ಗ್ಯಾರಂಟಿ ಮುಂದುವರಿಸಲು ಕಾಂಗ್ರೆಸ್‌ ಬೆಂಬಲಿಸಿ

| Published : Feb 25 2024, 01:53 AM IST / Updated: Feb 25 2024, 10:58 AM IST

ಸಾರಾಂಶ

ಸದಾ ಕಾಲ ಗ್ಯಾರಂಟಿ ಯೋಜನೆಗಳನ್ನು ಮುದುವರೆಸಬೇಕಾದರೆ ಜನತೆ ಕಾಂಗ್ರೆಸ್ ಸರ್ಕಾರವನ್ನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ರಾಜಕೀಯವಾಗಿ ಶಕ್ತಿ ತುಂಬಲು ಲೋಕಸಭೆ ಚುನಾವಣೆಯಲ್ಲಿ ಬೆಂಬಲಿಸಬೇಕು

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ನಿರಂತರವಾಗಿ ಸದಾ ಕಾಲ ಮುಂದುವರೆಯಬೇಕಾದರೆ ರಾಜ್ಯದ ಜನತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ಬೆಂಬಲಿಸಿದರೆ ಮಾತ್ರ ಸಾಧ್ಯವಾಗಲಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕಾರ‍್ಯಕ್ರಮದಲ್ಲಿ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ ಎಂದರು.

ಕೇಂದ್ರದ ಬೋಗಸ್‌ ಗ್ಯಾರಂಟಿ: ದೇಶದಲ್ಲಿ ಯಾವ ರಾಜ್ಯದಲ್ಲಿಯೂ ಇಂತಹ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿಲ್ಲ, ಆದರೆ ಬಿಜೆಪಿ ನಾಯಕರು ಬೋಗಸ್ ಗ್ಯಾರಂಟಿ ಯೋಜನೆಗಳು ಎಂದು ಟೀಕೆ ಮಾಡುತ್ತಾರೆ. 

ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಜನರನ್ನು ವಂಚಿಸಿದೆ. ಅವರದ್ದು ಬೋಗಸ್ ಗ್ಯಾರಂಟಿ ಸರ್ಕಾರ ಎಂದು ಪ್ರಧಾನಿ ಮೋದಿ ಆಡಳಿತವನ್ನು ಟೀಕಿಸಿದರು.

ರಾಜ್ಯದಲ್ಲಿ ಸಹ ಇದುವರೆಗೂ ಆಡಳಿತ ನಡೆಸಿದ ಯಾವುದೇ ಪಕ್ಷದ ಮುಖ್ಯಮಂತ್ರಿಗಳು ಇಂತಹ ಗ್ಯಾರಂಟಿ ಯೋಜನೆಗಳನ್ನು ರೂಪಿಸಿ ಜನರ ಮನಸನ್ನು ಗೆದ್ದಿಲ್ಲ, ಬಡ ಜನರಿಗೆ ಹತ್ತು ಕೆಜಿ ಅಕ್ಕಿ ಕೊಡುವ ಬಗ್ಗೆ ಸರ್ಕಾರ ಭರವಸೆ ನೀಡಿತ್ತು, ಆದರೆ ಕೇಂದ್ರ ಸರ್ಕಾರ ೩೪ ರೂ ಕೆಜಿಗೆ ನೀಡುವುದಾಗಿ ಹೇಳಿದರೂ ಅವರು ಅಕ್ಕಿ ಕೊಡದೆ ರಾಜಕೀಯ ಮಾಡಿತು ಎಂದು ಟೀಕಿಸಿದರು.

ಮುಂದೆ 10 ಕೆಜಿ ಅಕ್ಕಿ ವಿತರಣೆ: ಆದರೆ ಈಗ ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ ಎಂದು ೨೯ ರು.ಗೆ ಅಕ್ಕಿಯನ್ನು ಕೇಂದ್ರ ಸರ್ಕಾರ ಕೊಡುತ್ತಿದೆ ತಗೋಳಿ ಎಂದು ಪ್ರಚಾರ ಮಾಡಿದರೂ ಯಾರೂ ಖರೀದಿಸಲು ಮುಂದಾಗಿಲ್ಲ. ಮುಂದಿನ ದಿನಗಳಲ್ಲಿ ಹಣ ಬದಲು ಅಕ್ಕಿನೇ ಹತ್ತು ಕೆಜಿ ವಿತರಿಸಲಾಗುವುದು ಎಂದು ಭರವಸೆ ನೀಡಿದರು.

ಸದಾ ಕಾಲ ಗ್ಯಾರಂಟಿ ಯೋಜನೆಗಳನ್ನು ಮುದುವರೆಸಬೇಕಾದರೆ ಜನತೆ ಕಾಂಗ್ರೆಸ್ ಸರ್ಕಾರವನ್ನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ರಾಜಕೀಯವಾಗಿ ಶಕ್ತಿ ತುಂಬಲು ಲೋಕಸಭೆ ಚುನಾವಣೆಯಲ್ಲಿ ಬೆಂಬಲಿಸಬೇಕು. ಕ್ಷೇತ್ರದಲ್ಲಿ ಬರಗಾಲ ಆವರಿಸಿದೆ ಎಂದು ಯಾರೂ ಚಿಂತಿಸಬೇಡಿ. ಸರ್ಕಾರ ನಿಮ್ಮ ಪರ ನಿಲ್ಲಲಿದೆ ಎಂದು ಭರವಸೆ ನೀಡಿದರು.

ಫಲಾನುಭವಿಗಳು ಪ್ರಚಾರ ಮಾಡಿ: ಗ್ಯಾರಂಟಿ ಯೋಜನೆಗಳ ಅನುಕೂಲ ಪಡೆದಿರುವವರು ಇತರರಿಗೆ ಪ್ರಚಾರ ಮಾಡಬೇಕೆಂದು ಕರೆ ನೀಡಿದರು. 

ಬಡವರ ಪರ ಕಾಳಜಿ ಹೊಂದಿರುವವರೇ ನಿಜವಾದ ಜನನಾಯಕ ಅದು ಬಿಟ್ಟು ಬರೀ ಪ್ರಚಾರ ಪಡೆಯುವವರಲ್ಲ ಕಾಂಗ್ರೆಸ್ ಗ್ಯಾರಂಟಿಯನ್ನು ಇತರರು ಕಾಪಿ ಮಾಡುತ್ತಿದ್ದಾರೆ ಅವರಿಂದ ಅದನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಎಂದರು.

ಸಭೆಯಲ್ಲಿ ತಹಸೀಲ್ದಾರ್ ಯು.ರಶ್ಮಿ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಗೋವಿಂದರಾಜು, ಕೆ.ವಿ.ನಾಗರಾಜ್, ಮಹಾದೇವ್, ಎ.ಬಾಬು, ಗ್ರಾಪಂ ಅಧ್ಯಕ್ಷ ಮಂಜುನಾಥ್, ಹೆಚ್.ಕೆ.ನಾರಾಯಣಸ್ವಾಮಿ, ವಿಜಯಕುಮಾರ್, ಕೃಷ್ಣಪ್ಪಶೆಟ್ಟಿ ಮತ್ತಿತರರು ಇದ್ದರು.