ನಾವು ನಾವು ಎಂದು ಬಿಜೆಪಿ-ಜೆಡಿಎಸ್ ನಡುವೆ ತಿಕ್ಕಾಟ ಇದೆ: ಕೃಷಿ ಸಚಿವ ಚಲುವರಾಯಸ್ವಾಮಿ

| Published : Aug 06 2024, 12:35 AM IST / Updated: Aug 06 2024, 05:41 AM IST

ಸಾರಾಂಶ

ಕರ್ನಾಟಕ ಕಾಂಗ್ರೆಸ್ ನ ಭದ್ರಕೋಟೆಯಾಗುವುದೋ ಎಂಬ ಆತಂಕದಲ್ಲಿರುವ ಬಿಜೆಪಿ-ಜೆಡಿಎಸ್‌ಗೆ ನಿದ್ರೆ ಮಾಡಲಾಗುತ್ತಿಲ್ಲ. ಅವರಿಗೆ ನಿದ್ರೆ ಬರುವಂತೆ ಇಂಜೆಕ್ಷನ್ ಇನ್ನೂ ಸಿಕ್ಕಿಲ್ಲ. ಸೋತ ಮೇಲೆ 5 ವರ್ಷ ಕಾಯುವ ಸಂಯಮವೂ ಇಲ್ಲ. ತಾಳ್ಮೆಯೂ ಇಲ್ಲ. ಹಾಗಾಗಿ ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ.  

 ಮದ್ದೂರು :  ಎಚ್.ಡಿ.ಕುಮಾರಸ್ವಾಮಿ ರಕ್ತದ ಕಣ ಕಣದಲ್ಲೂ ದ್ವೇಷ ತುಂಬಿಕೊಂಡಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದನ್ನು ಅವರಿಂದ ಸಹಿಸಲಾಗುತ್ತಿಲ್ಲ. ಅದಕ್ಕಾಗಿ ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಸೋಮವಾರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕೇಂದ್ರ ಎನ್‌ಡಿಎ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಹಾಗೂ ಬಿಜೆಪಿ ಸರ್ಕಾರ ಹಿಂದಿನ ಭ್ರಷ್ಟಾಚಾರದ ವಿರುದ್ಧ ಆಯೋಜಿಸಿದ್ದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿ, ಕರ್ನಾಟಕ ಕಾಂಗ್ರೆಸ್ ನ ಭದ್ರಕೋಟೆಯಾಗುವುದೋ ಎಂಬ ಆತಂಕದಲ್ಲಿರುವ ಬಿಜೆಪಿ-ಜೆಡಿಎಸ್‌ಗೆ ನಿದ್ರೆ ಮಾಡಲಾಗುತ್ತಿಲ್ಲ. ಅವರಿಗೆ ನಿದ್ರೆ ಬರುವಂತೆ ಇಂಜೆಕ್ಷನ್ ಇನ್ನೂ ಸಿಕ್ಕಿಲ್ಲ. ಸೋತ ಮೇಲೆ 5 ವರ್ಷ ಕಾಯುವ ಸಂಯಮವೂ ಇಲ್ಲ. ತಾಳ್ಮೆಯೂ ಇಲ್ಲ. ಹಾಗಾಗಿ ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ. ಅದರಲ್ಲಿ ಕುಮಾರಸ್ವಾಮಿ ಮುಂಚೂಣಿಯಲ್ಲಿ ಇದ್ದಾರೆ ಎಂದು ಜರಿದರು.

ಕುಮಾರಸ್ವಾಮಿ ರಾಜಕೀಯದಲ್ಲಿ ದುಡ್ಡೆ ನೋಡಿಲ್ಲ. ಕುಮಾರಸ್ವಾಮಿ ಅತ್ಯಂತ ಪ್ರಾಮಾಣಿಕರು. ಅವರು ಆಲೂಗೆಡ್ಡೆ ಬೆಳೆದೇ ಮೇಲೆ ಬಂದವರು. ನಾವು ಏನು ಇಲ್ಲದೇ ರಾಜಕೀಯಕ್ಕೆ ಬಂದಿದ್ದೇವೆ. ಅವರು ಉದ್ಯಮ ಮಾಡಿಕೊಂಡು ಬಂದಿದ್ದಾರಂತೆ. ನಾವು ಉದ್ಯಮ ಮಾಡಿಕೊಂಡು ಬಂದಿಲ್ಲ. ಅವರ ಅಣ್ಣ-ತಮ್ಮಂದಿರು ಏನು ಉದ್ಯಮ ಮಾಡಿದ್ದಾರೆಂಬುದು ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ನಾವು ನಾವು ಎಂದು ಬಿಜೆಪಿ-ಜೆಡಿಎಸ್ ನಡುವೆ ತಿಕ್ಕಾಟ ಇದೆ. ಬಿಜೆಪಿಯಲ್ಲಿ ಎರಡು ಗುಂಪು, ಜೆಡಿಎಸ್‌ನಲ್ಲಿ ಒಂದು ಗುಂಪು ಇದೆ. ಆದರೆ ನಮ್ಮಲ್ಲಿ ಇರೋದು ಒಂದೇ ಗುಂಪು ಎಂದು ನೇರವಾಗಿ ನುಡಿದರು.

ಅಪ್ಪ-ಮಗನೇ ನನ್ನ ಟಾರ್ಗೆಟ್ ಎಂದಿದ್ದ ಬಿಎಸ್‌ವೈ

ಇಸ್ಪೀಟ್ ಆಟದಲ್ಲಿರುವಂತೆ ಜೆಡಿಎಸ್‌ನ್ನು ಹೇಗಾದರೂ ಹೊಂದಿಸಿಕೊಳ್ಳಬಹುದು. ಇತ್ತ ರಮ್ಮಿ ಆಡುವುದಕ್ಕೆ ಅತ್ತ ಸೆಟ್ ಆಟಕ್ಕೂ ಸೇರಿಸಿಕೊಳ್ಳಬಹುದು. ಹಾಗಂತ ನಾನು ಜೋಕರ್‌ಗಳು ಅಂತ ಹೇಳುತ್ತಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಮೊನಚಾಗಿ ಹೇಳಿದರು.

ಜನಾಂದೋಲನ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ನನಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮೇಲೆ ನನಗೇನೂ ದ್ವೇಷವಿಲ್ಲ. ಜೆಡಿಎಸ್‌ನಲ್ಲಿರುವ ಅಪ್ಪ-ಮಗನೇ ನನ್ನ ಟಾರ್ಗೆಟ್ ಎಂದು ಹೇಳಿದ್ದನ್ನು ಮರೆತಿದ್ದಾರೆ. ಬಿಜೆಪಿ-ಜೆಡಿಎಸ್‌ನವರು ಮೈತ್ರಿಯೋ, ಮದುವೆಯೋ ಆಗಿದ್ದಾರೆ. ಅದೆಷ್ಟು ದಿನ ಉಳಿಯುವುದೋ ನೋಡೋಣ ಎಂದು ಕುಟುಕಿದರು.