ಸಾರಾಂಶ
ಮಹದೇವಪುರ ವಿಧಾನಸಭಾ ಕ್ಷೇತ್ರ ಸೇರಿದಂತೆ ದೇಶದ ಇತರೆ ಹಲವು ಕ್ಷೇತ್ರಗಳಲ್ಲಿ ನಡೆದಿದೆ ಎನ್ನಲಾದ ಮತಗಳವು ಕುರಿತು ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ನವದೆಹಲಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರ ಸೇರಿದಂತೆ ದೇಶದ ಇತರೆ ಹಲವು ಕ್ಷೇತ್ರಗಳಲ್ಲಿ ನಡೆದಿದೆ ಎನ್ನಲಾದ ಮತಗಳವು ಕುರಿತು ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾಡಿದ್ದ ಆರೋಪಗಳನ್ನು ಆಧರಿಸಿ ವಕೀಲ ರೋಹಿತ್ ಪಾಂಡೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸೂರ್ಯಕಾಂತ್ ಮತ್ತು ಜೋಯ್‌ಮಲ್ಯಾ ಬಗಾಚಿ ಅವರಿದ್ದ ಪೀಠ, ಎಸ್‌ಐಟಿ ರಚನೆ ಮನವಿ ತಿರಸ್ಕರಿಸಿತು. ಆದರೆ ಈ ಕುರಿತು ಚುನಾವಣಾ ಆಯೋಗದ ಮುಂದೆ ಮನವಿ ಸಲ್ಲಿಸುವಂತೆ ನ್ಯಾಯಪೀಠ ಸಲಹೆ ನೀಡಿತು.
ನಾವು ಅರ್ಜಿದಾರರ ವಾದ ಆಲಿಸಿದ್ದೇವೆ. ಉದ್ದೇಶಪೂರ್ವಕವಾಗಿ ಸಾರ್ವಜನಿಕ ಹಿತಾಸಕ್ತಿ ಅಡಿ ಸಲ್ಲಿಸಿದ್ದ ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳದಿರಲು ನಿರ್ಧರಿಸಿದ್ದೇವೆ. ಅರ್ಜಿದಾರರು ತಮ್ಮ ಮನವಿಯನ್ನು ಚುನಾವಣಾ ಆಯೋಗದ ಮುಂದೆ ಸಲ್ಲಿಸಬಹುದಾಗಿದೆ ಎಂದು ನ್ಯಾಯಪೀಠ ಹೇಳಿತು.
ಆಗ ವಕೀಲ ರೋಹಿತ್ ಪಾಂಡೆ ಅವರು, ಈಗಾಗಲೇ ಚುನಾವಣಾ ಆಯೋಗದ ಮುಂದೆ ಈ ಕುರಿತು ಮನವಿ ಸಲ್ಲಿಸಲಾಗಿದೆ. ಆದರೆ ಅದು ಇನ್ನೂ ಸ್ವೀಕೃತವಾಗಿಲ್ಲ ಎಂದರು. ಜತೆಗೆ, ಇದೇ ವೇಳೆ ಚುನಾವಣಾ ಆಯೋಗದ ಮುಂದೆ ಸಲ್ಲಿಸುವ ಅರ್ಜಿಗಳ ಸಂಬಂಧ ನಿರ್ಧಾರ ತೆಗೆದುಕೊಳ್ಳುವ ಕುರಿತು ಕಾಲಮಿತಿ ನಿಗದಿಪಡಿಸುವಂತೆಯೂ ಆಗ್ರಹಿಸಿದರು. ಆದರೆ, ಆ ಬೇಡಿಕೆಯನ್ನು ಕೂಡ ನ್ಯಾಯಾಲಯ ತಿರಸ್ಕರಿಸಿತು.
ರಾಹುಲ್ ವಿಚಾರ ಪ್ರಸ್ತಾಪ:
ಅರ್ಜಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಡಿದ್ದ ಮತಗಳ್ಳತನದ ಆರೋಪ ಕುರಿತೂ ಪ್ರಸ್ತಾಪಿಸಲಾಗಿತ್ತು. ಚುನಾವಣಾ ಆಯೋಗ ಬಿಜೆಪಿ ಜತೆ ಸೇರಿಕೊಂಡು ಭಾರೀ ಕ್ರಿಮಿನಲ್ ಅಕ್ರಮ ನಡೆಸಿದೆ ಎಂದು ಅವರು ಆರೋಪಿಸಿದ್ದರು. ಮಹದೇವಪುರ ಮತ್ತಿತರ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಈ ಆರೋಪ ಮಾಡಲಾಗಿತ್ತು.
ಅರ್ಜಿಯಲ್ಲಿ ಹೇಳಿದ್ದೇನು?:
ಒಬ್ಬರ ಹೆಸರು ಎರಡೆರಡು ಬಾರಿ ಸೇರ್ಪಡೆ, ನಕಲಿ ವೋಟರ್ ಐಡಿಯನ್ನು ತಡೆಯುವುದು ಸೇರಿ ಮತದಾರರ ಪಟ್ಟಿ ಪ್ರಕಟಣೆ, ಸಿದ್ಧತೆ ಮತ್ತು ನಿರ್ವಹಣೆಯಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಸಮಗ್ರತೆ ಕಾಯ್ದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿಬಂಧನೆಗಳನ್ನು ಹೇರಬೇಕು.
ಮತದಾರರ ಪಟ್ಟಿಯನ್ನು ಸಾರ್ವಜನಿಕ ಪರಿಶೀಲನೆ, ಆಡಿಟ್ ಮಾಡಲು ಅನುಕೂಲವಾಗುವಂತೆ ಎಲ್ಲರಿಗೂ ಸುಲಭವಾಗಿ ಸಿಗುವಂತೆ, ಯಂತ್ರಗಳು ಓದುವ ರೀತಿ ಮತ್ತು ಒಸಿಆರ್-ಕಂಪ್ಲೈಂಟ್ ಮಾದರಿಯಲ್ಲಿ ಪ್ರಕಟಿಸಲು ಸೂಚಿಸಬೇಕು.
ಮತದಾರರ ಪಟ್ಟಿ ಕುರಿತು ಸ್ವತಂತ್ರ ಆಡಿಟ್ ಹಾಗೂ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳು ಪಾಲನೆಯಾಗದ ಹೊರತು ಹೊಸದಾಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡದಂತೆ ನಿರ್ದೇಶಿಸುವಂತೆಯೂ ಅರ್ಜಿದಾರರು ಮನವಿ ಮಾಡಿದ್ದರು. ಮಹದೇವಪುರ ವಿವಾದ ಪ್ರಸ್ತಾಪ:
ಅರ್ಜಿದಾರರು ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರ(ಮಹದೇವಪುರ ವಿಧಾನಸಭಾ ಕ್ಷೇತ್ರ)ದ ಮತದಾರರ ಪಟ್ಟಿಯಲ್ಲಿ ಭಾರೀ ಅಕ್ರಮಗಳನ್ನು ಗಮನಿಸಿದ್ದಾರೆ. ಹೀಗಾಗಿ ಈ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕು.
ಸಂವಿಧಾನದ ಪಾವಿತ್ರ್ಯತೆ ಕಾಯ್ದುಕೊಳ್ಳಲು ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿದೆ.
ಮಹಾರಾಷ್ಟ್ರದಲ್ಲಿ 2024ರ ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಗೂ ಮುನ್ನ ಕೇವಲ ನಾಲ್ಕು ತಿಂಗಳಲ್ಲಿ 39 ಲಕ್ಷ ಮತದಾರರನ್ನು ಮತಪಟ್ಟಿಗೆ ಸೇರ್ಪಡೆ ಮಾಡಲಾಗಿತ್ತು. ಅದಕ್ಕೂ ಮೊದಲ ಐದು ವರ್ಷಗಳಲ್ಲಿ ಕೇವಲ 50 ಲಕ್ಷ ಮತದಾರರಷ್ಟೇ ಸೇರ್ಪಡೆ ಆಗಿದ್ದರು. ಈ ರೀತಿ ದಿಢೀರ್ ಭಾರೀ ಪ್ರಮಾಣದಲ್ಲಿ ಮತದಾದರರ ಏರಿಕೆ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಚುನಾವಣಾ ಆಯೋಗದ ಪಾರದರ್ಶಕತೆ ಕುರಿತು ಪ್ರಶ್ನೆ ಏಳುವಂತೆ ಮಾಡುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
ತನಿಖೆ ಬೇಡಿಕೆ ತಿರಸ್ಕಾರ
- ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಮಹದೇವಪುರದಲ್ಲಿ ಮತಗಳ್ಳತನ ಆರೋಪ
- ಸುದ್ದಿಗೋಷ್ಠಿ ನಡೆಸಿ ‘ಬಾಂಬ್’ ಸ್ಫೋಟಿಸಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ
- ಈ ಆರೋಪಗಳನ್ನೇ ಆಧರಿಸಿ ಎಸ್‌ಐಟಿ ತನಿಖೆ ಕೋರಿ ಸುಪ್ರೀಂಗೆ ಪಿಐಎಲ್ ಸಲ್ಲಿಸಿದ್ದ ವಕೀಲ
- ಎಸ್‌ಐಟಿ ರಚನೆಯ ಬೇಡಿಕೆ ತಿರಸ್ಕರಿಸಿದ ನ್ಯಾಯಾಲಯ. ಆಯೋಗ ಬಳಿ ಹೋಗಲು ಸೂಚನೆ
- ಆಯೋಗದ ಮುಂದೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವಕೀಲನ ಹೇಳಿಕೆ