ಇಂಡಿಯಾ ಗೆದ್ದರೆ ಮೇಕೆದಾಟು ತಡೆ: ಡಿಎಂಕೆ ಪ್ರಣಾಳಿಕೆ

| Published : Mar 21 2024, 01:46 AM IST / Updated: Mar 21 2024, 08:49 AM IST

CM Stalin

ಸಾರಾಂಶ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳ ಕೂಟವಾಗಿರುವ ‘ಇಂಡಿಯಾ’ ಗೆದ್ದರೆ ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ತಡೆಯೊಡ್ಡುವುದಾಗಿ ಡಿಎಂಕೆ ಘೋಷಿಸಿದೆ.

ಪಿಟಿಐ ಚೆನ್ನೈ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳ ಕೂಟವಾಗಿರುವ ‘ಇಂಡಿಯಾ’ ಗೆದ್ದರೆ ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ತಡೆಯೊಡ್ಡುವುದಾಗಿ ಡಿಎಂಕೆ ಘೋಷಿಸಿದೆ.

‘ಇಂಡಿಯಾ’ ಕೂಟದಲ್ಲಿ ಕಾಂಗ್ರೆಸ್‌ ಪ್ರಧಾನ ಪಕ್ಷವಾಗಿದ್ದು, ಆ ಪಕ್ಷದ ಸರ್ಕಾರವೇ ಕರ್ನಾಟಕದಲ್ಲಿ ಆಳ್ವಿಕೆ ನಡೆಸುತ್ತಿದೆ. ಮೇಕೆದಾಟು ಅಣೆಕಟ್ಟೆ ನಿರ್ಮಾಣ ಮಾಡುವ ಭರವಸೆಯನ್ನೂ ನೀಡಿದೆ. 

ಈ ವಿಚಾರ ಗೊತ್ತಿದ್ದೂ, ಬುಧವಾರ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಡಿಎಂಕೆ ಈ ಅಂಶ ಸೇರ್ಪಡೆ ಮಾಡಿರುವುದು ವಿವಾದದ ಬಿರುಗಾಳಿ ಎಬ್ಬಿಸುವ ಸಾಧ್ಯತೆ ಇದೆ.

ಇದೇ ವೇಳೆ, ಇಂಡಿಯಾ ಅಧಿಕಾರಕ್ಕೆ ಬಂದರೆ ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ), ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೂಲ್‌ ಬೂತ್‌, ಒಂದು ದೇಶ- ಒಂದು ಚುನಾವಣೆ, ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ), ಅಗ್ನಿಪಥ ಯೋಜನೆ, ರಾಜ್ಯಪಾಲರಿಗೆ ಕಾನೂನು ಕ್ರಮದಿಂದ ಇರುವ ರಕ್ಷಣೆ, ಬಿಜೆಪಿ ಸರ್ಕಾರದ ಜನವಿರೋಧಿ ಕಾಯ್ದೆಗಳು, ಬ್ಯಾಂಕ್‌ ಖಾತೆಗಳಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದವರಿಗೆ ವಿಧಿಸಲಾಗುವ ದಂಡವನ್ನು ರದ್ದುಗೊಳಿಸುವುದಾಗಿ ಹೇಳಿದೆ.

ಪೆಟ್ರೋಲ್‌ ದರವನ್ನು ಲೀಟರ್‌ಗೆ 75, ಡೀಸೆಲ್‌ 65 ಹಾಗೂ ಅಡುಗೆ ಅನಿಲ ಸಿಲಿಂಡರ್‌ ದರವನ್ನು 500 ರು.ಗೆ ಇಳಿಸಲಾಗುತ್ತದೆ. ರೈತರ ಎಲ್ಲ ಸಾಲ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ ಮಾಡಲಾಗುತ್ತದೆ. 

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರದಂತೆ ನಿರ್ಬಂಧಿಸಲಾಗುತ್ತದೆ. ಕಾಲೇಜು ವಿದ್ಯಾರ್ಥಿಗಳಿಗೆ ಮಾಸಿಕ 1 ಜಿಬಿ ಇಂಟರ್ನೆಟ್‌ ಇರುವ ಉಚಿತ ಸಿಮ್‌ ನೀಡಲಾಗುತ್ತದೆ. ಶೇ.33 ಮಹಿಳಾ ಮೀಸಲಾತಿಯನ್ನು ತಕ್ಷಣದಿಂದಲೇ ಜಾರಿಗೆ ತರಲಾಗುತ್ತದೆ ಎಂದು ಆಶ್ವಾಸನೆ ನೀಡಿದೆ.

ನೀಟ್‌ನಿಂದ ತಮಿಳುನಾಡನ್ನು ಹೊರಗಿಡಲಾಗುತ್ತದೆ. ತಮಿಳುನಾಡಿನ ಮಹಿಳೆಯರಿಗೆ ಮಾಸಿಕ 1000 ರು. ನೀಡಲಾಗುತ್ತದೆ. ಉದ್ಯೋಗ ಖಾತ್ರಿಯಡಿ ಉದ್ಯೋಗದ ದಿನವನ್ನು 150 ರು.ಗೆ ಹೆಚ್ಚಿಸಿ, ದೇಶಾದ್ಯಂತ 400 ರು. ಸಮಾನ ವೇತನ ನಿಗದಿಗೊಳಿಸಲಾಗುತ್ತದೆ. 

ಋತುಚಕ್ರದ ಸಂದರ್ಭದಲ್ಲಿ ಮಹಿಳೆಯರಿಗೆ ರಜೆ ನೀಡಲಾಗುತ್ತದೆ. 5 ವರ್ಷಕ್ಕೊಮ್ಮೆ ಜನಗಣತಿ ಜತೆಗೆ ಜಾತಿ ಗಣತಿಯನ್ನೂ ನಡೆಸಲಾಗುತ್ತದೆ. ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರಳಿಸಲಾಗುತ್ತದೆ ಎಂದು ಹೇಳಿದೆ.