ಇಂದಿನಿಂದ 3 ದಿನ ಶಾಸಕರ ಜೊತೆ ಸುರ್ಜೇವಾಲಾ ಸಭೆ

| N/A | Published : Jul 07 2025, 01:33 AM IST / Updated: Jul 07 2025, 06:58 AM IST

ಸಾರಾಂಶ

ರಾಜ್ಯ ಕಾಂಗ್ರೆಸ್ ಶಾಸಕರ ಅಸಮಾಧಾನ ಹಾಗೂ ಅಹವಾಲು ಆಲಿಸುವ ಸಲುವಾಗಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರು ಮತ್ತೆ ಬೆಂಗಳೂರಿಗೆ ಆಗಮಿಸಿದ್ದು, ಸೋಮವಾರದಿಂದ ಮೂರು ದಿನಗಳ ಕಾಲ 61 ಮಂದಿ ಶಾಸಕರನ್ನು ಮುಖಾಮುಖಿ ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.

 ಬೆಂಗಳೂರು :  ರಾಜ್ಯ ಕಾಂಗ್ರೆಸ್ ಶಾಸಕರ ಅಸಮಾಧಾನ ಹಾಗೂ ಅಹವಾಲು ಆಲಿಸುವ ಸಲುವಾಗಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರು ಮತ್ತೆ ಬೆಂಗಳೂರಿಗೆ ಆಗಮಿಸಿದ್ದು, ಸೋಮವಾರದಿಂದ ಮೂರು ದಿನಗಳ ಕಾಲ 61 ಮಂದಿ ಶಾಸಕರನ್ನು ಮುಖಾಮುಖಿ ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.

ಈ ಅವಧಿಯಲ್ಲಿ ಕಲಬುರಗಿ, ಬೆಳಗಾವಿ, ರಾಯಚೂರು, ಯಾದಗಿರಿ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ, ಉತ್ತರ ಕನ್ನಡ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ ಸೇರಿ ವಿವಿಧ ಜಿಲ್ಲೆಗಳ 61 ಮಂದಿ ಶಾಸಕರೊಂದಿಗೆ ವೈಯಕ್ತಿಕವಾಗಿ ಸಭೆ ನಡೆಸಲಿದ್ದಾರೆ.

ಮೊದಲ ದಿನವಾದ ಜು.7 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆ ಹಾಗೂ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6.20ರ ವರೆಗೆ ಕಲಬುರಗಿ, ಬೆಳಗಾವಿ ಹಾಗೂ ರಾಯಚೂರು ಜಿಲ್ಲೆಯ 22 ಮಂದಿ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ. ಬಳಿಕ ಮಂಗಳವಾರ 22 ಮಂದಿ, ಬುಧವಾರ 17 ಮಂದಿಯೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಈ ವೇಳೆ ಎರಡು ವರ್ಷದಲ್ಲಿ ತಮ್ಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆ, ಭವಿಷ್ಯದ ಯೋಜನೆಗಳು, ಕ್ಷೇತ್ರದಲ್ಲಿ ಕೆಲಸ ಮಾಡಲು ಉಂಟಾಗುತ್ತಿರುವ ಅಡ್ಡಿಗಳು, ಸರ್ಕಾರ ಹಾಗೂ ಉಸ್ತುವಾರಿ ಸಚಿವರ ಸ್ಪಂದನೆ, ಅಧಿಕಾರಿಗಳ ಸಹಕಾರದ ಬಗ್ಗೆ ಸಿದ್ಧ ಪ್ರಶ್ನಾವಳಿ ಮೂಲಕ ಸುರ್ಜೇವಾಲಾ ಅವರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಲಿದ್ದಾರೆ.

ಇದೇ ವೇಳೆ ಶಾಸಕರಿಗೆ ಬಹಿರಂಗವಾಗಿ ಮಾತನಾಡದಂತೆ ಸೂಚನೆ ನೀಡುವ ಸಾಧ್ಯತೆಯಿದೆ. ಸರ್ಕಾರದ ಬಗ್ಗೆ ಬಹಿರಂಗವಾಗಿ ಮಾತನಾಡಿ ಬಿಜೆಪಿಗೆ ಅಸ್ತ್ರ ನೀಡಬೇಡಿ. ಸರ್ಕಾರ ಗ್ಯಾರಂಟಿ ಅನುಷ್ಠಾನ ಸೇರಿ ಉತ್ತಮ ಕೆಲಸ ಮಾಡುತ್ತಿದೆ. ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಬಗೆಹರಿಸಿಕೊಂಡು ಹೋಗೋಣ. ಹೀಗಾಗಿ ಏನೇ ಸಮಸ್ಯೆಯಿದ್ದರೂ ಪಕ್ಷದ ವೇದಿಕೆಯಲ್ಲಿ ಮಾತ್ರ ಚರ್ಚಿಸಿ. ನಕಾರಾತ್ಮಕ ವಿಷಯಗಳು ಚರ್ಚೆಗೆ ಬಂದು ಸರ್ಕಾರದ ಸಾಧನೆಗಳು ನೇಪಥ್ಯಕ್ಕೆ ಸರಿಯುವಂತೆ ಮಾಡಬೇಡಿ ಎಂದು ಕಿವಿ ಮಾತು ಹೇಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಶಾಸಕರಾದ ಬಿ.ಆರ್‌.ಪಾಟೀಲ್‌ ಹಾಗೂ ರಾಜು ಕಾಗೆ ಅವರು ಆಡಳಿತ ವೈಫಲ್ಯ ಬಗ್ಗೆ ಬಹಿರಂಗ ಆರೋಪ ಮಾಡಿದ ಬೆನ್ನಲ್ಲೇ ಹಲವು ಶಾಸಕರು ಅನುದಾನ ಕೊರತೆ, ಸಚಿವರ ಅಸಹಕಾರ, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದರು.ಈ ಹಿನ್ನೆಲೆಯಲ್ಲಿ ಸುರ್ಜೇವಾಲಾ ಅವರು ಬೆಂಗಳೂರಿಗೆ ಆಗಮಿಸಿ ಜೂ.30 ರಿಂದ ಜು.2 ರವರೆಗೆ ಮೂರು ದಿನಗಳ ಕಾಲ ಬೆಂಗಳೂರು, ಮೈಸೂರು ವಿಭಾಗದ 42 ಮಂದಿ ಶಾಸಕರೊಂದಿಗೆ ಒನ್‌ ಟು ಒನ್‌ ಸಭೆ ನಡೆಸಿದ್ದರು. ಇದೀಗ ಸೋಮವಾರದಿಂದ ಎರಡನೇ ಹಂತದ ಸಭೆ ಆರಂಭಿಸಿದ್ದಾರೆ.

ರಾಜ್ಯ ಸರ್ಕಾರದ ಆಡಳಿತ ವೈಖರಿ ಬಗ್ಗೆ ಶಾಸಕರಾದ ಬಿ.ಆರ್‌. ಪಾಟೀಲ್‌, ರಾಜು ಕಾಗೆ ಬಹಿರಂಗ ಅತೃಪ್ತಿ

- ಹಲವು ಶಾಸಕರಿಂದ ಅನುದಾನ ಕೊರತೆ, ಸಚಿವರ ಅಸಹಕಾರ, ಅಧಿಕಾರಿಗಳ ನಿರ್ಲಕ್ಷ್ಯ ಬಗ್ಗೆ ಆಕ್ರೋಶ

- ಕಳೆದ ಸೋಮವಾರದಿಂದ 3 ದಿನ 42 ಶಾಸಕರನ್ನು ಭೇಟಿಯಾಗಿ ಅಹವಾಲು ಆಲಿಸಿದ್ದ ರಾಜ್ಯ ಉಸ್ತುವಾರಿ-

 ಈಗ 2ನೇ ಹಂತದಲ್ಲಿ 61 ಶಾಸಕರ ಅಹವಾಲು ಆಲಿಸಲು ಸುರ್ಜೇವಾಲಾ ಸಜ್ಜು. ಈ ಸಭೆ ಬಗ್ಗೆ ಕುತೂಹಲ

Read more Articles on