ಚುನಾವಣಾ ಆಯೋಗವು ಕರ್ನಾಟಕ ಸೇರಿದಂತೆ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ 3ನೇ ಹಂತದ ಮತಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಸರ್) ನಡೆಸುವುದಾಗಿ ಘೋಷಿಸಿದೆ. ಕರ್ನಾಟಕದ 5.57 ಕೋಟಿ ಮತದಾರರು ಈ ಪ್ರಕ್ರಿಯೆಗೆ ಒಳಪಡಲಿದ್ದಾರೆ
ಚುನಾವಣಾ ಆಯೋಗವು ಕರ್ನಾಟಕ ಸೇರಿದಂತೆ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ 3ನೇ ಹಂತದ ಮತಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಸರ್) ನಡೆಸುವುದಾಗಿ ಘೋಷಿಸಿದೆ. ಕರ್ನಾಟಕದ 5.57 ಕೋಟಿ ಮತದಾರರು ಈ ಪ್ರಕ್ರಿಯೆಗೆ ಒಳಪಡಲಿದ್ದಾರೆ. ಹೀಗಿರುವಾಗ ಏನಿದು ಸರ್? ಪ್ರಕ್ರಿಯೆ ಹೇಗೆ ನಡೆಯುತ್ತದೆ? ಇದರ ಪ್ರಯೋಜನ, ಮಹತ್ವ, ಅವಶ್ಯಕತೆ ಏನು ಎಂಬುದರ ಮಾಹಿತಿ ಇಲ್ಲಿದೆ.
ಸರ್ ಎಂದರೇನು?
‘ಒಬ್ಬ ವ್ಯಕ್ತಿ, ಒಂದು ಮತ’ ತತ್ವವನ್ನು ಖಚಿತಪಡಿಸುವ ಉದ್ದೇಶದಿಂದ ಭಾರತೀಯ ಚುನಾವಣಾ ಆಯೋಗ ನಡೆಸುವ ಪ್ರಕ್ರಿಯೆ ಇದು. ಇದರಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ಪಡೆಯುತ್ತಾರೆ. ಮೃತರು, 2 ಕಡೆ ಹೆಸರು ನೋಂದಾಯಿಸಿರುವವರು, ಸ್ಥಳಾಂತರಗೊಂಡವರು ಹಾಗೂ ಅನರ್ಹರ ಹೆಸರನ್ನು ಮತಪಟ್ಟಿಯಿಂದ ತೆಗೆದುಹಾಕಲಾಗುತ್ತದೆ. ಇದೇ ವೇಳೆ ಪಟ್ಟಿಯಲ್ಲಿಲ್ಲದ, 18 ವರ್ಷ ಪೂರೈಸಿದ ಅರ್ಹ ಮತದಾರರನ್ನು ಪಟ್ಟಿಗೆ ಹೊಸದಾಗಿ ಸೇರಿಸಲಾಗುತ್ತದೆ.
ಸರ್ ಏಕೆ ಬೇಕು?
ಈ ಪ್ರಕ್ರಿಯೆಯಿಂದ ಮತದಾರರ ಪಟ್ಟಿ ಶುದ್ಧವಾಗುತ್ತದೆ. ನಕಲಿ, ಮೃತರು ಮತ್ತು ಡೂಪ್ಲಿಕೇಟ್ ಹೆಸರುಗಳು ತೆಗೆದುಹಾಕಲ್ಪಡುತ್ತವೆ. ಅರ್ಹರಾದವರೆಲ್ಲರೂ ಪಟ್ಟಿಗೆ ಸೇರ್ಪಡೆಯಾಗುತ್ತಾರೆ. ಇದರಿಂದ ನಕಲಿ ಮತದಾನ ಇಲ್ಲವಾಗಿ ಚುನಾವಣೆಗಳು ಹೆಚ್ಚು ನ್ಯಾಯಯುತ ಮತ್ತು ನಿಖರವಾಗುತ್ತವೆ.
ವ್ಯವಸ್ಥೆಯ ಮೇಲೆ ಏನು ಪರಿಣಾಮ
ನಕಲಿ ಮತ್ತು ಅನರ್ಹ ಮತದಾರರ ಹೆಸರುಗಳು ತೆಗೆದುಹಾಕಲ್ಪಡುವುದರಿಂದ ಮತದ ಮೌಲ್ಯ ಹೆಚ್ಚಾಗುತ್ತದೆ. ಅರ್ಹರೆಲ್ಲರೂ ಮತದಾನದ ಹಕ್ಕು ಪಡೆಯುತ್ತಾರೆ. ‘ಒಬ್ಬ ವ್ಯಕ್ತಿ ಒಂದು ಮತ’ ಖಚಿತವಾಗುತ್ತದೆ. ಚುನಾವಣೆಗಳ ಮೇಲೆ ಮತದಾರರ ವಿಶ್ವಾಸ ಹೆಚ್ಚುತ್ತದೆ. ಮತದಾನ ಕೇಂದ್ರಗಳಲ್ಲಿ ಗೊಂದಲ ಕಡಿಮೆಯಾಗುತ್ತದೆ.
ಪರಿಷ್ಕರಣೆ ಪ್ರಕ್ರಿಯೆ ಹೇಗಿರುತ್ತದೆ?
ಮನೆ-ಮನೆಗೆ ಎಣಿಕೆ: ಬೂತ್ ಲೆವೆಲ್ ಅಧಿಕಾರಿಗಳು (ಬಿಎಲ್‌ಒ) ನಿಮ್ಮ ಮನೆಗೆ ಬಂದು ಫಾರ್ಮ್ ನೀಡುತ್ತಾರೆ. ನೀವು ಹೆಸರು, ವಿಳಾಸ, ವಯಸ್ಸು, ಆಧಾರ್ ಇತ್ಯಾದಿ ವಿವರಗಳನ್ನು ಭರ್ತಿ ಮಾಡಿ, ಸಹಿ ಮಾಡಿ ತಿರುಗಿಸಬೇಕು.
ಕರಡು ಮತಪಟ್ಟಿ ಪ್ರಕಟಣೆ: ಎಲ್ಲಾ ಪರಿಶೀಲನೆ ನಂತರ ಹೊಸ ಕರಡು ಮತ ಪಟ್ಟಿ ಪ್ರಕಟವಾಗುತ್ತದೆ.
ಹಕ್ಕು ಮತ್ತು ಆಕ್ಷೇಪಣೆಗಳ ಅವಧಿ: ಈ ಸಮಯದಲ್ಲಿ ನಿಮ್ಮ ಹೆಸರು ಬಿಟ್ಟುಹೋದರೆ ಸೇರಿಸಲು ಅರ್ಜಿ ಸಲ್ಲಿಸಬಹುದು ಅಥವಾ ತಪ್ಪು ವಿವರಗಳ ಬಗ್ಗೆ ಆಕ್ಷೇಪಣೆ ಸಲ್ಲಿಸಬಹುದು.
ಪರಿಶೀಲನೆ ಮತ್ತು ನಿರ್ಧಾರ: ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತಾರೆ.
ಅಂತಿಮ ಮತಪಟ್ಟಿ ಪ್ರಕಟಣೆ: ಎಲ್ಲಾ ಪ್ರಕ್ರಿಯೆಗಳ ನಂತರ ಅಂತಿಮ ಶುದ್ಧ ಮತಪಟ್ಟಿ ಬಿಡುಗಡೆಯಾಗುತ್ತದೆ.
ನೀವು ಏನು ಮಾಡಬೇಕು?
1. ತಕ್ಷಣ ಹೆಸರು ಪರಿಶೀಲಿಸಿ: voters.eci.gov.in ವೆಬ್‌ಸೈಟ್‌ಗೆ ಹೋಗಿ ನಿಮ್ಮ ಹೆಸರು ಮತಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಿ. Voter Helpline App ಡೌನ್‌ಲೋಡ್ ಮಾಡಿ ಮಾಹಿತಿ ಪಡೆಯಿರಿ. 1950 ಸಂಖ್ಯೆಗೆ ‘EPIC <ನಿಮ್ಮ EPIC ನಂಬರ್>;’ ಎಂಬ ಎಸ್‌ಎಂಎಸ್ ಕಳುಹಿಸಿಯೂ ಪರಿಶೀಲಿಸಬಹುದು.
2. ಮನೆಗೆ ಬಿಎಲ್‌ಒ ಬಂದಾಗ: ಮನೆಗೆ ಬರುವ ಬಿಎಲ್‌ಒ ನೀಡುವ ಎಣಿಕೆ ಫಾರ್ಮ್ ಸರಿಯಾಗಿ ತುಂಬಿ, ಸಹಿ ಮಾಡಿ ಹಿಂದಿರುಗಿಸಿ. ಆಧಾರ್, ರೇಷನ್ ಕಾರ್ಡ್, ವಯಸ್ಸು ಸಾಬೀತುಪಡಿಸುವ ದಾಖಲೆಗಳನ್ನು ಸಿದ್ಧವಿರಿಸಿ.
3. ಆನ್‌ಲೈನ್ ಫಾರ್ಮ್ ತುಂಬುವುದು: voters.eci.gov.in ನಲ್ಲಿ ಆನ್‌ಲೈನ್‌ನಲ್ಲೂ ಎಣಿಕೆ ಫಾರ್ಮ್ ತುಂಬಬಹುದು.
4. ಕರಡು ಪಟ್ಟಿ ಬಂದಾಗ: ಹೆಸರು ಬಿಟ್ಟುಹೋಗಿದ್ದರೆ ಫಾರ್ಮ್-6 ಮೂಲಕ ಹಕ್ಕು ಸಲ್ಲಿಸಿ. ತಪ್ಪು ಇದ್ದರೆ ಅಥವಾ ಅನರ್ಹ ಹೆಸರುಗಳಿದ್ದರೆ ಆಕ್ಷೇಪಣೆ ಸಲ್ಲಿಸಿ. ಯಾವುದೇ ಸಂದೇಹವಿದ್ದರೆ ಸ್ಥಳೀಯ ಚುನಾವಣಾ ಕಚೇರಿ ಅಥವಾ ಹೆಲ್ಪ್‌ಲೈನ್ 1950 ಸಂಪರ್ಕಿಸಿ.
2 ಹಂತ ಈಗಾಗಲೇ ಯಶಸ್ವಿ
ಮೊದಲ ಹಂತದ ಸರ್ ಪ್ರಕ್ರಿಯೆ ಬಿಹಾರದಲ್ಲಿ ನಡೆಯಿತು. 2ನೇ ಹಂತದಲ್ಲಿ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ರಾಜಸ್ಥಾನ ಸೇರಿದಂತೆ 9 ರಾಜ್ಯಗಳು ಮತ್ತು ಪುದುಚೇರಿ, ಅಂಡಮಾನ್-ನಿಕೋಬಾರ್, ಲಕ್ಷದ್ವೀಪ - ಈ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಿತು. ಇದೀಗ 3ನೇ ಹಂತದಲ್ಲಿ ಹಿಮಾಚಲ ಪ್ರದೇಶ, ಲಡಾಖ್, ಜಮ್ಮು - ಕಾಶ್ಮೀರ ಹೊರತುಪಡಿಸಿ ಉಳಿದೆಲ್ಲಾ ಕಡೆ ಪರಿಷ್ಕರಣೆ ನಡೆಯಲಿದೆ.
24 ವರ್ಷಗಳ ಬಳಿಕ ಪ್ರಕ್ರಿಯೆ
ಪ್ರತಿ ಚುನಾವಣೆ ವೇಳೆಯೂ ಆಯಾ ಕ್ಷೇತ್ರದಲ್ಲಿ ಮತಪಟ್ಟಿ ಪರಿಷ್ಕರಣೆ ನಡೆಸಲಾಗುತ್ತದೆ. ಆದರೆ ವಿಶೇಷ ಮತಪಟ್ಟಿ ಪರಿಷ್ಕರಣೆ 10-20 ವರ್ಷಗಳಿಗೆ ಒಮ್ಮೆ ನಡೆಸಲಾಗುತ್ತದೆ. ಕರ್ನಾಟಕದಲ್ಲಿ ಈ ಹಿಂದೆ 2002ರಲ್ಲಿ ನಡೆಸಲಾಗಿತ್ತು.
ಇತ್ತೀಚಿನ ವಿವಾದಗಳು:
1. ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ತಮಿಳುನಾಡು ಇತ್ಯಾದಿ ರಾಜ್ಯಗಳಲ್ಲಿ ಕೋಟಿಗಟ್ಟಲೆ ಹೆಸರುಗಳು (ಉದಾ: ಬಂಗಾಳವೊಂದರಲ್ಲೇ ಸುಮಾರು 91 ಲಕ್ಷ) ತೆಗೆದುಹಾಕಲ್ಪಟ್ಟಿವೆ. ಇದು ಅರ್ಹ ಮತದಾರರನ್ನು ಹೊರಗಿಡುತ್ತಿದೆ ಎಂಬ ಆರೋಪ.
2. ಸರ್ ಅನ್ನು ಬಿಜೆಪಿಗೆ ಅನುಕೂಲವಾಗುವಂತೆ ಮಾಡಲಾಗಿದೆ ಎಂದು ಟಿಎಂಸಿ, ಕಾಂಗ್ರೆಸ್, ಡಿಎಂಕೆ ಮೊದಲಾದ ವಿರೋಧ ಪಕ್ಷಗಳು ಆರೋಪಿಸುತ್ತಿವೆ. ವಿಶೇಷವಾಗಿ ಮುಸ್ಲಿಮರು, ವಲಸಿಗರು, ಬಡವರು ಮತ್ತು ಯುವಕರ ಮೇಲೆ ಇದು ಹೆಚ್ಚು ಪರಿಣಾಮ ಬೀರಿದೆ ಎನ್ನುವ ಆಕ್ಷೇಪ.
3. ಹೆಸರು, ಆಧಾರ್ ಹೊಂದಾಣಿಕೆಯಲ್ಲಿ ಸಣ್ಣ ವ್ಯತ್ಯಾಸಗಳಿಗೂ ಹೆಸರು ತೆಗೆದುಹಾಕಲಾಗುತ್ತಿದೆ. ನೋಟಿಸ್ ಇಲ್ಲದೆ ಕೈಬಿಡಲಾಗುತ್ತಿದೆ ಮತ್ತು ಪ್ರಕ್ರಿಯೆಗೆ ಎಐ ಸಾಫ್ಟ್‌ವೇರ್ ಬಳಸಲಾಗುತ್ತಿದೆ ಎಂಬ ಆರೋಪವಿದೆ.
4. ಬಿಎಲ್‌ಒಗಳ ಮೇಲೆ ತೀವ್ರ ಕೆಲಸದ ಒತ್ತಡ, ಅದರಿಂದಾಗಿ ಸಾವು, ವಲಸಿಗರಿಗೆ ತೊಂದರೆ, ಹೆಸರು ಕಳೆದುಕೊಳ್ಳುವ ಭೀತಿಯಿಂದ ಆತ್ಮಹತ್ಯೆ ಮೊದಲಾದ ಆರೋಪಗಳನ್ನು ಪ. ಬಂಗಾಳದಲ್ಲಿ ಟಿಎಂಸಿ ಮಾಡಿದೆ.
ಎಷ್ಟು ಹೆಸರಿಗೆ ಕೊಕ್?
ಉತ್ತರ ಪ್ರದೇಶದಲ್ಲಿ ಸುಮಾರು 2 ಕೋಟಿ, ಪ. ಬಂಗಾಳದಲ್ಲಿ ಸುಮಾರು 91 ಲಕ್ಷ ಹಾಗೂ ತಮಿಳುನಾಡಿನಲ್ಲಿ ಸುಮಾರು 97 ಲಕ್ಷ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಒಟ್ಟಾರೆ ಎರಡೂ ಹಂತದ ಸರ್‌ನಲ್ಲಿ ಅಂದಾಜು 7 ಕೋಟಿ ಹೆಸರುಗಳನ್ನು ತೆಗೆದುಹಾಕಲಾಗಿದೆ.
