ಬೆಂಗಳೂರು : ಸಂಪುಟ ವಿಸ್ತರಣೆ ಚರ್ಚೆ ನಡುವೆ ಹಠಾತ್‌ ಆಗಿ ಡಾ.ಜಿ.ಪರಮೇಶ್ವರ್‌ ಜತೆಗೆ ಮತ್ತೆರಡು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಚರ್ಚೆ ಮುನ್ನೆಲೆಗೆ ಬಂದಿದೆ.

ಕಾಂಗ್ರೆಸ್‌ ಹೈಕಮಾಂಡ್‌ ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಸ್‌ಟಿ ಸಮುದಾಯದ ಸತೀಶ್ ಜಾರಕಿಹೊಳಿ ಹಾಗೂ ಲಿಂಗಾಯತ ಸಮುದಾಯದ ಒಬ್ಬರಿಗೆ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಇದ್ದಾಗಲೂ ಡಿ.ಕೆ.ಶಿವಕುಮಾರ್‌ ಜತೆಗೆ ಇನ್ನೂ 2-3 ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯಾಗಬೇಕು ಎಂಬ ಚರ್ಚೆ ಆಗಿತ್ತು. ಆದರೆ ಕಾರ್ಯರೂಪಕ್ಕೆ ಬಂದಿರಲಿಲ್ಲ.


ಇದೀಗ ಹಠಾತ್ತನೆ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಚರ್ಚೆ ಶುರುವಾಗಿದೆ. ಆದರೆ, ಎರಡು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಸುಲಭ ಸಾಧ್ಯವಲ್ಲ. ಏಕೆಂದರೆ, ಒಂದೊಮ್ಮೆ ಎಸ್ಟಿ ಹಾಗೂ ಲಿಂಗಾಯತ ಸಮುದಾಯಗಳಿಗೆ ಅವಕಾಶ ನೀಡಿದರೆ ಮುಸ್ಲಿಂ ಸಮುದಾಯ ಹಾಗೂ ದಲಿತ ಎಡಗೈ ಸಮುದಾಯದಿಂದ ಬೇಡಿಕೆ ಶುರುವಾಗಿ ಹೊಸ ವಿವಾದ ಸೃಷ್ಟಿಯಾಗಬಹುದು.

ಮೂರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯಾದರೆ ಹಿರಿಯರು ಹಾಗೂ ಎಡಗೈ ಪ್ರಭಾವಿ ನಾಯಕ ಕೆ.ಎಚ್.ಮುನಿಯಪ್ಪ ಅವರು ತಮ್ಮ ಅಸಮಾಧಾನ ಹೊರಹಾಕಬಹುದು. ಹೀಗಾಗಿ ಹೈಕಮಾಂಡ್‌ ಇದನ್ನು ಯಾವ ರೀತಿ ನಿಭಾಯಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

- ಇನ್ನೂ 2 ಡಿಸಿಎಂ ಹುದ್ದೆ ಸೃಷ್ಟಿ ಆದರೆ ಪ್ರಬಲರಿಗೆ ಮಣೆ

- ಲಿಂಗಾಯತ, ಒಬಿಸಿಗೆ ಡಿಸಿಎಂ ಹುದ್ದೆ ಹೋಗುವ ಸಂಭವ

- ಆದರೆ ಇದರಿಂದ ವಿನಾಕಾರಣ ವಿವಾದ ಸೃಷ್ಟಿ ಆತಂಕ

- ಮುಸ್ಲಿಮರು, ದಲಿತ ಎಡಗೈನಿಂದಲೂ ಬೇಡಿಕೆ ಸಾಧ್ಯತೆ