ಶಿವಾನಂದ ಗೊಂಬಿ
ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ದೊಡ್ಡ ತಲೆ ನೋವಾಗಿದ್ದ ಕಟ್ಟಡ ತ್ಯಾಜ್ಯಕ್ಕೆ ಮುಕ್ತಿ ನೀಡಲು ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಕಟ್ಟಡ ತ್ಯಾಜ್ಯದಿಂದ ಪೆವರ್ಸ್, ಎಂ-ಸ್ಯಾಂಡ್ ಉತ್ಪಾದನೆಗೆ ಸಜ್ಜಾಗಿದೆ.
ರಾಜ್ಯದ ಎರಡನೇ ದೊಡ್ಡ ನಗರವಾಗಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಅಪಾರ್ಟ್‌ಮೆಂಟ್, ಕಲ್ಯಾಣ ಮಂಟಪ, ದೊಡ್ಡ ದೊಡ್ಡ ಮಾಲ್... ಹೀಗೆ ಮುಗಿಲೆತ್ತರ ಕಟ್ಟಡಗಳ ನಿರ್ಮಾಣ ಎಗ್ಗಿಲ್ಲದೇ ನಡೆಯುತ್ತಲೇ ಇರುತ್ತವೆ. ಇವುಗಳಿಂದ ನೂರಾರು ಟನ್ ತ್ಯಾಜ್ಯ ಬರುತ್ತಲೇ ಇರುತ್ತದೆ. ಇದರೊಂದಿಗೆ ಹಳೆ ಕಟ್ಟಡಗಳ ತೆರವಿನಿಂದ ಉತ್ಪಾದನೆಯಾಗುವ ತ್ಯಾಜ್ಯವೂ ಅಷ್ಟಿಷ್ಟಲ್ಲ.ಸಮರ್ಪಕ ನಿರ್ವಹಣೆ ಇಲ್ಲ:
ಹೀಗೆ ಉತ್ಪಾದನೆಯಾಗುವ ಕಟ್ಟಡ ತ್ಯಾಜ್ಯಗಳ ನಿರ್ವಹಣೆ ವೈಜ್ಞಾನಿಕವಾಗಿ ಆಗುತ್ತಿಲ್ಲ. ಯಾವುದಾದರೂ ಟ್ರ್ಯಾಕ್ಟರ್‌ಗಳಲ್ಲಿ ತುಂಬಿಕೊಂಡು ಹೋಗಿ ಊರ ಹೊರವಲಯಗಳಲ್ಲಿ ರಸ್ತೆ ಬದಿಗಳಲ್ಲೇ ಎಸೆಯಲಾಗುತ್ತದೆ. ಇದರಿಂದ ನಗರದ ಸೌಂದರ್ಯಕರಣಕ್ಕೂ ಧಕ್ಕೆಯುಂಟಾಗುತ್ತದೆ. ಜತೆಗೆ ಹೊಸ ಲೇಔಟ್ ಮಾಡುವ ಡೆವಲಪರ್ಸ್ ಇಂಥ ಕಟ್ಟಡ ತ್ಯಾಜ್ಯವನ್ನೇ ಹೊಸ ಲೇಔಟ್‌ಗಳಲ್ಲಿನ ರಸ್ತೆ ನಿರ್ಮಾಣಕ್ಕೆ ಬಳಸುತ್ತವೆ. ಇದರಿಂದ ಆ ರಸ್ತೆಗಳು ಕೂಡ ಹೆಚ್ಚು ಬಾಳಿಕೆಗೆ ಬರದೇ ಅದು ಕೂಡ ಪಾಲಿಕೆಗೆ ಹೊರೆಯಾಗುತ್ತಿದೆ. ಹೀಗಾಗಿ ಕಟ್ಟಡ ತ್ಯಾಜ್ಯಕ್ಕೆ ಮುಕ್ತಿ ಕಾಣಿಸುವುದು ಪಾಲಿಕೆಗೆ ದೊಡ್ಡ ಸವಾಲೇ ಎಂಬಂತಾಗಿದೆ.
ಹೊಸ ಪ್ಲ್ಯಾನ್:
ಹೀಗೆ ಉತ್ಪನ್ನವಾಗುವ ತ್ಯಾಜ್ಯವನ್ನು ಸಂಸ್ಕರಿಸಿ ಅದರಿಂದ ಫುಟ್‌ಪಾತ್, ಉದ್ಯಾನವನಗಳಲ್ಲಿ ವಾಕಿಂಗ್ ಪಾಥ್‌ಗಳಿಗೆ ಬಳಸುವ ಫೆವರ್ಸ್ ಹಾಗೂ ಎಂ- ಸ್ಯಾಂಡ್ ತಯಾರಿಸುವುದು. ಪಾಲಿಕೆಯ ಸಿವಿಲ್ ವರ್ಕ್‌ಗಳಿಗೆ ಇವುಗಳನ್ನು ಬಳಸುವುದು. ಜತೆಗೆ ಪಾಲಿಕೆಯ ಗುತ್ತಿಗೆದಾರರಿಗೂ ಕನಿಷ್ಠ ಶೇ.25ರಷ್ಟಾದರೂ ಸಿವಿಲ್ ವರ್ಕ್‌ಗಳಿಗೆ ಇಲ್ಲಿ ಉತ್ಪಾದನೆಯಾಗಿರುವ ಸಾಮಗ್ರಿಗಳನ್ನು ಖರೀದಿಸುವಂತೆ ಸೂಚಿಸುವುದು ಪಾಲಿಕೆಯ ಪ್ಲ್ಯಾನ್.ಈ ನಿಟ್ಟಿನಲ್ಲಿ ಸ್ವಚ್ಛ ಭಾರತ ಭಾಗ-2ರ ಯೋಜನೆಯಡಿ ₹ 11 ಕೋಟಿ ವೆಚ್ಚದಲ್ಲಿ ಶಿವಳ್ಳಿಯಲ್ಲಿ ಪೆವರ್ಸ್, ಎಂ ಸ್ಯಾಂಡ್ ಉತ್ಪಾದಿಸುವ ಘಟಕ ನಿರ್ಮಿಸಿದ್ದು ಶೆಡ್ ನಿರ್ಮಾಣ ಪೂರ್ಣಗೊಂಡಿದೆ. ಯಂತ್ರೋಪಕರಣ ಅಳವಡಿಕೆಯೂ ಆಗಿದೆ. ಜತೆಗೆ ಪ್ರಾಯೋಗಿಕವಾಗಿ ಮಾಡಿರುವುದು ಯಶಸ್ವಿಯಾಗಿದೆ. ಇದೀಗ ಏಜೆನ್ಸಿಯನ್ನು ಗೊತ್ತು ಮಾಡಿ ಇದರ ನಿರ್ವಹಣೆ ಜವಾಬ್ದಾರಿ ನೀಡುವುದೊಂದೇ ಬಾಕಿಯಿದೆ.
ಹೇಗೆ ವರ್ಕ್ ಆಗುತ್ತೆ?:ಯಾವುದೇ ಹೊಸ ಕಟ್ಟಡ ನಿರ್ಮಿಸಬೇಕೆಂದರೂ ಅಥವಾ ಹಳೆ ಕಟ್ಟಡ ಕೆಡವಬೇಕೆಂದರೂ ಮಹಾನಗರ ಪಾಲಿಕೆಯಿಂದ ಪರವಾನಗಿ ಪಡೆಯುವುದು ಕಡ್ಡಾಯ. ಹೀಗೆ ಕಟ್ಟಡ ಪರವಾನಗಿ ಪಡೆಯಲು ಬಂದಾಗಲೇ ಎಷ್ಟು ಟನ್ ತ್ಯಾಜ್ಯ ಉತ್ಪತಿಯಾಗುತ್ತದೆ ಎಂದು ಲೆಕ್ಕ ಹಾಕಿ ಇಂತಿಷ್ಟು ಟನ್ ತ್ಯಾಜ್ಯ ಸಾಗಾಣಿಕೆಗೆ ಇಂತಿಷ್ಟು ಎಂದು ದರ ನಿಗದಿಪಡಿಸುವುದು, ಪರವಾನಗಿ ಜತೆಗೆ ಅದರ ವೆಚ್ಚವನ್ನೂ ಪಾವತಿಸಬೇಕಾಗುತ್ತದೆ.
ಮುಂದೆ ಗುತ್ತಿಗೆ ಪಡೆದ ಏಜೆನ್ಸಿ ಮೂಲಕ ಆ ತ್ಯಾಜ್ಯವನ್ನು ಸಂಗ್ರಹಿಸಿ ಫೆವರ್ಸ್, ಎಂ- ಸ್ಯಾಂಡ್ ಸೇರಿದಂತೆ ವಿವಿಧ ಸಾಮಗ್ರಿ ತಯಾರಿಕಾ ಘಟಕಕ್ಕೆ ಸಾಗಿಸುವುದು. ಅದರ ಸಾಗಾಣಿಕೆ ವೆಚ್ಚವನ್ನು ಕಟ್ಟಡ ಮಾಲೀಕರಿಂದ ಆಕರಿಸಿದ ದುಡ್ಡಿನಲ್ಲೇ ಏಜೆನ್ಸಿಗೆ ನೀಡುವುದು. ಬಳಿಕ ತಯಾರಿಕೆಯಾದ ಫೆವರ್ಸ್‌ನ್ನು ರಿಯಾಯಿತಿ ದರದಲ್ಲಿ ಪಾಲಿಕೆ ಖರೀದಿಸುವುದು. ಜತೆಗೆ ಗುತ್ತಿಗೆದಾರರಿಗೂ ಖರೀದಿಸುವಂತೆ ಸೂಚಿಸುವುದು. ಇದು ಪಾಲಿಕೆ ಪ್ಲ್ಯಾನ್.ಏನು ಲಾಭ:
ಕಟ್ಟಡ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಿದಂತಾಗುತ್ತದೆ. ಜತೆಗೆ ಎಲ್ಲೆಂದರಲ್ಲಿ ಎಸೆಯುವುದು ತಪ್ಪುತ್ತದೆ. ಹೀಗೆ ಎಸೆಯುವುದನ್ನು ಕಂಡರೆ ದಂಡ ಕೂಡ ಹಾಕಬೇಕಾಗುತ್ತದೆ. ಇನ್ನು ಕಟ್ಟಡ ಮಾಲೀಕರಿಗೆ ಅದನ್ನು ಹೇಗೆ ಸಾಗಿಸುವುದು ಎಂಬ ಕಿರಿಕಿರಿಯೂ ತಪ್ಪುತ್ತದೆ. ಜತೆಗೆ ಎಂ- ಸ್ಯಾಂಡ್, ಫೆವರ್ಸ್ ಇಲ್ಲೇ ಉತ್ಫಾದನೆಯಾಗುವುದರಿಂದ ರಿಯಾಯಿತಿ ದರದಲ್ಲೂ ಸಿಗುತ್ತದೆ. ಕ್ವಾರಿಗಳ ಮೇಲೆ ಒತ್ತಡವೂ ಕಡಿಮೆಯಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸುತ್ತಾರೆ.ಒಟ್ಟಿನಲ್ಲಿ ಕಟ್ಟಡ ತ್ಯಾಜ್ಯವನ್ನು ವೈಜ್ಞಾನಿಕ ವಿಲೇವಾರಿ ಮಾಡುವುದರ ಜತೆ ಜತೆಗೆ ಪೆವರ್ಸ್, ಎಂ- ಸ್ಯಾಂಡ್ ಹಾಗೂ ಇತರೆ ಸಾಮಗ್ರಿಗಳ ಉತ್ಪಾದನೆಗೆ ಮುಂದಾಗಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!ಕಟ್ಟಡ ತ್ಯಾಜ್ಯದ್ದ ಪಾಲಿಕೆಗೆ ದೊಡ್ಡ ತಲೆನೋವಾಗಿತ್ತು. ಫೆವರ್ಸ್, ಎಂ ಸ್ಯಾಂಡ್ ಉತ್ಪಾದನೆಯಿಂದ ವೈಜ್ಞಾನಿಕವಾಗಿ ವಿಲೇವಾರಿ ಮಾಡಿದಂತಾಗಿದೆ. ಈಗಾಗಲೇ ಪ್ರಾಯೋಗಿಕ ಪರೀಕ್ಷೆ ಮುಕ್ತಾಯಗೊಂಡಿದೆ. ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಈ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆ ನಡೆದಿದೆ.
ವಿಜಯಕುಮಾರ, ಹೆಚ್ಚುವರಿ ಆಯುಕ್ತ, ಮಹಾನಗರ ಪಾಲಿಕೆ