ಬ್ರ್ಯಾಂಡ್ ಬೆಂಗ್ಳೂರಿಗೆ ಬಜೆಟ್‌ನಲ್ಲಿ ಹಲವು ಯೋಜನೆ ಘೋಷಣೆ : ಡಿ.ಕೆ. ಶಿವಕುಮಾರ್‌

| N/A | Published : Mar 09 2025, 01:50 AM IST / Updated: Mar 09 2025, 04:14 AM IST

dk shivakumar

ಸಾರಾಂಶ

ಬೆಂಗಳೂರಿನ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‌ನಲ್ಲಿ ಬ್ರ್ಯಾಂಡ್‌ ಬೆಂಗಳೂರು ಅಡಿ ಹಲವು ಯೋಜನೆ ಘೋಷಿಸಲಾಗಿದ್ದು, ಅದರಿಂದ ಮಹಾನಗರದ 1.40 ಕೋಟಿ ಜನರಿಗೆ ಅನುಕೂಲವಾಗಲಿದೆ ಎಂದು ಡಿ.ಕೆ. ಶಿವಕುಮಾರ್‌ ಅಭಿಪ್ರಾಯಪಟ್ಟರು.

 ಬೆಂಗಳೂರು : ಬೆಂಗಳೂರಿನ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‌ನಲ್ಲಿ ಬ್ರ್ಯಾಂಡ್‌ ಬೆಂಗಳೂರು ಅಡಿ ಹಲವು ಯೋಜನೆ ಘೋಷಿಸಲಾಗಿದ್ದು, ಅದರಿಂದ ಮಹಾನಗರದ 1.40 ಕೋಟಿ ಜನರಿಗೆ ಅನುಕೂಲವಾಗಲಿದೆ ಎಂದು ಡಿ.ಕೆ. ಶಿವಕುಮಾರ್‌ ಅಭಿಪ್ರಾಯಪಟ್ಟರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರ್ಯಾಂಡ್‌ ಬೆಂಗಳೂರಿನ ಮಹತ್ವದ ಯೋಜನೆಗಳಿಗೆ ಬಜೆಟ್‌ನಲ್ಲಿ ಅನುದಾನ ನಿಗದಿ ಮಾಡಲಾಗಿದೆ. ಟನಲ್‌ ರಸ್ತೆ, ಮೆಟ್ರೋ ಮಾರ್ಗಗಳಲ್ಲಿ ಡಬ್ಬಲ್‌ ಡೆಕ್ಕರ್‌ ಮೇಲ್ಸೇತುವೆ, ರಾಜಕಾಲುವೆ ಅಕ್ಕಪಕ್ಕದ 50 ಅಡಿ ಬಫರ್‌ ವಲಯದಲ್ಲಿ ₹3000 ಕೋಟಿ ವೆಚ್ಚದಲ್ಲಿ 300 ಕಿಮೀ ಉದ್ದದ ರಸ್ತೆ ನಿರ್ಮಾಣ ಹೀಗೆ ಹಲವು ಯೋಜನೆ ಘೋಷಿಸಲಾಗಿದೆ. 

ಇವುಗಳಿಂದ ನಗರದಲ್ಲಿ 700 ರಿಂದ 800 ಕಿಮೀ ಉದ್ದದಷ್ಟು ಹೊಸ ರಸ್ತೆ ನಿರ್ಮಾಣವಾಗಲಿದೆ. ಜನರ ಸಮಸ್ಯೆಗೆ ಪರಿಹಾರ ನೀಡಲು ಸರ್ಕಾರ ಸಾಲ ಮಾಡಿಯಾದರೂ ಯೋಜನೆ ಅನುಷ್ಠಾನಗೊಳಿಸುತ್ತದೆ. ಇಡೀ ವಿಶ್ವವೇ ಬೆಂಗಳೂರಿನತ್ತ ನೋಡುತ್ತಿದ್ದು, ನಗರದ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದೆ ಎಂದು ಹೇಳಿದರು.

ನಗರಕ್ಕೆ ಮನಮೋಹನ್‌ ಸಿಂಗ್‌ ಕೊಡುಗೆ ಅಪಾರವಿದೆ: ಡಿಕೆಶಿ

ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರ ಹೆಸರಿಟ್ಟಿರುವುದಕ್ಕೆ ವಿರೋಧ ವ್ಯಕ್ತವಾಗಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಬಿಜೆಪಿ ಅವರು ಯೋಜನೆಗಳಿಗೆ ದೀನದಯಾಳ್‌ ಹೆಸರಿಟ್ಟರು. ಆಗ ನಾವು ವಿರೋಧಿಸಲಿಲ್ಲ.

ಡಾ.ಮನಮೋಹನ್‌ ಸಿಂಗ್‌ ಅವರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೋಗುವ ಮೇಲ್ಸೇತುವೆ, ಎಲೆಕ್ಟ್ರಾನಿಕ್‌ ಸಿಟಿ ಹಾಗೂ ನೆಲಮಂಗಲ ಮೇಲ್ಸೇತುವೆ, ಜೆಎನ್‌ ನರ್ಮ್‌ ಯೋಜನೆ, ನರೇಗಾ, ಶಿಕ್ಷಣ ಹಕ್ಕು, ಮಾಹಿತಿ ಹಕ್ಕು, ಆಹಾರ ಭದ್ರತಾ ಕಾಯ್ದೆ ಹೀಗೆ ಹಲವು ಯೋಜನೆ ಜಾರಿಗೊಳಿಸಿದರು. ಬಿಜೆಪಿ ಅವರು ಅಂತಹ ಯಾವುದಾದರೂ ಒಂದು ಯೋಜನೆ ಮಾಡಿದ್ದಾರಾ? ದೇಶ ಹಾಗೂ ಕರ್ನಾಟಕಕ್ಕೆ ಕೊಡುಗೆ ನೀಡಿರುವ ಸಿಂಗ್‌ ಅವರು ಕೊಟ್ಟಿರುವ ಕೊಡುಗೆಯನ್ನು ಗಮನಿಸಿದರೆ ಅವರಿಗೆ ಮತ್ತಷ್ಟು ಮಾನ್ಯತೆ ನೀಡಬೇಕು ಎಂದು ಹೇಳಿದರು.