ಮತಾದರರ ಪಟ್ಟಿ ಪರಿಷ್ಕರಣೆ ವೇಳೆ ಅಕ್ರಮವಾಗಿ ಮತದಾರರ ಹೆಸರು ರದ್ದತಿಗೆ ಫಾರಂ 7 ಬಳಸಲಾಗಿದೆ ಎಂಬ ವ್ಯಾಪಕ ದೂರಿನ ಬೆನ್ನಲ್ಲೇ ಇದೀಗ ಫಾರಂ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ. ವಿಶೇಷವೆಂದರೆ ಈ ಬಾರಿ ಫಾರಂ 6 ಬಗ್ಗೆ ಮಹಾರಾಷ್ಟ್ರ ಚುನಾವಣಾ ಆಯೋಗವೇ ಆಕ್ಷೇಪ ವ್ಯಕ್ತಪಡಿಸಿದೆ.
ಮುಂಬೈ: ಮತಾದರರ ಪಟ್ಟಿ ಪರಿಷ್ಕರಣೆ ವೇಳೆ ಅಕ್ರಮವಾಗಿ ಮತದಾರರ ಹೆಸರು ರದ್ದತಿಗೆ ಫಾರಂ 7 ಬಳಸಲಾಗಿದೆ ಎಂಬ ವ್ಯಾಪಕ ದೂರಿನ ಬೆನ್ನಲ್ಲೇ ಇದೀಗ ಫಾರಂ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ. ವಿಶೇಷವೆಂದರೆ ಈ ಬಾರಿ ಫಾರಂ 6 ಬಗ್ಗೆ ಮಹಾರಾಷ್ಟ್ರ ಚುನಾವಣಾ ಆಯೋಗವೇ ಆಕ್ಷೇಪ ವ್ಯಕ್ತಪಡಿಸಿದೆ. ‘ಡಿಲೀಟ್ ಆದ ಮತದಾರನಿಗೆ ಮರುಸೇರ್ಪಡೆ ವೇಳೆ ‘ಹೊಸ ಮತದಾರ’ ಎಂಬ ಪಟ್ಟ ನೀಡಬಾರದು. ಇದು ಸೇರಿದಂತೆ ಫಾರಂ-6ರಲ್ಲಿ 3 ಪ್ರಮುಖ ಬದಲಾವಣೆ ಮಾಡಬೇಕು’ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಮಹಾರಾಷ್ಟ್ರ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪತ್ರ ಬರೆದಿದೆ.
ಇತ್ತೀಚೆಗೆ ಎಸ್ಐಆರ್ ಕುರಿತು ಇದೇ ಮಹಾರಾಷ್ಟ್ರ ಮುಖ್ಯ ಚುನಾವಣಾಧಿಕಾರಿ ಎಸ್. ಚೊಕ್ಕಲಿಂಗಂ ಹಲವು ಆಕ್ಷೇಪ ಎತ್ತಿದ್ದರು. ಅದರ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ.
ಸೇರ್ಪಡೆಯಾಗಬೇಕಿದ್ದರೆ ಫಾರಂ 6 ಸಲ್ಲಿಸಬೇಕು
‘ಹೊಸದಾಗಿ ಮತದಾರರ ಪಟ್ಟಿ ಸೇರ್ಪಡೆಯಾಗಬೇಕಿದ್ದರೆ ಫಾರಂ 6 ಸಲ್ಲಿಸಬೇಕು. ಆ ವೇಳೆ ತಮ್ಮನ್ನು ತಾವು ಮೊದಲ ಬಾರಿಯ ಮತದಾರ ಎಂದು ಘೋಷಿಸುವುದು ಅನಿವಾರ್ಯ. ಆದರೆ ಈಗ ಎಸ್ಐಆರ್ ವೇಳೆ ಹೆಸರು ಡಿಲೀಟ್ ಆದ ಮತದಾರರು ತಮ್ಮನ್ನು ತಾವು ಮೊದಲ ಬಾರಿಯ ಮತದಾರ ಎಂದು ಘೋಷಿಸಿಕೊಳ್ಳುವುದು ತಪ್ಪು ಮಾಹಿತಿ ನೀಡಿದಂತಾಗುತ್ತದೆ. ಈ ರೀತಿ ಮಾಡುವುದು ಜನಪ್ರತಿನಿಧಿಗಳ ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧ ಎಂಬುದು ಈ ಹಿಂದೆ ಮತದಾರರ ಪಟ್ಟಿಯಲ್ಲಿದ್ದವರ ವಾದ’ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ಹೇಳಿದೆ.
3 ತಿದ್ದುಪಡಿ ಪ್ರಸ್ತಾಪಿಸಿದೆ
ಹೀಗಾಗಿ ಅದು 3 ತಿದ್ದುಪಡಿ ಪ್ರಸ್ತಾಪಿಸಿದೆ. ಅದರಂತೆ ಫಾರ್ಮ್ 6ನಲ್ಲಿ ‘ಹೊಸ ಮತದಾರರು’ ಎಂಬ ತಲೆಬರಹ ತೆಗೆದುಹಾಕಬೇಕು. ಈ ಹಿಂದೆ ಅಸೆಂಬ್ಲಿ ಕ್ಷೇತ್ರದಲ್ಲಿ ನೋಂದಾಯಿತರಾಗಿದ್ದು, ಈಗ ಯಾವ ಮತದಾರರ ಪಟ್ಟಿಯಲ್ಲೂ ಹೆಸರಿಲ್ಲದವರು ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಬೇಕಿದ್ದರೆ ಪ್ರತ್ಯೇಕ ಘೋಷಣಾ ಪತ್ರ ಸಲ್ಲಿಸಬೇಕು. ಇದರ ಜತೆಗೆ ಹಿಂದಿನ ಮತದಾರರ ಗುರುತಿನ ಚೀಟಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಲಾಗಿದೆ.
