ಮಂಡ್ಯ ಜಿಲ್ಲೆಯ ಜನಮಾನಸದೊಳಗೆ ಚುನಾವಣೆ ತೀವ್ರತೆ ಕ್ಷೀಣ..!

| Published : Apr 23 2024, 12:46 AM IST / Updated: Apr 23 2024, 04:45 AM IST

ಮಂಡ್ಯ ಜಿಲ್ಲೆಯ ಜನಮಾನಸದೊಳಗೆ ಚುನಾವಣೆ ತೀವ್ರತೆ ಕ್ಷೀಣ..!
Share this Article
  • FB
  • TW
  • Linkdin
  • Email

ಸಾರಾಂಶ

 ಮಂಡ್ಯ ಲೋಕಸಭಾ ಕ್ಷೇತ್ರ ರಾಷ್ಟ್ರ-ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿರುವುದೇನೋ ನಿಜ. ಕಾಂಗ್ರೆಸ್ ಮತ್ತು ಜೆಡಿಎಸ್-ಬಿಜೆಪಿ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿರುವುದೂ ಸತ್ಯ. ಆದರೆ, ಜನರು ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸದಂತೆ ಕಂಡುಬರುತ್ತಿಲ್ಲ.

ಮಂಡ್ಯ ಮಂಜುನಾಥ

 ಮಂಡ್ಯ :  ರಾಜಕೀಯವನ್ನೇ ಉಸಿರಾಗಿಸಿಕೊಂಡಿರುವ ಮಂಡ್ಯ ಲೋಕಸಭಾ ಕ್ಷೇತ್ರದೊಳಗೆ ಈ ಬಾರಿಯ ಚುನಾವಣೆ ಜನಮಾನಸದೊಳಗೆ ನಿರೀಕ್ಷಿತ ಮಟ್ಟದಲ್ಲಿ ತೀವ್ರತೆ ಸೃಷ್ಟಿಸಲು ಸಾಧ್ಯವಾಗಿಲ್ಲ. ಕಳೆದ ಬಾರಿ ಎದ್ದಿದ್ದ ಸ್ವಾಭಿಮಾನ ಅಲೆಯ ತೀವ್ರತೆ ಈಗ ಕಣ್ಣಿಗೆ ಕಾಣಿಸದಂತಾಗಿದೆ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸ್ಪರ್ಧೆಯಿಂದ ಮಂಡ್ಯ ಲೋಕಸಭಾ ಕ್ಷೇತ್ರ ರಾಷ್ಟ್ರ-ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿರುವುದೇನೋ ನಿಜಿ. ಕಾಂಗ್ರೆಸ್ ಮತ್ತು ಜೆಡಿಎಸ್-ಬಿಜೆಪಿ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿರುವುದೂ ಸತ್ಯ. ಆದರೆ, ಜನರು ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸದಂತೆ ಕಂಡುಬರುತ್ತಿಲ್ಲ. ಜಿಲ್ಲೆಯೊಳಗೆ ಈಗಿರುವ ರಾಜಕೀಯ ವಾತಾವರಣವನ್ನು ಗಮನಿಸಿದರೆ ಚುನಾವಣೆಯಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಚುನಾವಣೆ ಘೋಷಣೆಗೆ ಮುನ್ನವೇ ತೀವ್ರತೆ ಸೃಷ್ಟಿ:  2019 ರಲ್ಲಿ ಚುನಾವಣೆ ಘೋಷಣೆಗೂ ಮುನ್ನವೇ ಜನರಲ್ಲಿ ತೀವ್ರತೆ ಹುಟ್ಟುಹಾಕಿತ್ತು. ಅಂಬರೀಶ್ ಸಾವು, ಜನರಲ್ಲಿ ಮೂಡಿದ್ದ ಅನುಕಂಪ, ದೇವೇಗೌಡರ ಕುಟುಂಬದಿಂದ ಅಪ್ಪ, ಮಗ, ಮೊಮಕ್ಕಳು ಚುನಾವಣಾ ಅಖಾಡ ಪ್ರವೇಶಿಸಿದ್ದು, ಮುಖ್ಯಮಂತ್ರಿ ಪುತ್ರ ಕದನ ಕಣಕ್ಕಿಳಿದದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಸ್ಪರ್ಧೆ, ಜೆಡಿಎಸ್ ನಾಯಕರ ಬಿರುನುಡಿಗಳು, ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಸುಮಲತಾರಿಗೆ ಘೋಷಿಸಿದ ಬೆಂಬಲ, ಕ್ಷೇತ್ರಾದ್ಯಂತ ಸಿಡಿದೆದ್ದ ಸ್ವಾಭಿಮಾನ. ಇವೆಲ್ಲಾ ಕಾರಣಗಳಿಂದ ಚುನಾವಣೆ ರೋಚಕತೆ ಪಡೆದುಕೊಂಡಿತ್ತು. ಆ ಚುನಾವಣೆಯನ್ನು ಜಿಲ್ಲೆಯ ಜನರೂ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದರು. ನಿಂತಲ್ಲಿ, ಕುಂತಲ್ಲಿ, ಹೋದೆಡೆಯಲ್ಲೆಲ್ಲಾ ಚುನಾವಣೆಯದ್ದೇ ಮಾತಾಗಿತ್ತು. ಚುನಾವಣೆ ಮುಗಿದು ಫಲಿತಾಂಶ ಬರುವವರೆಗೂ ಜನರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತ್ತು.

ಎಚ್‌ಡಿಕೆ ಸ್ಪರ್ಧೆಯಿಂದ ಹೊಸ ರಂಗು:

ಈ ಬಾರಿಯ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕದನ ಕಣ ಪ್ರವೇಶಿಸಿ ರಾಜಕೀಯ ರಂಗು ನೀಡಿದ್ದರೂ ಜನರು ಮಾತ್ರ ಅತ್ಯುತ್ಸಾಹವನ್ನೇನೂ ತೋರುತ್ತಿಲ್ಲ. ಇಂತಹವರೇ ಗೆಲ್ಲಲೇಬೇಕೆಂಬ ವಿಷಯವಾಗಿ ಬಿರುಸಿನ ಚರ್ಚೆಗಳಾಗಲೀ. ಹಠ, ಪ್ರತಿಷ್ಠೆಗೆ ಬಿದ್ದವರಂತಾಗಲೀ, ಸ್ವಾಭಿಮಾನವನ್ನು ಮತ್ತೊಮ್ಮೆ ತೀವ್ರ ಸ್ವರೂಪದಲ್ಲಿ ಪ್ರದರ್ಶಿಸುವುದಕ್ಕೆ ಸಿದ್ಧರಾಗಿ ನಿಂತವರಂತೆ ಕಂಡುಬರುತ್ತಿಲ್ಲ. ಚುನಾವಣೆ ವಿಷಯವಾಗಿ ಹೆಚ್ಚು ತಲೆಕೆಡಿಸಿಕೊಳ್ಳದೆ ಮೌನವಾಗಿದ್ದಾರೆ. ಇದರಿಂದ ರಾಜಕೀಯ ಲೆಕ್ಕಾಚಾರಗಳು ಸುಲಭಕ್ಕೆ ಸಿಗದಂತಾಗಿವೆ.

ಪಕ್ಷಗಳೊಳಗಷ್ಟೇ ಪ್ರತಿಷ್ಠೆ:  ಕಾಂಗ್ರೆಸ್ ಮತ್ತು ಜೆಡಿಎಸ್-ಬಿಜೆಪಿ ಪಕ್ಷಗಳೊಳಗಿನ ನಾಯಕರು, ಮುಖಂಡರು- ಕಾರ್ಯಕರ್ತರು ಎಂದಿನಂತೆ ಚುನಾವಣಾ ರಣೋತ್ಸಾಹವನ್ನು ಪ್ರದರ್ಶಿಸುತ್ತಿದ್ದಾರೆ. ಪ್ರತಿಷ್ಠೆಗೆ ಬಿದ್ದವರಂತೆ ಗೆಲುವಿಗೆ ಹೋರಾಟ ನಡೆಸುತ್ತಿದ್ದಾರೆ. ಎರಡೂ ಪಕ್ಷಗಳಲ್ಲೂ ತಂತ್ರ- ಪ್ರತಿತಂತ್ರ, ರಣತಂತ್ರಗಳನ್ನು ರೂಪಿಸುತ್ತಾ ಚುನಾವಣಾ ರಣರಂಗದೊಳಗೆ ಮತಬೇಟೆಯಲ್ಲಿ ತೊಡಗಿದ್ದಾರೆ. ಕಳೆದ ಚುನಾವಣೆ ಮಾದರಿಯಲ್ಲೇ ಜಿಲ್ಲೆಯೊಳಗೆ ಕಾಂಗ್ರೆಸ್‌ನವರು ಮತ್ತೊಮ್ಮೆ ಸ್ವಾಭಿಮಾನದ ಅಲೆ ಎಬ್ಬಿಸುವ ಸಾಹಸಕ್ಕೆ ಮುಂದಾಗಿದ್ದರೂ ಕೈ ನಾಯಕರ ನಿರೀಕ್ಷೆಯಂತೆ ಜನರಿಂದ ಸ್ಪಂದನೆ ಸಿಗದಂತಾಗಿದೆ.

ನಟ-ನಟಿಯರಿಲ್ಲದ ಕಾರಣಕ್ಕೆ ಜನಾಕರ್ಷಣೆ ಇಲ್ಲ:

ಅಂಬರೀಶ್ ಸ್ಪರ್ಧೆಯಿಂದ ಜಿಲ್ಲೆಯೊಳಗೆ ಸಿನಿಮಾ ಕಲಾವಿದರ ಪ್ರವೇಶ ಶುರುವಾಯಿತು. ಮೂರು ಬಾರಿ ಸತತವಾಗಿ ಅಂಬರೀಶ್ ಆಯ್ಕೆಯಾದರು. ಆನಂತರ ರಮ್ಯಾ ಒಂದು ಉಪಚುನಾವಣೆಯಲ್ಲಿ ಗೆದ್ದು ಮತ್ತೊಂದು ಸಾರ್ವತ್ರಿಕ ಚುನಾವಣೆಯಲ್ಲಿ ಸೋತರು. ಬಳಿಕ ಸುಮಲತಾ ಸ್ಪರ್ಧೆ ಇಡೀ ದೇಶದ ಗಮನ ಸೆಳೆದಿತ್ತು. ಮೂರು ಅವಧಿಯಿಂದ ಸಿನಿಮಾ ರಂಗದ ಸ್ಟಾರ್ ನಟ-ನಟಿಯರೇ ಜಿಲ್ಲೆಯ ಚುನಾವಣಾ ಅಖಾಡದೊಳಗೆ ವಿಜೃಂಭಿಸುತ್ತಿದ್ದರು. ಇದರಿಂದ ಜನರೂ ಸಹಜವಾಗಿಯೇ ಚುನಾವಣೆಗೆ ಹೆಚ್ಚು ಆಕರ್ಷಿತರಾಗಿದ್ದರು. ಸಿನಿಮಾ ನಟ-ನಟಿಯರಿಲ್ಲದ ಈ ಚುನಾವಣೆ ಜನರ ಆಕರ್ಷಣೆ ಕಳೆದುಕೊಳ್ಳುವುದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಗೆಲ್ಲಿಸಲು ಹಠಕ್ಕೆ ಬಿದ್ದಿಲ್ಲ:

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಮಣೇಗೌಡ ಜಿಲ್ಲೆಗೆ ಹೊಸ ಮುಖ. ಮಾತು ಕೂಡ ಬಹಳ ಕಡಿಮೆ. ಅಷ್ಟೇನೂ ಪರಿಚಿತರಲ್ಲದ ಕಾರಣ ಜನರು ಅವರು ಹೆಚ್ಚು ಉತ್ಸಾಹವನ್ನೇನೂ ತೋರುತ್ತಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರಿಚಿತ ವ್ಯಕ್ತಿಯಾಗಿದ್ದರೂ ಅವರನ್ನೂ ಅತ್ಯುತ್ಸಾಹದಿಂದ ಗೆಲ್ಲಿಸಲೇಬೇಕೆಂಬ ಹಠಕ್ಕೆ ಬಿದ್ದವರಂತೆ ಜನರು ರಣೋತ್ಸಾಹವನ್ನೇನೂ ಪ್ರದರ್ಶಿಸುತ್ತಿಲ್ಲ. ಇಬ್ಬರ ಸ್ಪರ್ಧೆಯನ್ನೂ ಒಂದೇ ತಕ್ಕಡಿಯಲ್ಲಿ ಸಮಾನವಾಗಿ ತೂಗುಹಾಕಿ ನೋಡುತ್ತಿದ್ದಾರೆ. ಇಬ್ಬರಲ್ಲಿ ಯಾರ ಪರವಾಗಿ ಅಥವಾ ಯಾರ ವಿರುದ್ಧವಾಗಿಯೂ ತೀವ್ರ ಸ್ವರೂಪದ ಆಸಕ್ತಿ, ವಿಶ್ವಾಸ, ವಿರೋಧವನ್ನು ಪ್ರದರ್ಶಿಸದೆ ಸಹಜ ರೀತಿಯ ನಡೆಯನ್ನು ಪ್ರದರ್ಶಿಸುತ್ತಿದ್ದಾರೆ.

ಎರಡೂ ಪಕ್ಷದವರು ಆಯೋಜಿಸುವ ಚುನಾವಣಾ ಪ್ರಚಾರ ಸಭೆ-ಸಮಾರಂಭ, ಪ್ರಚಾರ ಸ್ಥಳಗಳಿಗೆ ಜನರು ಸೇರುತ್ತಿದ್ದಾರೆ. ಆದರೆ, ಯಾರ ಪರ ಜನರ ಹೆಚ್ಚು ಒಲವು ತೋರುತ್ತಿದ್ದಾರೆ, ಯಾರ ಪರ ತೀವ್ರ ವಿರೋಧಿ ಭಾವನೆ ಇದೆ ಎನ್ನುವುದನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿಲ್ಲ. ಚುನಾವಣಾ ವಿಷಯವಾಗಿ ಜನರು ಗಂಭೀರತೆಯನ್ನೇ ಕಳೆದುಕೊಂಡವರಂತೆ ಇದ್ದಾರೆ. ಯಾರು ಗೆದ್ದರು, ಸೋತರು ನಮಗೇನು ಎಂಬ ಮನೋಭಾವದಲ್ಲಿರುವುದು ಗೋಚರಿಸುತ್ತಿದೆ.

ಪಕ್ಷಗಳಿಗಷ್ಟೇ ಪ್ರತಿಷ್ಠೆ:

ಅಸ್ತಿತ್ವವನ್ನೇ ಕಳೆದುಕೊಂಡಿರುವ ಜೆಡಿಎಸ್‌ಗೆ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಸ್ಥಳೀಯವಾಗಿ ನಾಯಕರು, ಮುಖಂಡರು, ಕಾರ್ಯಕರ್ತರಿಗೆ ಉತ್ಸಾಹ ತುಂಬಿದ್ದರೆ, ಚಲುವರಾಯಸ್ವಾಮಿ ನಾಯಕತ್ವದಲ್ಲಿ ಕಾಂಗ್ರೆಸ್ ಮುಖಂಡರು-ಕಾರ್ಯಕರ್ತರು ಹೆಚ್ಚು ಆಸಕ್ತಿಯಿಂದ ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಭ್ಯರ್ಥಿಯೇ ಇಲ್ಲದ ಬಿಜೆಪಿ ಪಕ್ಷದೊಳಗೆ ನೀರಸ ವಾತಾವರಣ ಮನೆ ಮಾಡಿದೆ. ಜಿಲ್ಲೆಯೊಳಗೆ ಈ ಬಾರಿಯ ಚುನಾವಣೆ ಎಚ್.ಡಿ.ಕುಮಾರಸ್ವಾಮಿ ಮತ್ತು ಚಲುವರಾಯಸ್ವಾಮಿ ನಡುವಿನ ಪ್ರತಿಷ್ಠೆಯ ಕದನವೆಂಬಂತೆ ಗೋಚರಿಸುತ್ತಿದೆ. ಇಬ್ಬರು ರಾಜಕೀಯ ವೈರಿಗಳ ನಡುವಿನ ಜಿದ್ದಾಜಿದ್ದಿನ ಕದನದೊಳಗೆ ಗೆಲುವು ಯಾರಿಗೆ ಸಿಗಲಿದೆ ಎನ್ನುವುದು ರಾಜಕೀಯವಾಗಿ ಕುತೂಹಲ ಕೆರಳಿಸಿದೆಯೇ ವಿನಃ ಜನಮಾನಸದೊಳಗೆ ಈ ವಿಚಾರ ತೀವ್ರ ಸ್ವರೂಪದ ಕಂಪನವನ್ನೇನೂ ಸೃಷ್ಟಿಸದಂತಾಗಿದೆ.