ಕಲ್ಲು ಗಣಿಗಾರಿಕೆಗೆ ಸಂಬಂಧಿಸಿ ಎರಡು ಕಡೆ ರಾಜಧನ ಸಂಗ್ರಹಿಸುತ್ತಿರುವ ಕ್ರಮ ಕೈಬಿಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.18ರಿಂದ ರಾಜ್ಯಾದ್ಯಂತ ಕಲ್ಲು ಕ್ವಾರಿ, ಜಲ್ಲಿ ಕ್ರಷರ್ ಹಾಗೂ ಎಂ.ಸ್ಯಾಂಡ್ ಘಟಕಗಳನ್ನು ಬಂದ್ ಮಾಡಿ ಹೋರಾಟ

ಬೆಂಗಳೂರು : ಕಲ್ಲು ಗಣಿಗಾರಿಕೆಗೆ ಸಂಬಂಧಿಸಿ ಎರಡು ಕಡೆ ರಾಜಧನ ಸಂಗ್ರಹಿಸುತ್ತಿರುವ ಕ್ರಮ ಕೈಬಿಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.18ರಿಂದ ರಾಜ್ಯಾದ್ಯಂತ ಕಲ್ಲು ಕ್ವಾರಿ, ಜಲ್ಲಿ ಕ್ರಷರ್ ಹಾಗೂ ಎಂ.ಸ್ಯಾಂಡ್ ಘಟಕಗಳನ್ನು ಬಂದ್ ಮಾಡಿ ಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟ ಹೇಳಿದೆ.

ಇದರಿಂದ ಶುಕ್ರವಾರದಿಂದ ರಾಜ್ಯದಲ್ಲಿ ಕಟ್ಟಡ ಸೇರಿ ಇತರೆ ನಿರ್ಮಾಣ ಕಾಮಗಾರಿಗಳಿಗೆ ಅಗತ್ಯ ಸಾಮಗ್ರಿಗಳ ಅಭಾವ ಸೃಷ್ಟಿಯಾಗುವ ಸಾಧ್ಯತೆ ಇದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಒಕ್ಕೂಟದ ಅಧ್ಯಕ್ಷ ಡಿ.ಸಿದ್ಧರಾಜು, ಎರಡು ಕಡೆ( ಜಲ್ಲಿ ಉತ್ಪಾದಿಸುವಾಗ, ಸಾಗಣೆ ಮಾಡುವಾಗ) ವಿಧಿಸುತ್ತಿರುವ ರಾಜಧನ ಕೈಬಿಡಲು ಹಲವಾರು ಬಾರಿ ಮನವಿ ಮಾಡಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಇದರಿಂದ ಕಲ್ಲುಗಣಿಗಾರಿಕೆ ನಡೆಸುವುದು ಕಷ್ಟವಾಗುತ್ತಿದೆ. ಸರ್ಕಾರದ ಧೋರಣೆಯಿಂದ ಕ್ರಷರ್‌ ಮಾಲೀಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದರು.

ಎಲ್ಲ ಜಿಲ್ಲಾ ಘಟಕಗಳು ಸೇರಿ ಕರ್ನಾಟಕ ಪಟ್ಟಾ ಲ್ಯಾಂಡ್‌ ಕ್ವಾರಿ ಆ್ಯಂಡ್‌ ಜಲ್ಲಿ ಸ್ಟೋನ್‌ ಕ್ರಷರ್‌ ವೋನರ್ಸ್‌ ಅಸೋಸಿಯೇಷನ್‌ ಬಂದ್‌ ಬೆಂಬಲಿಸಿವೆ. ಎರಡು ಕಡೆ ರಾಜಧನ ವಾಪಸ್‌ ಪಡೆಯುವ ಜೊತೆ, ಕೆಎಂಎಂಸಿಆರ್-1994ರ ನಿಯಮಗಳಿಗೆ ಮಾಡಿರುವ ತಿದ್ದುಪಡಿಗಳು ಅಸಮರ್ಪಕವಾಗಿದ್ದು, ನಿಯಮಗಳನ್ನು ಸಮಗ್ರವಾಗಿ ಪರಿಷ್ಕರಿಸಬೇಕು. ಯಾವ ಪ್ರಮಾಣದಲ್ಲಿ ಕಲ್ಲು ಗಣಿ ಸಂಪತ್ತು ತೆಗೆಯಲಾಗಿದೆ ಎಂಬುದನ್ನು ನಿರ್ಧರಿಸಲು ದೂರಸಂವೇದಿ ತಂತ್ರಜ್ಞಾನದಡಿ ನಡೆಸುತ್ತಿರುವ ಸಮೀಕ್ಷೆಯೂ ಅವೈಜ್ಞಾನಿಕವಾಗಿದ್ದು, ಇದನ್ನು ನಿಲ್ಲಿಸಬೇಕು. ಬೇಡಿಕೆ ಈಡೇರಿಸದಿದ್ದರೆ ಸರ್ಕಾರದ ವಿರುದ್ಧ ಕಾನೂನು ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.

ಚೆಕ್‌ಪೋಸ್ಟ್‌ಗಳಲ್ಲಿ ಕಾವಲು:

ನಿರ್ಮಾಣ ಕಾಮಗಾರಿಗಳಿಗೆ ಅಗತ್ಯ ಜಲ್ಲಿ ಮತ್ತು ಎಂ.ಸ್ಯಾಂಡ್ ಪೂರೈಕೆ ಸ್ಥಗಿತಗೊಳಿಸಲಾಗುವುದು. ಹೊರ ರಾಜ್ಯಗಳಿಂದ ಕಲ್ಲುಗಣಿ ಸಂಪನ್ಮೂಲ ರಾಜ್ಯಕ್ಕೆ ಬರದಂತೆ ತಡೆಯಲು ಚೆಕ್‌ ಪೋಸ್ಟ್‌ ಗಳಲ್ಲಿ ಕ್ರಮ ತೆಗೆದುಕೊಂಡಿದ್ದೇವೆ ಎಂದರು.

ಶ್ವೇತಪತ್ರಕ್ಕೆ ಆಗ್ರಹ:

ಕಾಮಗಾರಿ ನಿರ್ವಹಿಸುವ ಇಲಾಖೆಗಳಲ್ಲೂ ರಾಜಧನ ಪಾವತಿಸಿಕೊಳ್ಳಲಾಗುತ್ತಿದೆ. ಈವರೆಗೆ ಕಲ್ಲು ಗಣಿಗಾರಿಕೆ ವಲಯದಿಂದ ಸರ್ಕಾರಕ್ಕೆ ಸಂದಾಯವಾಗಿರುವ ಒಟ್ಟು ರಾಜಧನದ ಮೊತ್ತದ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಸಿದ್ದರಾಜು ಒತ್ತಾಯಿಸಿದರು.

ಸಂಘದ ಉಪಾಧ್ಯಕ್ಷರಾದ ವಾಗೀಶ್, ಅಬ್ದುಲ್ ಮಜಿದ್, ಮನೋಜ್ ಶೆಟ್ಟರ್, ಪಂಚಮಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಸಿ.ಎಸ್. ಭಾಸ್ಕರ್ ಉಪಸ್ಥಿತರಿದ್ದರು.