ಸಾರಾಂಶ
- ಧರ್ಮಸ್ಥಳ ಕೇಸ್ ಎನ್‌ಐಎ ವಹಿಸಲು ಆಗ್ರಹ- ಲಕ್ಷಾಂತರ ಜನ ಪಾಲ್ಗೊಳ್ಳೋ ನಿರೀಕ್ಷೆ: ಬಿವೈವಿ
===ಚಿನ್ನಯ್ಯನಿಂದಬುರುಡೆ ಗ್ಯಾಂಗ್‌ಷಡ್ಯಂತ್ರ ಬಯಲು?ಮಂಗಳೂರು: ಧರ್ಮಸ್ಥಳ ಗ್ರಾಮದ ತಲೆಬುರುಡೆ ಪ್ರಕರಣದಲ್ಲಿ ಬಂಧಿತ ಚಿನ್ನಯ್ಯನ ವಿಚಾರಣೆ ಮೂರನೇ ದಿನವಾದ ಸೋಮವಾರವೂ ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ ಮುಂದುವರಿಯಿತು. ಈ ವೇಳೆ ತನಿಖಾಧಿಕಾರಿಗಳ ಮುಂದೆ ಷಡ್ಯಂತ್ರದ ಎಲ್ಲ ವಿಚಾರಗಳನ್ನು ಚಿನ್ನಯ್ಯ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ. ಅಲ್ಲದೆ, ಈ ವಿಚಾರವನ್ನು ಆತ ತನ್ನ ಅಣ್ಣ ತಾನಾಸಿಯಲ್ಲಿಯೂ ಹೇಳಿದ್ದು, ಆತನ ಬಳಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿಯ ತಂಡ ಚಿನ್ನಯ್ಯನ ಹುಟ್ಟೂರು ತಮಿಳುನಾಡಿನ ಚಿಕ್ಕರಸಿ ಹಾಗೂ ಮಂಡ್ಯಕ್ಕೆ ತೆರಳಿ ತನಿಖೆ ನಡೆಸಿದೆ.
==ಕನ್ನಡಪ್ರಭ ವಾರ್ತೆ ಬೆಂಗಳೂರು
ಧರ್ಮಸ್ಥಳ ಗ್ರಾಮ ಪ್ರಕರಣ ಕುರಿತ ಸಂಪೂರ್ಣ ತನಿಖೆಯನ್ನು ಎನ್‌ಐಎಗೆ (ರಾಷ್ಟ್ರೀಯ ತನಿಖಾ ದಳ) ವಹಿಸುವಂತೆ ಒತ್ತಾಯಿಸಿ ಬಿಜೆಪಿಯು ಸೆ.1ರಂದು ‘ಧರ್ಮಸ್ಥಳ ಚಲೋ’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಂದು ಕ್ಷೇತ್ರದಲ್ಲಿ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಿದೆ.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ತನಿಖೆಯನ್ನು ಕೂಡಲೇ ಎನ್ಐಎಗೆ ಕೊಡುವಂತೆ ಕೋಟ್ಯಂತರ ಸದ್ಭಕ್ತರು ಹಾಗೂ ಹಿಂದೂಗಳ ಪರವಾಗಿ ಮುಖ್ಯಮಂತ್ರಿಗಳನ್ನು ಆಗ್ರಹಿಸಲಾಗುವುದು ಎಂದರು.
ಎನ್ಐಎ ತನಿಖೆ ಮಾಡಿದರೆ ರಾಜ್ಯ ಸರ್ಕಾರದ ಬಗ್ಗೆ ಜನರಿಗೆ ಮತ್ತು ಅಪಾರ ಭಕ್ತರಿಗೆ ವಿಶ್ವಾಸ ಬರಲಿದೆ. ಆದ್ದರಿಂದ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಈ ನಿರ್ಧಾರವನ್ನು ತಕ್ಷಣ ತೆಗೆದುಕೊಳ್ಳಬೇಕು. ಇದೇ ಆಗ್ರಹ ಮುಂದಿಟ್ಟು ಸೆ.1ರಂದು ಸೋಮವಾರ ‘ಧರ್ಮಸ್ಥಳ ಚಲೋ’ಗೆ ಕರೆ ನೀಡುತ್ತಿರುವುದಾಗಿ ಪ್ರಕಟಿಸಿದರು.ಸರ್ಕಾರದ ಕಿವಿ ಹಿಂಡಬೇಕಿದೆ:
ಹಿಂದೂಗಳ ಭಾವನೆಗೆ ಧಕ್ಕೆ ತಂದ ಸರ್ಕಾರದ ಕಿವಿ ಹಿಂಡುವ ಕೆಲಸ ಆಗಬೇಕಿದೆ. ಎನ್ಐಎ ತನಿಖೆಯ ಆಗ್ರಹದ ಬೇಡಿಕೆ ಮುಂದಿಟ್ಟು ರಾಜ್ಯದ ಸಮಸ್ತ ಹಿಂದೂ ಸಮಾಜವು ಇದರಲ್ಲಿ ಪಾಲ್ಗೊಳ್ಳಬೇಕು. ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಿಂದ, ಎಲ್ಲ ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನ ಧರ್ಮಸ್ಥಳಕ್ಕೆ ಬರಲಿದ್ದಾರೆ. ಲಕ್ಷಾಂತರ ಜನ ಭಾಗವಹಿಸುವ ವಿಶ್ವಾಸವಿದೆ ಎಂದರು.ಧರ್ಮಸ್ಥಳಕ್ಕೆ ಹೊರಡುವ ದಿನ ಹಿಂದೂ ಸಮಾಜದವರು ತಮ್ಮ ನಗರ, ಗ್ರಾಮಗಳಲ್ಲಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಸ್ಥಳೀಯವಾಗಿ ಮೆರವಣಿಗೆ ಮಾಡಿ ಆಗಮಿಸಬೇಕಿದೆ. ಅಂದು ಮಧ್ಯಾಹ್ನ 2 ಗಂಟೆಗೆ ಧರ್ಮಸ್ಥಳದಲ್ಲಿ ಧರ್ಮ ಜಾಗೃತಿ ಮೂಡಿಸುವ ಮತ್ತು ಸರ್ಕಾರಕ್ಕೆ ಎಚ್ಚರಿಕೆ ನೀಡುವ ಬೃಹತ್ ಸಮಾವೇಶ ನಡೆಯುತ್ತದೆ ಎಂದು ಹೇಳಿದರು.
ಸರ್ಕಾರಕ್ಕೆ ಕಳಂಕ:ಧರ್ಮಸ್ಥಳ ಗ್ರಾಮ ಘಟನೆಯಿಂದ ಸರ್ಕಾರಕ್ಕೆ ಕಳಂಕ ಬಂದಿದೆ. ಆ ಕಳಂಕದಿಂದ ಹೊರಗೆ ಬರಬೇಕಿದೆ. ಈ ದುಷ್ಕೃತ್ಯದ ಹಿಂದಿರುವ ಸಂಘಟನೆಗಳು, ದುಷ್ಟಶಕ್ತಿಗಳ ಬಗ್ಗೆ ಸಮರ್ಪಕ ತನಿಖೆ ಆಗಬೇಕಿದೆ. ಅಪಪ್ರಚಾರ ಮಾಡುವ ದುಷ್ಟಶಕ್ತಿಗಳು ಇದೇ ರೀತಿ ಇನ್ನೊಂದು ಹಿಂದೂ ದೇವಾಲಯದ ವಿರುದ್ಧ ಷಡ್ಯಂತ್ರ ಮಾಡಬಹುದು ಎಂದು ವಿಜಯೇಂದ್ರ ತಿಳಿಸಿದರು.
ಧರ್ಮಸ್ಥಳದ ಪವಿತ್ರ ಶ್ರೀ ಕ್ಷೇತ್ರದ ಕುರಿತು ದಾರಿಯಲ್ಲಿ ಹೋಗುವ ಬುರುಡೆ ಹಿಡಿದ ವ್ಯಕ್ತಿಯೊಬ್ಬ ಬಂದು ಬುರುಡೆ ಹೊಡೆದರೆ ಆ ವ್ಯಕ್ತಿಯ ಹಿನ್ನೆಲೆ ಏನು? ಅವನ ಹಿಂದಿರುವ ಶಕ್ತಿಗಳು, ಯಾವ ಸಂಘಟನೆಗಳು ಕೆಲಸ ಮಾಡುತ್ತಿವೆ ಎಂಬ ಮಾಹಿತಿ ಸಂಗ್ರಹಿಸಬೇಕಿತ್ತು ಅಥವಾ ಬೇಹುಗಾರಿಕಾ ದಳದಿಂದ ವರದಿ ಪಡೆದು ಮುಖ್ಯಮಂತ್ರಿಗಳು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕಿತ್ತು ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೇವರ ಮೇಲೆ ಎಷ್ಟು ನಂಬಿಕೆ ಇದೆ, ಧರ್ಮಸ್ಥಳ ಮಂಜುನಾಥೇಶ್ವರ, ಅಣ್ಣಪ್ಪ ಸ್ವಾಮಿ ಬಗ್ಗೆ ಎಷ್ಟು ಶ್ರದ್ಧೆ ಇದೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಧರ್ಮಸ್ಥಳ ಮಂಜುನಾಥೇಶ್ವರ, ಅಣ್ಣಪ್ಪ ಸ್ವಾಮಿಗೆ ಕೋಟಿ ಕೋಟಿ ಭಕ್ತರಿದ್ದಾರೆ. ಈ ಭಕ್ತರಿಗೆ ಧರ್ಮಸ್ಥಳ ಒಂದು ಪವಿತ್ರ ಶ್ರೀ ಕ್ಷೇತ್ರ. ಧರ್ಮಸ್ಥಳ ಕೇವಲ ಒಂದು ಮಂದಿರವಲ್ಲ, ಹಲವಾರು ದಶಕಗಳಿಂದ ಶ್ರದ್ಧಾಭಾವನೆ ಇದೆ ಎಂದು ಹೇಳಿದರು.
ಸಂಸದ ಪಿ.ಸಿ.ಮೋಹನ್, ಶಾಸಕರಾದ ಕೆ.ಗೋಪಾಲಯ್ಯ, ಎಸ್.ಆರ್.ವಿಶ್ವನಾಥ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಮತ್ತಿತರರು ಭಾಗವಹಿಸಿದ್ದರು.==