಲ್ಲಿ ಬಂಡಾಯದ ಸೂಚನೆ ಕಂಡು ಬಂದಿತ್ತು. ಲಕ್ಷ್ಮಣ ಅವರನ್ನು ಮನವೊಲಿಸುವಲ್ಲಿ ಸಂತೋಷ್‌ಲಾಡ್ ಸಫಲರಾಗಿದ್ದು, ನಿರೀಕ್ಷೆಯಂತೆಯೇ ಸಂಸದ ಈ.ತುಕಾರಾಂ ಅವರ ಪತ್ನಿ ಅನ್ನಪೂರ್ಣ ಅವರಿಗೆ ಪಕ್ಷದ ಟಿಕೆಟ್ ದಕ್ಕಿದೆ.
ಚುನಾವಣೆ ಜಿದ್ದಾಜಿದ್ದಿಗೆ ಸಾಕ್ಷಿ:
ಸಂಡೂರು ಉಪ ಚುನಾವಣೆ ಎರಡು ರಾಷ್ಟ್ರೀಯ ಪಕ್ಷಗಳ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿದೆ. ಸಂಡೂರು ಕ್ಷೇತ್ರದ ಬಿಗಿ ಹಿಡಿತ ಹೊಂದಿರುವ ಸಚಿವ ಸಂತೋಷ್‌ಲಾಡ್ ಹಾಗೂ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಗೊಂಡಿರುವ ತುಕಾರಾಂ ಅವರನ್ನು ಸಂಡೂರು ಕಾಂಗ್ರೆಸ್‌ನ ಜೋಡೆತ್ತುಗಳು ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಈಚೆಗೆ ಸಂಡೂರಿಗೆ ಆಗಮಿಸಿದ್ದ ಸಿಎಂ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವ ಸಂತೋಷ್ ಲಾಡ್ ಅವರ ಸಂಘಟನಾ ಚಾತುರ್ಯವನ್ನು ಹಾಡಿ ಹೊಗಳಿದ್ದರು. ಉಪ ಚುನಾವಣೆಗೆ ನಾವಿಬ್ಬರೂ ಬರುತ್ತೇವೆ. ಚುನಾವಣೆಯ ಹೊಣೆ ಹೊತ್ತಿರುವ ಶ್ರೀರಾಮುಲು, ಜನಾರ್ದನ ರೆಡ್ಡಿ ಸಂಡೂರಿನಲ್ಲಿಯೇ ವಾಸ್ತವ್ಯ ಹೂಡಿದರೂ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಸಿಎಂ ಕಚೇರಿಯಿಂದ ಅಭ್ಯರ್ಥಿ ಹೆಸರು ಅಂತಿಮ
ಮುಖ್ಯಮಂತ್ರಿ ಕಚೇರಿಯಿಂದ ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಅಂತಿಮಗೊಳಿಸಲಾಗಿದೆ. ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದು, ಮುಂದಿನ ತಯಾರಿಗೆ ಅಣಿಯಾಗುತ್ತೇವೆ.
- ಈ.ತುಕಾರಾಂ, ಸಂಸದ, ಬಳ್ಳಾರಿ