ಒಂದೇ ಕುಟುಂಬಕ್ಕೆ ಸೇರಿದ ಸೊಸೆಯಂದಿರಾದರೂ 2 ದಶಕಗಳಲ್ಲಿ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಳ್ಳದೆ, ಪರಸ್ಪರರ ಬಗ್ಗೆ ಎಂದಿಗೂ ಮಾತನಾಡಿಕೊಳ್ಳದೆ ಅಂತರ ಕಾಪಾಡಿಕೊಂಡು ಬಂದಿರುವುದು ನೆಹರು-ಗಾಂಧಿ ಕುಟುಂಬಕ್ಕೆ ಸೇರಿದ ಸೋನಿಯಾ ಮತ್ತು ಮನೇಕಾ ಗಾಂಧಿ ಅವರ ವಿಶೇಷತೆ

ನವದೆಹಲಿ: ಒಂದೇ ಕುಟುಂಬಕ್ಕೆ ಸೇರಿದ ಸೊಸೆಯಂದಿರಾದರೂ 2 ದಶಕಗಳಲ್ಲಿ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಳ್ಳದೆ, ಪರಸ್ಪರರ ಬಗ್ಗೆ ಎಂದಿಗೂ ಮಾತನಾಡಿಕೊಳ್ಳದೆ ಅಂತರ ಕಾಪಾಡಿಕೊಂಡು ಬಂದಿರುವುದು ನೆಹರು-ಗಾಂಧಿ ಕುಟುಂಬಕ್ಕೆ ಸೇರಿದ ಸೋನಿಯಾ ಮತ್ತು ಮನೇಕಾ ಗಾಂಧಿ ಅವರ ವಿಶೇಷತೆ.

ಆದರೆ ಮಂಗವಾರ ಬಿಡುಗಡೆಯಾದ ತಮ್ಮ ಆತ್ಮಕತೆ ‘ಬಿಲಾಂಗಿಂಗ್‌: ಎ ಜರ್ನಿ ಆಫ್‌ ಲವ್’ನಲ್ಲಿ ಸೋನಿಯಾ ಅವರು ಸಂಜಯ್‌ ಗಾಂಧಿಯವರ ಪತ್ನಿ ಹಾಗೂ ತಮ್ಮ ವಾರಗಿತ್ತಿ ಮನೇಕಾ ಗಾಂಧಿ ಕುರಿತು ಇದುವರೆಗೂ ಎಲ್ಲಿಯೂ ಬೆಳಕಿಗೆ ಬಾರದ ಹಲವು ಸ್ಫೋಟಕ ವಿಚಾರಗಳನ್ನು ತೆರೆದಿಟ್ಟಿದ್ದಾರೆ. ತಮ್ಮಿಬ್ಬರ ನಡುವಣ ಕಹಿ ಸಂಬಂಧದ ಕುರಿತು ಬೆಳಕು ಚೆಲ್ಲಿದ್ದಾರೆ. ಮನೆಯ ಕಿರಿಯ ಸೊಸೆಯಾಗಿ ಮನೇಕಾ ಆಗಮಿಸಿದಾಗಿನಿಂದ ಹಿಡಿದು, ಅವರು ಬಿಜೆಪಿ ಸೇರ್ಪಡೆಯಾಗುವವರೆಗಿನ ಹಲವು ಕಹಿ ಘಟನಾವಳಿಗಳನ್ನು ಸೋನಿಯಾ ಮೆಲುಕು ಹಾಕಿದ್ದು, ವಾರಗಿತ್ತಿಯರ ನಡುವಿನ ‘ವಾರ್‌’ ಗಮನ ಸೆಳೆದಿದೆ.

‘1973ರ ಕೊನೆಯ ಅವಧಿಯಲ್ಲಿ ಸಂಜಯ್ ಗಾಂಧಿ ಅವರಿಗೆ ತಮಗಿಂತ 10 ವರ್ಷ ಕಿರಿಯ ಹಾಗೂ ಅಪ್ರಾಪ್ತ ವಯಸ್ಕಳಾಗಿದ್ದ ಸುಂದರ ಮತ್ತು ಉತ್ಸಾಹಿ ಹುಡುಗಿ ಮನೇಕಾ ಗಾಂಧಿ ಅವರ ಪರಿಚಯವಾಗಿತ್ತು. ಮರು ವರ್ಷವೇ ಇಬ್ಬರೂ ವಿವಾಹಬಂಧನಕ್ಕೆ ಒಳಗಾಗಿ, 18ನೇ ವಯಸ್ಸಿನಲ್ಲಿ ಮನೇಕಾ ಗಾಂಧಿ ಅವರು ನಮ್ಮ ಕುಟುಂಬದ ಭಾಗವಾದರು’ ಎಂದು ಸೋನಿಯಾ ಉಲ್ಲೇಖಿಸಿದ್ದಾರೆ.

ಮನೆ ವಾತಾವರಣ ಬದಲು:

‘ಮನೆಯಲ್ಲಿ ‘ಚೋಟಾ ಬಹು’ (ಕಿರಿಯ ಸೊಸೆ) ಎಂದೇ ಕರೆಯಲ್ಪಡುತ್ತಿದ್ದ ಈ ಚುರುಕಾದ ಮತ್ತು ಮಾತಿನ ಮಲ್ಲಿ ಹುಡುಗಿಯ ಆಗಮನ ಮನೆಯ ವಾತಾವರಣಕ್ಕೆ ಹೊಸ ಚೈತನ್ಯ ತಂದಿತು. ಆದರೆ ದಿನಕಳೆದಂತೆ ಸಣ್ಣಪುಟ್ಟ ಕಿರಿಕಿರಿಗಳು ಶಮನವಾಗದೆ ಮನೆಯ ವಾತಾವರಣವೇ ಬದಲಾಗತೊಡಗಿತು. ನಾನು ಹಾಗೂ ಮನೇಕಾ ಇಬ್ಬರೂ ಮನೆಯ ಸಮಾನ ಪುತ್ರಿಯರೆಂದು ಭಾವಿಸಿದ್ದರೂ, ಮನೇಕಾ ಅದನ್ನು ಕೀಳಾಗಿ ಕಂಡಂತೆ ತೋರುತ್ತಿತ್ತು. ಆಕೆ ಉದ್ಧಟತನದಿಂದ ಮಾತನಾಡಿದಾಗ ಹೆಚ್ಚಾಗಿ ನಾನು ಶಾಂತಿ ಕಾಪಾಡಲು ಮೌನವಾಗುತ್ತಿದ್ದೆ. ಆದರೆ ಮಿತಿ ಮೀರಿದಾಗ ನಾನೂ ಕೂಡ ಖಡಕ್ಕಾಗಿ ಉತ್ತರಿಸುತ್ತಿದ್ದೆ’ ಎಂದು ಪುಸ್ತಕದಲ್ಲಿ ಬರೆದಿದ್ದಾರೆ.

ಸಂಬಂಧದಲ್ಲಿ ಕಹಿ:

‘ವಿವಾಹವಾದ ಕೆಲವೇ ದಿನಗಳಲ್ಲಿ ಸಂಜಯ್ ಮತ್ತು ಮನೇಕಾ ನಡುವಿನ ಮಾತಿನ ಚಕಮಕಿಗಳು ಮನೆಯವರ ಗಮನಕ್ಕೆ ಬರತೊಡಗಿದವು. ಅವರ ಕೋಣೆಯಲ್ಲಿ ನಡೆಯುತ್ತಿದ್ದ ಆ ಜಗಳ ನಾಲ್ಕು ಗೋಡೆಗಳಿಂದಾಚೆಗೂ ಕೇಳಲಾರಂಭಿಸಿತು. ಕೋಪಗೊಂಡಾಗ ಮನೇಕಾ ಅವರು ಅತ್ತೆ ಇಂದಿರಾ ಗಾಂಧಿ ಅವರ ಸಮ್ಮುಖದಲ್ಲೇ ಮನೆಯಲ್ಲಿ ಯಾರೂ ಬಳಸದ ಅಶ್ಲೀಲ ಪದಗಳನ್ನು ಬಳಸುತ್ತಿದ್ದುದು ಸಂಜಯ್‌ಗೆ ಮುಜುಗರ ತಂದರೆ, ಇತರರಿಗೆ ಆಘಾತ ಉಂಟುಮಾಡುತ್ತಿತ್ತು. ಸಂಜಯ್ ಅವರೊಂದಿಗೆ ರಾಜಕೀಯ ಕಾರ್ಯಕ್ರಮಗಳಿಗೆ ತೆರಳಲು ಪ್ರಾರಂಭಿಸಿದಾಗ ಮನೇಕಾ ಸ್ವಲ್ಪ ಮಟ್ಟಿಗೆ ಶಾಂತರಾದಂತೆ ಕಂಡರೂ, ಆ ಬಳಿಕ ಅವರ ಪ್ರಭಾವ ಸಂಜಯ್ ಮತ್ತು ರಾಜೀವ್ ಗಾಂಧಿ ನಡುವಿನ ಸಹೋದರತ್ವದ ಮೇಲೂ ಬೀಳತೊಡಗಿತು. ಅಲ್ಲಿಯವರೆಗೆ ಅತ್ಯಂತ ಆತ್ಮೀಯರಾಗಿದ್ದ ಸಹೋದರರ ಸಂಬಂಧದಲ್ಲಿ ಕಹಿ ಮೂಡಲು ಪ್ರಾರಂಭವಾಯಿತು’ ಎಂದು ಸೋನಿಯಾ ವಿವರಿಸಿದ್ದಾರೆ.

ಅತ್ತೆ ಜತೆ ವಿರಸ:

‘ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂಜಯ್ ಅವರ ಕಾರ್ಯಶೈಲಿ ಮತ್ತು ಸಂದರ್ಶನಗಳಲ್ಲಿನ ಹೇಳಿಕೆಗಳು ಪ್ರಧಾನಿ ಇಂದಿರಾ ಗಾಂಧಿಯವರ ಆಡಳಿತದ ಮೇಲೆಯೇ ಟೀಕೆಯಂತೆ ಬಿಂಬಿತವಾಗತೊಡಗಿದವು. ಸಂಜಯ್ ಅವರ ರಾಜಕೀಯ ಮಹತ್ವಾಕಾಂಕ್ಷೆಗಳಿಗೆ ಪಕ್ಷದಲ್ಲಿದ್ದ ಕೆಲವು ಬಣಗಳು ಬೆಂಬಲ ನೀಡಿದವು. ಮನೇಕಾ ಅವರು ಸಂಜಯ್‌ಗೆ ಸರಿ-ತಪ್ಪು ತಿಳಿಸುವ ಬದಲು ಅವರನ್ನು ಇನ್ನಷ್ಟು ಪ್ರಚೋದಿಸುತ್ತಿದ್ದಾರೆ ಎಂದು ಅತ್ತೆ ಇಂದಿರಾ ಭಾವಿಸಿದ್ದರು. ಕ್ಯಾಬಿನೆಟ್ ಕಾರ್ಯದರ್ಶಿ ಪಿ.ಎನ್. ಧಾರ್ ಅವರ ಬಳಿ ಇಂದಿರಾ ಗಾಂಧಿ ‘ಅವಳಿಗೆ ಈಗಲೇ ರೆಕ್ಕೆಗಳು ಬರತೊಡಗಿವೆ’ ಎಂದು ಹೇಳಿದ್ದರು’ ಎಂದು ಸೋನಿಯಾ ಉಲ್ಲೇಖಿಸಿದ್ದಾರೆ.

ಕುಟುಂಬದಲ್ಲಿ ಬಿರುಕು:

‘1978ರ ಚುನಾವಣೆಯ ಭೀಕರ ಸೋಲಿಗೆ ಸಂಜಯ್ ಗಾಂಧಿ ಅವರ ಹಠಮಾರಿತನ, ಅವಿವೇಕದ ನಿರ್ಧಾರಗಳು ಮತ್ತು ತಾಯಿಯ ಅರಿವಿಗೆ ತಿಳಿಸದೆ ಕೈಗೊಂಡ ಕ್ರಮಗಳೇ ಕಾರಣ ಎಂದು ರಾಜೀವ್ ಪ್ರತಿಪಾದಿಸಿದಾಗ, ಕುಟುಂಬದಲ್ಲಿ ಮನೇಕಾರ ವಿರೋಧ ಭಾವನೆ ಇನ್ನಷ್ಟು ಹೆಚ್ಚಾಯಿತು. 1980ರ ಜೂ.23ರಂದು ಸಂಜಯ್ ವಿಮಾನ ಅಪಘಾತದಲ್ಲಿ ನಿಧನರಾದ ನಂತರ ಪರಿಸ್ಥಿತಿ ಇನ್ನಷ್ಟು ಗಂಭೀರವಾಯಿತು. ಮನೇಕಾರ ತಾಯಿ ಸಂಜಯ್ ಬೆಂಬಲಿಗರನ್ನು ಒಟ್ಟುಗೂಡಿಸಿ ತಮ್ಮ ಮಗಳಿಗೆ ರಾಜಕೀಯ ಸ್ಥಾನಮಾನ ನೀಡುವಂತೆ ಒತ್ತಡ ಹೇರಲು ಯತ್ನಿಸಿದರು. ಆದರೆ 23 ವರ್ಷದ ಮನೇಕಾ ಇನ್ನೂ ಅಪ್ರಬುದ್ಧರಾಗಿದ್ದಾರೆ ಮತ್ತು 3 ತಿಂಗಳ ಅವರ ಮಗುವಿಗೆ ತಾಯಿಯ ಅಗತ್ಯವಿದೆ ಎಂದು ಇಂದಿರಾ ಭಾವಿಸಿದ್ದರು’ ಎಂದು ನೆನಪಿಸಿಕೊಂಡಿದ್ದಾರೆ.

ಪಕ್ಷವಿರೋಧಿ ಚಟುವಟಿಕೆ:

‘ಸಂಜಯ್ ನಿಧನದ ಒಂದು ವರ್ಷದ ಒಳಗಾಗಿ, ಮೊಮ್ಮಗ ಫಿರೋಜ್ ವರುಣ್ ಗಾಂಧಿಯವರ ಮೊದಲ ಹುಟ್ಟುಹಬ್ಬವನ್ನು ಇಂದಿರಾ ಗಾಂಧಿಯವರ ಎದುರಾಳಿಯಾಗಿದ್ದ ಮತ್ತು ಆರ್‌ಎಸ್ಎಸ್ ಬೆಂಬಲಿತರಾಗಿದ್ದ ವಸುಂಧರಾ ರಾಜೇ ಅವರ ಮನೆಯಲ್ಲಿ ಆಚರಿಸುವ ಮೂಲಕ ಮನೇಕಾ ಅವರು ಕುಟುಂಬದಿಂದ ದೂರವಾಗುವ ಸ್ಪಷ್ಟ ಮುನ್ಸೂಚನೆ ನೀಡಿದರು. ನಂತರ ಮನೇಕಾ ತಮ್ಮ ‘ಸೂರ್ಯ’ ನಿಯತಕಾಲಿಕೆಯನ್ನು ಆರ್‌ಎಸ್‌ಎಸ್ ಸದಸ್ಯರೊಬ್ಬರಿಗೆ ಮಾರಾಟ ಮಾಡಿದ್ದು ಇಂದಿರಾ ಗಾಂಧಿಯವರಿಗೆ ತೀವ್ರ ಆಘಾತವನ್ನುಂಟುಮಾಡಿತು.

ಇಂದಿರಾ ಲಂಡನ್ ಪ್ರವಾಸದಲ್ಲಿದ್ದಾಗ, ಮನೇಕಾ ಮನೆಯಿಂದ ತಮ್ಮ ವಸ್ತುಗಳನ್ನು ಸ್ಥಳಾಂತರಿಸುತ್ತಿದ್ದಾರೆ ಎಂಬ ಸುದ್ದಿ ತಲುಪಿತು. ವಾಪಸ್ ಬಂದ ನಂತರ ಇಂದಿರಾ ಗಾಂಧಿ ಅವರು ಮನೇಕಾರನ್ನು ಗದರಿಸಿ, ‘ಪಕ್ಷವಿರೋಧಿ ಚಟುವಟಿಕೆಗಳನ್ನು ನಿಲ್ಲಿಸಬೇಕು, ಇಲ್ಲವೇ ಮನೆ ತೊರೆಯಬೇಕು’ ಎಂದು ಸ್ಪಷ್ಟವಾಗಿ ಹೇಳಿದರು. ಮನೇಕಾ ತಮ್ಮ ನಿರ್ಗಮನದ ಹೊಣೆಯನ್ನು ಇಂದಿರಾ, ರಾಜೀವ್ ಮತ್ತು ನನ್ನ ಮೇಲೆ ಹೊರಿಸಿ ಮನೆ ತೊರೆದರು’ ಎಂದು ಸೋನಿಯಾ ಆರೋಪಿಸಿದ್ದಾರೆ.

ಬಿಜೆಪಿ ಸೇರ್ಪಡೆ:

‘ಮುಂದಿನ ದಿನಗಳಲ್ಲಿ ಫಿರೋಜ್‌ ವರುಣ್ ಗಾಂಧಿಯನ್ನು ಭೇಟಿಯಾಗುವ ಹಕ್ಕಿಗಾಗಿ ಕುಟುಂಬವು ಕಾನೂನು ಹೋರಾಟ ನಡೆಸಬೇಕಾಯಿತು. 1984ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ ಮನೇಕಾ ಅವರನ್ನು ರಾಜೀವ್ ಸೋಲಿಸಿದರು. ನಂತರ ಮನೇಕಾ 1988ರಲ್ಲಿ ವಿ.ಪಿ. ಸಿಂಗ್ ಅವರ ಜನತಾದಳಕ್ಕೆ ಸೇರಿ, 2004ರಲ್ಲಿ ಅಧಿಕೃತವಾಗಿ ಬಿಜೆಪಿ ಪ್ರವೇಶಿಸಿದರು’ ಎಂದು ವಾರಗಿತ್ತಿಯ ಕುರಿತು ಹಲವು ಸಂಗತಿಗಳನ್ನು ಸೋನಿಯಾ ವಿವರಿಸಿದ್ದಾರೆ.