ದೇಶಾದ್ಯಂತ ಪರ-ವಿರೋಧ ಚರ್ಚೆಗೆ ಕಾರಣವಾಗಿರುವ ಹಾಗೂ ಈವರೆಗೆ 13 ಕೋಟಿ ಮತದಾರರ ಹೆಸರು ಡಿಲೀಟ್‌ ಆಗಲು ಕಾರಣವಾಗಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿವಾದ ಬುಧವಾರ ಮತ್ತೊಂದು ಭಾರಿ ರಾಜಕೀಯ ತಿರುವು ಪಡೆದಿದೆ.

ನವದೆಹಲಿ: ದೇಶಾದ್ಯಂತ ಪರ-ವಿರೋಧ ಚರ್ಚೆಗೆ ಕಾರಣವಾಗಿರುವ ಹಾಗೂ ಈವರೆಗೆ 13 ಕೋಟಿ ಮತದಾರರ ಹೆಸರು ಡಿಲೀಟ್‌ ಆಗಲು ಕಾರಣವಾಗಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿವಾದ ಬುಧವಾರ ಮತ್ತೊಂದು ಭಾರಿ ರಾಜಕೀಯ ತಿರುವು ಪಡೆದಿದೆ. ‘ಎಸ್‌ಐಆರ್‌ಗೆ ಸಂಬಂಧಿಸಿದಂತೆ ಇಬ್ಬರು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ಆಕ್ಷೇಪಗಳನ್ನು ಬದಿಗೊತ್ತಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್ ಹಲವು ಏಕಪಕ್ಷೀಯ ನಿರ್ಣಯ ಕೈಗೊಂಡಿದ್ದರು’ ಎಂದು ‘ಇಂಡಿಯನ್‌ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಈ ವರದಿಯು ರಾಜಕೀಯ ವಾಕ್ಸಮರಕ್ಕೆ ನಾಂದಿ ಹಾಡಿದ್ದು, ಪ್ರತಿಪಕ್ಷಗಳು ಜ್ಞಾನೇಶ್‌ ವಜಾ ಹಾಗೂ ಬಂಧನಕ್ಕೆ ಆಗ್ರಹಿಸಿವೆ. ಆದರೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಿ, ‘ಚರ್ಚಾ ಹಂತದಲ್ಲಿ ಆಯುಕ್ತರು ಆಕ್ಷೇಪಿಸಿದ್ದರು. ಆದರೆ ಅಂತಿಮ ನಿರ್ಣಯಗಳು ಸರ್ವಾನುಮತದಿಂದ ಕೂಡಿವೆ’ ಎಂದು ಸ್ಪಷ್ಟಪಡಿಸಿದೆ. ಬಿಜೆಪಿ ಕೂಡ, ‘ಚರ್ಚಾ ಹಂತದ ಆಕ್ಷೇಪಗಳು ಪ್ರಜಾಪ್ರಭುತ್ವದ ಭಾಗ’ ಎಂದಿದೆ.

ವರದಿಯಲ್ಲೇನಿದೆ?:

‘ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ಕೈಗೊಂಡ ಎಸ್ಐಆರ್‌ ನಿರ್ಣಯ ಸೇರಿ ಹಲವು ಪ್ರಮುಖ ನಿರ್ಧಾರಗಳ ವಿರುದ್ಧ ಉಳಿದ ಇಬ್ಬರು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಕಳೆದ 10 ತಿಂಗಳುಗಳಲ್ಲಿ ಕನಿಷ್ಠ 14 ಬಾರಿ ಔಪಚಾರಿಕ ಆಕ್ಷೇಪಣೆಗಳನ್ನು ಎತ್ತಿದ್ದರು. ಈ ಪೈಕಿ ಒಂದೇ ದಿನ 4 ನಿರ್ಧಾರಗಳಿಗೆ ಆಕ್ಷೇಪಗಳನ್ನು ಎತ್ತಿದ್ದರು. ಇಷ್ಟು ಆಕ್ಷೇಪ ಕೇಳಿಬಂದರೂ ಸಿಇಸಿ ಜ್ಞಾನೇಶ್ ಅದನ್ನೆಲ್ಲ ಕಡೆಗಣಿಸಿ ಏಕಪಕ್ಷೀಯವಾಗಿ ಎಲ್ಲ ನಿರ್ಣಯ ಕೈಗೊಂಡಿದ್ದಾರೆ’ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ತನಿಖಾ ವರದಿ ಪ್ರಕಟಿಸಿದೆ.

‘ವಿಶೇಷವಾಗಿ ಮತದಾರರ ನೋಂದಣಿಯ ನಮೂನೆ 6 ರಲ್ಲಿನ ಬದಲಾವಣೆಗಳು ಮತ್ತು ಮತದಾರರ ಪಟ್ಟಿಯ ದತ್ತಾಂಶದ ಕೇಂದ್ರೀಕರಣದ ಬಗ್ಗೆ ಇಬ್ಬರೂ ಆಯುಕ್ತರು ಲಿಖಿತ ಟಿಪ್ಪಣಿಯಲ್ಲಿ ಕಳವಳ ವ್ಯಕ್ತಪಡಿಸಿದ್ದರು. ನಮೂನೆ 6ರಲ್ಲಿನ ಬದಲಾವಣೆಗಳಿಗೆ ಆಕ್ಷೇಪ ವ್ಯಕ್ತಪಡಿಸಿ, ಅವುಗಳನ್ನು ‘ಕಾನೂನುಬಾಹಿರ’ ಮತ್ತು ’ಅನಧಿಕೃತ’ ಎಂದು ಕರೆದಿದ್ದರು. 1960ರ ಮತದಾರರ ನೋಂದಣಿ ನಿಯಮಗಳಿಗೆ ತಿದ್ದುಪಡಿ ಮಾಡದೆ ನಮೂನೆಗಳನ್ನು ಬದಲಿಸಲು ಸಾಧ್ಯವಿಲ್ಲ’ ಎಂದು ವಾದಿಸಿದ್ದರು. ಈ ಆಕ್ಷೇಪಣೆಗಳ ಹೊರತಾಗಿಯೂ ಆಯೋಗವು ನಮೂನೆಗಳಲ್ಲಿ ಬದಲಾವಣೆ ಮಾಡಿತು’ ಎಂದು ವರದಿ ಹೇಳಿದೆ.

ಇನ್ನು ಡೇಟಾಬೇಸ್ ಕೇಂದ್ರೀಕರಣದ ಬಗ್ಗೆಯೂ ಸಂಧು ಮತ್ತು ಜೋಶಿ ಆಕ್ಷೇಪಿಸಿದ್ದರು. ಐಟಿ ವಿಭಾಗದ ಮೂಲಕ ಮತದಾರರ ಪಟ್ಟಿಯ ದತ್ತಾಂಶವನ್ನು (ಎಲೆಕ್ಟೋರಲ್‌ ರೋಲ್ ಡೇಟಾಬೇಸ್‌) ಇಡೀ ದೇಶಕ್ಕೆ ಅನ್ವಯವಾಗುವಂತೆ ಕೇಂದ್ರೀಕೃತ ಸಾಫ್ಟ್‌ವೇರ್ ವ್ಯವಸ್ಥೆಗೆ ಒಳಪಡಿಸಲಾಗುತ್ತಿದೆ. ಈ ಕೇಂದ್ರೀಕೃತ ವ್ಯವಸ್ಥೆಯು ತಳಮಟ್ಟದ ಚುನಾವಣಾ ನೋಂದಣಿ ಅಧಿಕಾರಿಗಳ (ಇಆರ್‌ಒ) ಶಾಸನಬದ್ಧ ಅಧಿಕಾರಗಳನ್ನು ಕಸಿದುಕೊಳ್ಳುತ್ತಿದೆ ಮತ್ತು ಇದು ಮತದಾನದ ದುರುಪಯೋಗಕ್ಕೆ ಕಾರಣವಾಗಬಹುದು ಎಂದು ಆಯುಕ್ತರು ಆತಂಕ ವ್ಯಕ್ತಪಡಿಸಿದ್ದರು ಎಂದು ‘ಎಕ್ಸ್‌ಪ್ರೆಸ್‌’ ವರದಿ ವಿವರಿಸಿದೆ.

‘2023ರ ಹೊಸ ಕಾಯ್ದೆಯ ನಿಬಂಧನೆಗಳ ಅನ್ವಯ ಯಾವುದೇ ನಿರ್ಧಾರ ಅಥವಾ ಸಂವಹನ ಹೊರಡಿಸುವಾಗ ಇಡೀ ಆಯೋಗದ ಅನುಮೋದನೆ ಕಡ್ಡಾಯವಾಗಿದೆ. ಆದರೆ, ತಮ್ಮ ಗಮನಕ್ಕೇ ಬರದೇ ಚುನಾವಣಾ ಆಯೋಗದ ಹೆಸರಿನಲ್ಲಿ ಹಲವಾರು ಆದೇಶ ಹಾಗೂ ನಿರ್ದೇಶನಗಳು ಹೊರಬಿದ್ದಿವೆ ಎಂದು ಅವರು ಆಕ್ಷೇಪಿಸಿದ್ದಾರೆ’ ಎಂದು ಅದು ಹೇಳಿದೆ.

ಜ್ಞಾನೇಶ್‌ ವಜಾ, ಬಂಧನಕ್ಕೆ ವಿಪಕ್ಷಗಳ ಆಗ್ರಹ 

ನವದೆಹಲಿ : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಬಗ್ಗೆ ಇಬ್ಬರು ಚುನಾವಣಾ ಆಯುಕ್ತರು ಆಕ್ಷೇಪಿಸಿದ ಬೆನ್ನಲ್ಲೇ ಆಯೋಗ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ವಾಗ್ದಾಳಿ ನಡೆಸಿವೆ. ‘ಸಿಇಸಿ ಜ್ಞಾನೇಶ್ ಕುಮಾರ್ ‘ಏಕವ್ಯಕ್ತಿ ನಿರಂಕುಶಾಧಿಕಾರ’ದಲ್ಲಿ ತೊಡಗಿದ್ದಾರೆ. ಅವರನ್ನು ವಜಾ ಮಾಡಬೇಕು ಹಾಗೂ ಬಂಧಿಸಬೇಕು’ ಎಂದು ಆಗ್ರಹಿಸಿವೆ.

ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮಾತನಾಡಿ, ‘ಬಿಜೆಪಿ, ಆರ್‌ಎಸ್‌ಎಸ್ ಮತ್ತು ಚುನಾವಣಾ ಆಯೋಗ ದೇಶದ್ರೋಹದ ಕೃತ್ಯ ಎಸಗಿವೆ’ ಎಂದಿದ್ದಾರೆ. ಶಿವಸೇನಾ (ಯುಬಿಟಿ) ನಾಯಕ ಉದ್ಧವ್‌ ಠಾಕ್ರೆ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್‌, ಆರ್‌ಜೆಡಿ ನೇತಾರ ತೇಜಸ್ವಿ ಯಾದವ್‌ ಅವರು ಜ್ಞಾನೇಶ್‌ ವಜಾ/ಬಂಧನಕ್ಕೆ ಆಗ್ರಹಿಸಿದ್ದಾರೆ. ಅಲ್ಲದೆ, ವಂಚನೆ ಮೂಲಕ ಮತದಾರ ಪಟ್ಟಿ ಪರಿಷ್ಕರಣೆ ನಡೆದಿದ್ದು ಸಾಬೀತಾಗಿದ್ದು, ಮಹಾರಾಷ್ಟ್ರ, ಬಿಹಾರ, ತಮಿಳುನಾಡು ಹಾಗೂ ಪ.ಬಂಗಾಳ ಚುನಾವಣೆಯನ್ನು ಹೊಸದಾಗಿ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.ಸಿಪಿಎಂ ಸಂಸದ ಜಾನ್ ಬ್ರಿಟ್ಟಾಸ್ ಮಾತನಾಡಿ, ‘ಇದು ಇನ್ನು ಮುಂದೆ ಚುನಾವಣಾ ಆಯೋಗವಲ್ಲ, ಸಿಇಸಿ ಕುಮಾರ್ ಅವರ ಅಡಿಯ ‘ಏಕವ್ಯಕ್ತಿ ನಿರಂಕುಶಾಧಿಕಾರ’ ಎಂದಿದ್ದಾರೆ.

ಮಾಜಿ ಸಿಇಸಿಗಳ ಕಿಡಿ:ಮಾಜಿ ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್ ಹಾಗೂ ಎಸ್‌.ವೈ ಖುರೇಷಿ ಮಾತನಾಡಿ, ‘ಮತದಾರರ ನೋಂದಣಿ ನಮೂನೆ 6 ರಲ್ಲಿನ ಬದಲಾವಣೆಗಳು ಸಂಪೂರ್ಣವಾಗಿ ತಪ್ಪು ಮತ್ತು ಕಾನೂನುಬಾಹಿರ. ಆಯೋಗದಲ್ಲಿನ ಭಿನ್ನಮತ ‘ಗಂಭೀರ’ ಮತ್ತು ‘ದುರದೃಷ್ಟಕರ’ ಎಂದರು.

ಸಿಇಸಿ ಆಯ್ಕೆಯಿಂದ ಸಿಜೆಐ ಹೊರಕ್ಕೆ: ಸುಪ್ರೀಂ ಭಿನ್ನ ನಿಲುವು

-ಒಂದೇ ಪೀಠದ ಇಬ್ಬರು ಜಡ್ಜ್‌ಗಳಿಂದ ಭಿನ್ನ ಅಭಿಪ್ರಾಯನವದೆಹಲಿ: ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಮತ್ತು ಚುನಾವಣಾ ಆಯುಕ್ತರನ್ನು (ಇಸಿ) ಆಯ್ಕೆ ಮಾಡುವ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಡುವ 2023ರ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕೇ ಎಂಬ ವಿಷಯದ ಕುರಿತು ಸುಪ್ರೀಂ ಕೋರ್ಟ್ ಬುಧವಾರ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.ಈ ಅರ್ಜಿಗಳು ಸಾಂವಿಧಾನಿಕವಾಗಿ ಮಹತ್ವದ ಪ್ರಶ್ನೆಗಳನ್ನು ಎತ್ತುತ್ತವೆ ಮತ್ತು ಇವುಗಳನ್ನು ಐವರು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಬೇಕು ಎಂಬ ಕೇಂದ್ರ ಸರ್ಕಾರದ ವಾದವನ್ನು ಪೀಠದ ನೇತೃತ್ವ ವಹಿಸಿದ್ದ ನ್ಯಾ. ದೀಪಂಕರ್ ದತ್ತಾ ನಿರಾಕರಿಸಿದರು. ಆದರೆ ಪೀಠದಲ್ಲಿದ್ದ ಮತ್ತೋರ್ವ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ, ನ್ಯಾ. ದತ್ತಾ ಅವರ ಅಭಿಪ್ರಾಯಗಳಿಗೆ ಭಿನ್ನಮತ ವ್ಯಕ್ತಪಡಿಸಿದರು. ಆದರೆ ಈ ವಿಷಯವನ್ನು ಮುಖ್ಯ ನ್ಯಾ. ಸೂರ್ಯಕಾಂತ್ ಅವರ ಮುಂದೆ ಮಂಡಿಸಬೇಕೆಂದು ಇಬ್ಬರೂ ನ್ಯಾಯಮೂರ್ತಿಗಳು ಒಪ್ಪಿಕೊಂಡರು.