ಪ್ರಥಮ ಬಾರಿ ಸೃಷಿಸಿದ ನಿಗಮ ಹುದ್ದೆ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕನ ಪಾಲು..!

| Published : Jan 27 2024, 01:20 AM IST / Updated: Jan 27 2024, 01:17 PM IST

A B Ramesh - Nigana Mandali
ಪ್ರಥಮ ಬಾರಿ ಸೃಷಿಸಿದ ನಿಗಮ ಹುದ್ದೆ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕನ ಪಾಲು..!
Share this Article
  • FB
  • TW
  • Linkdin
  • Email

ಸಾರಾಂಶ

ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯ ಮಟ್ಟದ ನಿಗಮ ಮಂಡಳಿ ನೇಮಕ ಪಟ್ಟಿ ಹೊರ ಬಿದ್ದಿದ್ದು ಜಿಲ್ಲೆಯ ಶಾಸಕರೊಬ್ಬರು ರಾಜ್ಯ ಮಟ್ಟದ ನಿಗಮ ಮಂಡಳಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯ ಮಟ್ಟದ ನಿಗಮ ಮಂಡಳಿ ನೇಮಕ ಪಟ್ಟಿ ಹೊರ ಬಿದ್ದಿದ್ದು ಜಿಲ್ಲೆಯ ಶಾಸಕರೊಬ್ಬರು ರಾಜ್ಯ ಮಟ್ಟದ ನಿಗಮ ಮಂಡಳಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಅವರಿಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಅಧ್ಯಕ್ಷರಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ.

ಅವರು ಮೂರು ಬಾರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಎರಡು ಬಾರಿ ಜೆಡಿಎಸ್‌ನಿಂದ ಹಾಗೂ ಒಂದು ಬಾರಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿರುವ ಅವರು ಸಚಿವ ಎನ್.ಚಲುವರಾಯಸ್ವಾಮಿ ಅವರ ಪರಮಾಪ್ತರಾಗಿದ್ದಾರೆ. ಈ ಹಿಂದೆ ಎರಡು ಬಾರಿ ಶಾಸಕರಾಗಿದ್ದ ಸಮಯದಲ್ಲೂ ಸಚಿವ ಸ್ಥಾನಕ್ಕೆ ಯಾವುದೇ ಲಾಬಿಯನ್ನು ನಡೆಸಿರಲಿಲ್ಲ. ಇದೀಗ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿರುವ ಅವರು ಸಚಿವ ಸ್ಥಾನದ ಆಕಾಂಕ್ಷಿಯೂ ಆಗಿರಲಿಲ್ಲ. ಇದೀಗ ರಾಜ್ಯ ಸರ್ಕಾರವೇ ಗುರುತಿಸಿ ಅವರಿಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ಹುದ್ದೆ ನೀಡಿರುವುದು ಸಮಾಧಾನವನ್ನು ತಂದಿದೆ.

ಸಚಿವ ಎನ್.ಚಲುವರಾಯಸ್ವಾಮಿ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದರಿಂದಲೇ ರಾಜ್ಯ ಮಟ್ಟದ ನಿಗಮ ಮಂಡಳಿಯಲ್ಲಿ ರಮೇಶ್ ಸ್ಥಾನ ಪಡೆಯಲು ಸಾಧ್ಯವಾಯಿತು ಎಂಬ ಮಾತುಗಳು ಪಕ್ಷದ ವಲಯದಲ್ಲೇ ಕೇಳಿ ಬರುತ್ತಿದೆ. ಜೆಡಿಎಸ್‌ನಿಂದ ಎರಡು ಬಾರಿ ಶಾಸಕರಾಗಿದ್ದರು ಅವರಿಗೆ ನಿಗಮ ಮಂಡಳಿಗಳಲ್ಲಿ ಯಾವುದೇ ಸ್ಥಾನಮಾನ ದೊರಕಿರಲಿಲ್ಲ. ಒಮ್ಮೆ ಮಾತ್ರ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ತಾಯಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಅವರು 2004ರಲ್ಲಿ ಶಾಸಕರಾಗಿದ್ದ ವೇಳೆ ಕರಕುಶಲ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಅದೇ ರೀತಿ ಅವರ ತಂದೆ ಬಂಡಿಸಿದ್ದೇಗೌಡ ಅವರು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬಂಧಿಖಾನೆ ಮತ್ತು ಉಗ್ರಾಣ ಖಾತೆ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾದ ಮೊದಲ ಅವಧಿಯಲ್ಲಿ ರಮೇಶ್ ಬಂಡಿಸಿದ್ದೇಗೌಡರಿಗೆ ರಾಜ್ಯ ಮಟ್ಟದ ನಿಗಮದಲ್ಲಿ ಸ್ಥಾನ ದೊರಕಿರುವುದು ವಿಶೇಷವಾಗಿದೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ ಈ ವರೆಗೂ ಸರ್ಕಾರ ಯಾರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ನನಗೆ ಸರ್ಕಾರ ಈ ಜವಾಬ್ದಾರಿ ವಹಿಸಿದೆ. ನನ್ನ ಪರಿಮಿತಿಯೊಳಗೆ ರೈತರಿಗೆ ಏನ್ನೆಲ್ಲಾ ಸೌಲಭ್ಯ ಕಲ್ಪಿಸಬಹುದು ಹಾಗೂ ಅನುಕೂಲ ಮಾಡಿಕೊಡಬಹುದು ಅದನ್ನು ಮಾಡಿಕೊಡುವುದಕ್ಕೆ ಬದ್ಧನ್ನಾಗಿದ್ದೇನೆ. ನನಗೆ ಈ ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.

- ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಶಾಸಕರು, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ