ಸಾರಾಂಶ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಜಗಲ್ಲ, ಬಗ್ಗಲ್ಲ ಎನ್ನುತ್ತಿದ್ದವರು ಈಗ ಆತ್ಮಸಾಕ್ಷಿಯ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಅವರ ಕುರ್ಚಿ ಅಲುಗಾಡುತ್ತಿರುವುದನ್ನು ತೋರಿಸುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಕಿಡಿಕಾರಿದ್ದಾರೆ.
ಶನಿವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿಗೆ ಒತ್ತು ಕೊಡಬೇಕಾದ ಸಚಿವರು ತಮ್ಮ ನಾಯಕರ ಭೇಟಿ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಡಾ. ಪರಮೇಶ್ವರ್, ಎಚ್.ಸಿ.ಮಹದೇವಪ್ಪ ಅವರು ಕುರ್ಚಿ ಮೇಲೆ ಟವೆಲ್ ಹಾಕುವ ಪ್ರಯತ್ನದಲ್ಲಿದ್ದಾರೆ. ಇದು ಕಾಂಗ್ರೆಸ್ಸಿನಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ, ಯಾವ ಬದಲಾವಣೆ ಆಗಬಹುದು ಎಂಬುದರ ಸೂಚನೆಯಾಗಿದೆ ಎಂದರು.
ಅಭಿವೃದ್ಧಿ ಸಂಪೂರ್ಣ ನೆಲಕಚ್ಚಿ ಹೋಗಿರುವುದು ರಾಜ್ಯದ ಜನರ ದುರದೃಷ್ಟಕರ. ಸಚಿವರು ತಮ್ಮ ಆಕಾಂಕ್ಷೆ ವ್ಯಕ್ತಪಡಿಸುವುದರಲ್ಲಿ, ಅದಕ್ಕೆ ಒಳಸಂಚು ರೂಪಿಸುವುದರಲ್ಲಿ ನಿರತರಾಗಿದ್ದಾರೆ. ಕರ್ನಾಟಕದಲ್ಲಿ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿಯನ್ನು ಮುಚ್ಚಿ ಫ್ರೀಡಂಪಾರ್ಕಿನಲ್ಲಿ ಪ್ರತಿಭಟನೆಗೆ ಕುಳಿತಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆಯವರು ತಮ್ಮ ಇಲಾಖೆಯನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ಸೋತು ಹೋಗಿದ್ದಾರೆ. ಇಲಾಖೆ ಬಗ್ಗೆ ಅರಾಜಕತೆಯನ್ನು ಸೃಷ್ಟಿಸಿದ್ದಾರೆ ಎಂದು ಕಿಡಿಕಾರಿದರು.
ಪ್ರಿಯಾಂಕ್ ಖರ್ಗೆಗೆ ದೊಡ್ಡ ದೊಡ್ಡ ನಾಯಕರ ಕುರಿತು ಹೇಳಿಕೆ ನೀಡುವುದನ್ನು ಬಿಟ್ಟರೆ ತಮ್ಮ ಇಲಾಖೆ ನಿರ್ವಹಿಸುವುದು ಗೊತ್ತಾಗುತ್ತಿಲ್ಲ. ಮೂರು ತಿಂಗಳಿಂದ ಶಿಕ್ಷಕರ ವೇತನ ಕೊಟ್ಟಿಲ್ಲ. ಅಂಗನವಾಡಿ ಅಧಿಕಾರಿಗಳಿಗೆ ವೇತನ ಬಂದಿಲ್ಲ. ಗೃಹಲಕ್ಷ್ಮಿ ಯೋಜನೆಗೆ ಕಾಯಕಲ್ಪ ಸಿಕ್ಕಿಲ್ಲ ಎಂದು ಆರೋಪಿಸಿದರು.