ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರಿಗೆ ಏನೂ ಗೊತ್ತಿಲ್ಲ : ಡಿ.ಕೆ.ಶಿವಕುಮಾರ್‌ ವ್ಯಂಗ್ಯ

| N/A | Published : Mar 24 2025, 11:50 AM IST

dk shivakumar

ಸಾರಾಂಶ

 ಕ್ಷೇತ್ರಗಳ ಮರುವಿಂಗಡಣೆ ವಿಚಾರದಲ್ಲಿ  ನರೇಂದ್ರ ಮೋದಿ ಮತ್ತು  ಅಮಿತ್‌ ಶಾ ಅವರು ಏನು ಹೇಳುತ್ತಿದ್ದಾರೆಂಬುದು ಮುಖ್ಯವೇ ಹೊರತು  ಕೆ.ಅಣ್ಣಾಮಲೈ ಏನು ಹೇಳಿದ್ದಾರೆಂಬುದು ಅಲ್ಲ. ಪಾಪ, ಅಣ್ಣಾಮಲೈ ಅವರಿಗೆ ಏನೂ ಗೊತ್ತಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಡಿದರು.

 ಚೆನ್ನೈ :  ’ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ಏನು ಹೇಳುತ್ತಿದ್ದಾರೆಂಬುದು ಮುಖ್ಯವೇ ಹೊರತು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಏನು ಹೇಳಿದ್ದಾರೆಂಬುದು ಅಲ್ಲ. ಪಾಪ, ಅಣ್ಣಾಮಲೈ ಅವರಿಗೆ ಏನೂ ಗೊತ್ತಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಡಿದರು.

ಕೇಂದ್ರದ ಜನಸಂಖ್ಯಾ ಆಧಾರಿತ ಕ್ಷೇತ್ರ ಮರುವಿಂಗಡಣೆ ವಿರೋಧಿಸಿ ಡಿಎಂಕೆ ನೇತೃತ್ವದಲ್ಲಿ ತಮಿಳುನಾಡಿನಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಭಾನುವಾರ ಬೆಂಗಳೂರಿಗೆ ಹೊರಡುವ ಮುನ್ನ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ದಕ್ಷಿಣ ರಾಜ್ಯಗಳ ಮೇಲೆ ಕ್ಷೇತ್ರ ಮರುವಿಂಗಡಣೆ ಪರಿಣಾಮ ಬೀರುವುದಿಲ್ಲ’ ಎಂಬ ಹೇಳಿಕೆಯನ್ನು ಖಂಡಿಸಿದರು ಹಾಗೂ ‘ಅಣ್ಣಾಮಲೈ ಅವರು ಪಕ್ಷಕ್ಕೆ ನಿಷ್ಠರಾಗಿದ್ದಾರೆಯೇ ಹೊರತು ತಮಿಳುನಾಡಿಗಲ್ಲ’ ಎಂದು ಕುಟುಕಿದರು.

‘ದಕ್ಷಿಣ ರಾಜ್ಯಗಳ ಮೇಲೆ ಕ್ಷೇತ್ರ ಮರುವಿಂಗಡಣೆ ಪರಿಣಾಮ ಬೀರುವುದಿಲ್ಲ’ ಎಂಬ ಅಣ್ಣಾಮಲೈ ಹೇಳಿಕೆ ಮಹತ್ವ ನೀಡಬೇಕಿಲ್ಲ. ನಮಗೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಶಾ ಏನು ಸಂದೇಶ ನೀಡಲು ಹೊರಟಿದ್ದಾರೆಂಬುದು ಮುಖ್ಯ. ಪಾಪ ಅಣ್ಣಾಮಲೈ ಅವರಿಗೆ ಏನೂ ಗೊತ್ತಿಲ್ಲ. ಅವರು ಕೇವಲ ತಮ್ಮ ಕೆಲಸ ಮಾಡುತ್ತಿದ್ದಾರೆ. ಅವರು ಪಕ್ಷಕ್ಕೆ ಹೆಚ್ಚಿನ ನಿಷ್ಠೆ ತೋರಲು ಬಯಸುತ್ತಿದ್ದಾರೆಯೇ ಹೊರತು ತಮ್ಮ ರಾಜ್ಯಕ್ಕಲ್ಲ’ ಎಂದರು.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದಂತೆ ರಾಜ್ಯದ 50 ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಅವರು ಈ ಕುರಿತು ಕೈಗೊಳ್ಳುತ್ತಿರುವ ಕಾರ್ಯವನ್ನು ಎಲ್ಲಾ ರಾಜಕೀಯ ಪಕ್ಷಗಳು ಮೆಚ್ಚಿವೆ ಎಂದರು.

ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ರಾಜ್ಯಗಳಿಗೆ ಯಾವುದೇ ಅಡ್ಡಪರಿಣಾಮ ಆಗುವುದಿಲ್ಲ ಎಂದು ಅಮಿತ್‌ ಶಾ ಹೇಳಿದ್ದರು. ಅದನ್ನೇ ಭಾನುವಾರ ಅಣ್ಣಾಮಲೈ ಪುನರುಚ್ಚರಿಸಿದ್ದರು.