ಚುನಾವಣೆಗೆ ಪೂರ್ವದಲ್ಲಿ ಮೇಕೆದಾಟು ಅಣೆಕಟ್ಟೆಗೆ 24 ಗಂಟೆಯಲ್ಲಿ ಅನುಮತಿ ಕೊಡಿಸುತ್ತೇನೆ ಎಂದಿದ್ದರು. ಒಂದೂವರೆ ವರ್ಷವಾದರೂ ಕೊಡಿಸಲಿಲ್ಲ. ಭದ್ರಾವತಿಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಪುನಶ್ಚೇತನ ಮಾಡುತ್ತೇನೆ, ಕಾಗದ ಕಾರ್ಖಾನೆಗೆ ಕಾಯಕಲ್ಪ ಕೊಡುತ್ತೇನೆಂದವರು ಈವರೆಗೆ ಏನು ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ/ಮಳವಳ್ಳಿ

ಕುಮಾರಸ್ವಾಮಿಯಷ್ಟು ಸುಳ್ಳು ಹೇಳುವವರನ್ನು ನಾನೆಲ್ಲೂ ನೋಡಿಯೇ ಇಲ್ಲ. ಯಾವಾಗಲೂ ಹಿಟ್‌ ಅಂಡ್‌ ರನ್‌ ಮಾಡುವುದೇ ಅವರ ಕೆಲಸ. ಸುಳ್ಳು ಹೇಳಿಕೊಂಡು ಜನರನ್ನು ದಾರಿತಪ್ಪಿಸುವುದೇ ಅವರ ಕಾಯಕವಾಗಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಕಿಡಿಕಾರಿದರು.

ಮಳವಳ್ಳಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಚುನಾವಣೆಗೆ ಪೂರ್ವದಲ್ಲಿ ಮೇಕೆದಾಟು ಅಣೆಕಟ್ಟೆಗೆ 24 ಗಂಟೆಯಲ್ಲಿ ಅನುಮತಿ ಕೊಡಿಸುತ್ತೇನೆ ಎಂದಿದ್ದರು. ಒಂದೂವರೆ ವರ್ಷವಾದರೂ ಕೊಡಿಸಲಿಲ್ಲ. ಭದ್ರಾವತಿಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಪುನಶ್ಚೇತನ ಮಾಡುತ್ತೇನೆ, ಕಾಗದ ಕಾರ್ಖಾನೆಗೆ ಕಾಯಕಲ್ಪ ಕೊಡುತ್ತೇನೆಂದವರು ಈವರೆಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವರಾಗಿ ಒಂದೂವರೆ ವರ್ಷದಿಂದ ಒಂದು ಕೈಗಾರಿಕೆಯನ್ನು ಜಿಲ್ಲೆಗೆ ತರಲಾಗದೆ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ನಾವ್ಯಾರೂ ಜಮೀನು ಕೊಡುವುದಿಲ್ಲವೆಂದು ಎಲ್ಲಿಯೂ ಹೇಳಿಲ್ಲ. ಕೈಗಾರಿಕೆ ಸ್ಥಾಪನೆ ಮಾಡಬೇಕೆಂದಲ್ಲಿ ನೋಂದಾಯಿತ ಕಂಪನಿ ಉದ್ದೇಶಿತ ಕೈಗಾರಿಕೆಗೆ ಯಾವ ಪ್ರಮಾಣದ ಭೂಮಿ ಬೇಕು ಇತ್ಯಾದಿ ವಿವರಗಳನ್ನೊಳಗೊಂಡ ಮಾಹಿತಿಯನ್ನು ಸಂಬಂಧಿಸಿದ ಪ್ರಾಧಿಕಾರ ಇಲ್ಲವೇ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು. ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವರು. ನಂತರ ರಾಜ್ಯ ಸರ್ಕಾರ ಆ ಬಗ್ಗೆ ಕ್ರಮ ವಹಿಸುತ್ತದೆ. ಇಷ್ಟು ಸಣ್ಣ ಪ್ರಮಾಣದ ಜ್ಞಾನವೂ ಮಾಜಿ ಮುಖ್ಯಮಂತ್ರಿಯಾದವರಿಗೆ ಇಲ್ಲವೇ ಅಥವಾ ಗೊತ್ತಿದ್ದೂ ಜನರಲ್ಲಿ ಗೊಂದಲ ಮೂಡಿಸಲು ಈ ರೀತಿ ಮಾಡುತ್ತಿದ್ದಾರೆಯೇ ಎಂದು ಹರಿಹಾಯ್ದರು.

ಎಚ್‌ಡಿಕೆ ಕೇವಲ ಹಿಟ್ ಅಂಡ್ ರನ್:

ಸಾಲ ಮನ್ನಾ ಮಾಡಿದ್ದೇ ಸಾಧನೆ ಎಂದು ಹೇಳುತ್ತಾರೆ. ಸಾಲ ಮನ್ನಾ ಯೋಜನೆಯಲ್ಲಿ ಡಿಸಿಸಿ ಬ್ಯಾಂಕ್‌ಗಳಿಗೆ ಹಣ ಕೊಡಲಿಲ್ಲ. ಕುಮಾರಸ್ವಾಮಿ ಅವರು ಕೇವಲ ಹಿಟ್ ಅಂಡ್ ರನ್ ಮಾಡುತ್ತಿದ್ದಾರೆಯೇ ಹೊರತು ಯಾವುದೇ ಕೆಲಸ ಮಾಡಲಿಲ್ಲ. ಜನರ ಬಳಿ ಬಂದು ಎಲ್ಲವನ್ನೂ ಮಾಡಿದ್ದೇನೆ ಎಂದು ಫೋಸ್‌ ಕೊಡುತ್ತಾರೆ ಎಂದು ಕಿಡಿಕಾರಿದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗೋಷ್ಠಿಯಲ್ಲಿದ್ದರು.೮೮.೬೭ ಲಕ್ಷ ರು. ಮೌಲ್ಯದ ರಸಗೊಬ್ಬರ ವಶ

ಕೇರಳದ ತಾಜೀರ್ ಎಂಬಾತ ನೆಲಮಂಗಲದ ಬಳಿಯ ಗೋದಾಮಿನಲ್ಲಿ ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಮಾಡಿ ತಮಿಳುನಾಡಿಗೆ ಸರಬರಾಜು ಮಾಡುತ್ತಿದ್ದನ್ನು ಪತ್ತೆ ಮಾಡಿದ ಜಾಗೃತ ದಳದ ಅಕಾರಿಗಳು ೮೮.೬೭ ಲಕ್ಷ ರು. ಮೌಲ್ಯದ ೧೩೯ಲ ಮೆಟ್ರಿಕ್ ಟನ್ ರಸಗೊಬ್ಬರವನ್ನು ವಶಪಡಿಸಿಕೊಂಡಿದ್ದಾರೆ ಎಂದು ಸಚಿವರು ಹೇಳಿದರು.

ಇಂತಹ ಪ್ರಕರಣಗಳು ಇದೇ ಮೊದಲಲ್ಲ, ಹಿಂದೆಯೂ ಸಹ ನಡೆದಿವೆ. ಕಳೆದ ೩ ವರ್ಷದಲ್ಲಿ ೨೨ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಇದರಲ್ಲಿ ೭ ಪ್ರಕರಣಗಳಿಂದ ೪೦ ಲಕ್ಷ ಮೌಲ್ಯದ ೬೩೮ ಮೆಟ್ರಿಕ್ ಟನ್ ಗೊಬ್ಬರವನ್ನು ವಶಪಡಿಸಿಕೊಳ್ಳಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆ, ಕೃಷಿ, ಕಂದಾಯ, ಪೊಲೀಸ್ ಸೇರಿದಂತೆ ಹಲವು ಇಲಾಖೆಗಳನ್ನೊಳಗೊಂಡ ಜಾಗೃತ ದಳವನ್ನು ರಚಿಸಲಾಗಿದ್ದು, ಅವರು ಪತ್ತೆ ಕಾರ್ಯ ಕೈಗೊಳ್ಳುತ್ತಾರೆ. ಇದು ನಿರಂತರವಾಗಿರುತ್ತದೆ. ನಾವೂ ಸಹ ಸಂಪೂರ್ಣವಾಗಿ ನಿಲ್ಲಿಸುತ್ತೇವೆ ಎಂದು ಹೇಳಲಾಗದು. ನಿಯಂತ್ರಣ ಮಾಡಲು ಯಾವ್ಯಾವ ಕ್ರಮಗಳನ್ನ ಕೈಗೊಳ್ಳಬೇಕೋ ಎಲ್ಲವನ್ನೂ ತೆಗೆದುಕೊಂಡಿದ್ದೇವೆ ಎಂದು ವಿವರಿಸಿದರು.ಸದನದಲ್ಲಿ ಏಕೆ ಚರ್ಚಿಸುತ್ತಿಲ್ಲ

ರಾಜ್ಯದಲ್ಲಿ 2800 ರೈತರ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳ ಕುರಿತಂತೆ ಸದನದಲ್ಲಿ ಏಕೆ ಜೆಡಿಎಸ್‌-ಬಿಜೆಪಿ ಮೈತ್ರಿಕೂಟದ ಶಾಸಕರು ಚರ್ಚಿಸುತ್ತಿಲ್ಲ. ಇವರ ಅಣ್ಣ (ಎಚ್‌.ಡಿ.ರೇವಣ್ಣ)ನ ಮೂಲಕ ಶಾಸಕರ ಜೊತೆಗೂಡಿ ದನಿ ಎತ್ತಬಹುದಲ್ಲವೇ. ಏಕೆ ಎಲ್ಲ ಮೌನವಾಗಿದ್ದಾರೆ ಎಂದು ಸಚಿವ ಎನ್‌.ಚಲುವರಾಯಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದರು.

ರೈತರ ಆತ್ಮಹತ್ಯೆ ಪ್ರಕರಣಗಳು ನಡೆದಿಲ್ಲ ಎಂದು ನಾವೇನು ಹೇಳುತ್ತಿಲ್ಲ. ಆತ್ಮಹತ್ಯೆಗೆ ಒಂದೇ ಕಾರಣವಿರುವುದಿಲ್ಲ. ಈಗ ಅದು ನಿಯಂತ್ರಣಕ್ಕೆ ಬಂದಿದೆ. ಸಂಪೂರ್ಣ ನಿಲ್ಲಿಸಿದ್ದೇವೆ ಎಂದೇನೂ ಹೇಳುವುದಿಲ್ಲ. ನಾವೂ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಹತೋಟಿಗೆ ತಂದಿದ್ದೇವೆ. ದಾಖಲೆಗಳಿದ್ದ ಮೇಲೆ ಚರ್ಚಿಸಲು ಏಕೆ ಹಿಂಜರಿಕೆ ಎಂದು ಪ್ರಶ್ನಿಸಿದರು.

ರೈತರ ಆತ್ಮಹತ್ಯೆ ಬಗ್ಗೆ ಮಾತನಾಡುವ ಕುಮಾರಸ್ವಾಮಿ ಅದೇ ವೇಳೆ ಮೆಕ್ಕೆಜೋಳದ ಬೆಂಬಲ ಬೆಲೆ ಬಗ್ಗೆ ಮಾತನಾಡುವುದಿಲ್ಲ. ಬೆಂಬಲ ಬೆಲೆ ನಿಗದಿ ಮಾಡಿ ಅನುದಾನ ಕೊಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿಲ್ಲವೇ. ಅದನ್ನು ಇವರು ಏಕೆ ಮಾಡುವುದಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಹಲವಾರು ಯೋಜನೆಗಳನ್ನು ನೀಡುತ್ತಿದೆ. ವಿಪಕ್ಷದವರಿಗೆ ಮಾತನಾಡಲು ಏನೂ ಇಲ್ಲ. ಗಾಳಿಯಲ್ಲಿ ಗುಂಡು ಹೊಡೆದಂತೆ ಸದನದ ಹೊರಗೆ ಮಾತನಾಡುವುದನ್ನು ರೂಢಿಸಿಕೊಂಡಿದ್ದಾರೆ. ಅವರ ಬಳಿ ರಾಜ್ಯ ಸರ್ಕಾರದ ಲೋಪದೋಷಗಳ ಪಟ್ಟಿ ಇದ್ದರೆ ಸದನದಲ್ಲಿ ಚರ್ಚೆ ಮಾಡಬಹುದಿತ್ತು. ಅವರಲ್ಲಿ ವಿಷಯವೇ ಇಲ್ಲ. ಕಳೆದ ಬಾರಿ ನಡೆದ ಸದನದಲ್ಲೂ ಸಹ ಯಾವ ವಿಚಾರವನ್ನೂ ಇಟ್ಟುಕೊಂಡು ಚರ್ಚೆ ಮಾಡಲಿಲ್ಲ. ಈಗಲೂ ಅದೇ ಪರಿಸ್ಥಿತಿ ಇದೆ. ನಾವು ಉತ್ತರ ಕೊಡಲು ಸಿದ್ಧರಿದ್ದೇವೆ. ಮೈತ್ರಿ ಪಕ್ಷದ ಶಾಸಕರು ನಮಗೆ ಸಮಸ್ಯೆಗಳ ಪ್ರಶ್ನೆಗಳನ್ನೇ ಕೇಳುವುದಿಲ್ಲ ಎಂದು ವ್ಯಂಗ್ಯವಾಡಿದರು.ಮಂಗ ಮಾಡಬೇಡಿ

ಮಿಮ್ಸ್ ಪಕ್ಕದಲ್ಲಿರುವ ತಮಿಳುಕಾಲೋನಿ ಜಾಗದಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ. ಅವರು ಮೊದಲು ಕೇಂದ್ರದ ಆರೋಗ್ಯ ಇಲಾಖೆಯಿಂದ ಅನುಮತಿ ಪತ್ರ ತರಲಿ, ನಾವು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಜಾಗ ಕೊಡುತ್ತೇವೆ. ಅದು ಬಿಟ್ಟು ನಮ್ಮನ್ನು ಹಾಗೂ ಜನರನ್ನು ಮಂಗ ಮಾಡಬೇಡಿ ಎಂದು ತಿರುಗೇಟು ನೀಡಿದರು.

ತಮಿಳು ಕಾಲೋನಿ ಜಾಗದ ವಿಚಾರ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ. ಅದನ್ನು ತೆರವು ಮಾಡಿಸಿ ನಂತರ ಜಾಗವನ್ನು ಮಿಮ್ಸ್‌ಗೆ ಕೊಡಿಸಬಹುದು. ಆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇವೆ ಎಂದರು.