ಪರಿಶಿಷ್ಟರ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ದುರ್ಬಳಕೆ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ದಲಿತಾಕ್ರೋಶ

| N/A | Published : Mar 07 2025, 01:48 AM IST / Updated: Mar 07 2025, 04:22 AM IST

ಸಾರಾಂಶ

ಪರಿಶಿಷ್ಟರ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ದುರ್ಬಳಕೆ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ‘ಪರಿಶಿಷ್ಟರ ಹಣ ದುರ್ಬಳಕೆ ವಿರೋಧಿ ಹೋರಾಟ ಸಮಿತಿ’ ವತಿಯಿಂದ ಗುರುವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

 ಬೆಂಗಳೂರು : ಪರಿಶಿಷ್ಟರ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ದುರ್ಬಳಕೆ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ‘ಪರಿಶಿಷ್ಟರ ಹಣ ದುರ್ಬಳಕೆ ವಿರೋಧಿ ಹೋರಾಟ ಸಮಿತಿ’ ವತಿಯಿಂದ ಗುರುವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಇಲ್ಲಿಗೆ ಬಂದಿಲ್ಲ. ದಲಿತ ವಿರೋಧಿ ಸರ್ಕಾರದ ವಿರುದ್ಧ ಹೋರಾಡಲು ಬಂದಿದ್ದೇನೆ. ಅಂಬೇಡ್ಕರ್‌ ಅವರ ಅನುಯಾಯಿಯಾಗಿ ನಿಮ್ಮೆಲ್ಲರ ಧ್ವನಿಯಾಗಲು ಬಂದಿದ್ದೇನೆ. ಇಂತಹ ಕರಾಳ ದಿನ ಬರಲಿದೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ ಎಂದರು.

ಎಸ್ಸಿ-ಎಸ್ಟಿ ಕಣ್ಣೀರು ಒರೆಸುತ್ತೇನೆ ಎಂದು ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಿದ್ದಾರೆ. ಸಿದ್ದರಾಮಯ್ಯ ಅವರೇ ನಿಮ್ಮ ದಲಿತ ಪರ ಕಾಳಜಿ ಎಲ್ಲಿ ಹೋಯ್ತು? ಸಿದ್ದರಾಮಯ್ಯ ಅನುಭವಿ ಸಿಎಂ ಎಂದು ನಾನು ಹೇಳಲ್ಲ. ದಲಿತ ಕೇರಿಗಳಿಗೆ ಗಂಗಾ ಕಲ್ಯಾಣ ಯೋಜನೆ ಕೊಟ್ಟಿದ್ದು, ಸಿಸಿ ರಸ್ತೆ ಕೊಟ್ಟಿದ್ದು ಮಾಜಿ ಸಿಎಂ ಯಡಿಯೂರಪ್ಪ. ಹಾಗಾದರೆ, ಸಿದ್ದರಾಮಯ್ಯ ಅವರೇ ದಲಿತರ ಮೇಲೆ ನಿಮ್ಮ ಕಾಳಜಿ ಎಲ್ಲಿಗೆ ಹೋಯ್ತು? ದಲಿತರ ಮತವನ್ನು ಮತ ಬ್ಯಾಂಕ್‌ ಆಗಿ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ದಲಿತರ ₹20 ಸಾವಿರ ಕೋಟಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಸರ್ಕಾರದ ಕಿಡಿ ಹಿಂಡುವ ಕೆಲಸ ಮಾಡಬೇಕು ಎಂದು ಕಿಡಿಕಾರಿದರು.ಸಿದ್ದರಾಮಯ್ಯ ಅವರೇ ನಾಳೆ ನೀವು ಮಂಡನೆ ಮಾಡುತ್ತಿರುವ 16ನೇ ಬಜೆಟ್‌ನಲ್ಲಿ ಎಸ್ಸಿ-ಎಸ್ಟಿ ಹಣ ದುರ್ಬಳಕೆ ಮಾಡುವ ಕೆಲಸಕ್ಕೆ ಕೈ ಹಾಕಬೇಡಿ ಎಂದು ವಿಜಯೇಂದ್ರ ಆಗ್ರಹಿಸಿದರು.

ಮೀಸಲು ಹಣ ಭಿಕ್ಷೆ ಅಲ್ಲ, ನಮ್ಮ ಹಕ್ಕು:

ಶುಕ್ರವಾರ ಮಂಡಿಸಲಿರುವ ಬಜೆಟ್‌ನಲ್ಲಿ ದಲಿತರಿಗೆ ಮೀಸಲಾಗಿ ಇಡಬೇಕಾದ ಹಣ ಇಡುತ್ತೀರಾ? ಅದನ್ನು ನಾವು ನೋಡಬೇಕು. ಈ ಬಾರಿಯ ಬಜೆಟ್‌ನಲ್ಲಿ ಬರುವ ಹಣ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗ ಸಮುದಾಯದ ಯೋಜನೆಗೆ ಇರಿಸಬೇಕು. ಗಂಗಾ ಕಲ್ಯಾಣಕ್ಕೆ ಮೀಸಲಾದ ಹಣ ಎಲ್ಲಿಗೆ ಹೋಯ್ತು? ಇದು ಭಿಕ್ಷೆ ಅಲ್ಲ, ಅದು ನಮ್ಮ ಹಕ್ಕು. ಹಣ ದುರ್ಬಳಕೆ ಆಗಿರುವುದಕ್ಕೆ ಸರ್ಕಾರ ಕ್ಷಮೆ ಯಾಚಿಸಬೇಕು. ನಾವು ಯಾವಾಗಲೂ ನಿಮ್ಮ ಹೋರಾಟದಲ್ಲಿ ಇರುತ್ತೇವೆ ಎಂದು ದಲಿತ ಸಂಘಟನೆಗಳಿಗೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಬೆಂಬಲ ಸೂಚಿಸಿದರು.

ರಾಜ್ಯ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ 30ಕ್ಕೂ ಅಧಿಕ ದಲಿತ ಸಂಘಟನೆಗಳು ಪಾಲ್ಗೊಂಡಿದ್ದವು. ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮ, ಮಾಜಿ ಸಚಿವ ಎನ್‌.ಮಹೇಶ್‌, ಮಾಜಿ ಶಾಸಕ ವೈ.ಸಂಪಂಗಿ ಸೇರಿದಂತೆ ಬಿಜೆಪಿ ಮುಖಂಡರು, ವಿವಿಧ ದಲಿತ ಸಂಘಟನೆಗಳು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಕಾಂಗ್ರೆಸ್‌ನಲ್ಲಿ ದಲಿತ ಶಾಸಕರು ಇಲ್ಲವೇ?:

ಜೆಡಿಎಸ್‌ನ ವಿಧಾನ ಪರಿಷತ್‌ ಸದಸ್ಯ ಭೋಜೇಗೌಡ ಮಾತನಾಡಿ, ನಾವೆಲ್ಲರೂ ಅಂಬೇಡ್ಕರ್‌ ಕೊಟ್ಟಿರುವ ಸಂವಿಧಾನದ ಅಡಿತಲ್ಲಿ ಕಾಣಿಸಿಕೊಳ್ಳುತ್ತಿದ್ದೇವೆ. ಅಂಬೇಡ್ಕರ್‌ ಸಂವಿಧಾನ ಎಲ್ಲಾ ಸಮುದಾಯದ ಜನರಿಗೆ ಕೊಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಕಾಂಗ್ರೆಸ್‌ ಪಕ್ಷದಲ್ಲಿ ದಲಿತ ಶಾಸಕರು ಇಲ್ಲವೇ? ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮತ ಪಡೆಯದೇ ಇದ್ದರೆ 136 ಸ್ಥಾನ ಗೆಲ್ಲುತ್ತಿದ್ದರಾ? ದಲಿತರ ಮೀಸಲು ಹಣ ದುರುಪಯೋಗ ಆಗದಂತೆ ನೋಡಿಕೊಳ್ಳುವುದು ದಲಿತ ಸಮಯದಾಯ ಶಾಸಕರ ಜವಾಬ್ದಾರಿ ಎಂದು ಹೇಳಿದರು.