ಸಾರಾಂಶ
ಮಾಜಿ ಸಿಎಂ ಕುಮಾರಸ್ವಾಮಿ ಅವರ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ಅವರು ಲಘುವಾಗಿ ಮಾತನಾಡುತ್ತಾರೆಂದು ನಾವು ಮಾತನಾಡುವುದಿಲ್ಲ. ಮಂಡ್ಯ ಜಿಲ್ಲೆಯ ಜನ ಸಂಸ್ಕಾರ ಕಲಿಸಿದ್ದಾರೆ. ಇಲ್ಲಿನ ಜನರೊಟ್ಟಿಗೆ ಸ್ವಾಭಿಮಾನದ ಚುನಾವಣೆ ಮಾಡುತ್ತೇವೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು
ಕನ್ನಡಪ್ರಭ ವಾರ್ತೆ ಮಂಡ್ಯ
ಮಾಜಿ ಸಿಎಂ ಕುಮಾರಸ್ವಾಮಿ ಅವರ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ಅವರು ಲಘುವಾಗಿ ಮಾತನಾಡುತ್ತಾರೆಂದು ನಾವು ಮಾತನಾಡುವುದಿಲ್ಲ.
ಜಿಲ್ಲೆಯ ಜನ ಸಂಸ್ಕಾರ ಕಲಿಸಿದ್ದಾರೆ. ಇಲ್ಲಿನ ಜನರೊಟ್ಟಿಗೆ ಸ್ವಾಭಿಮಾನದ ಚುನಾವಣೆ ಮಾಡುತ್ತೇವೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಲೋಕಸಭೆಗೆ ಅಭ್ಯರ್ಥಿಯಾಗಿ ಕುಮಾರಸ್ವಾಮಿಯೇ ಬರಲಿ ಅಥವಾ ಬೇರೆಯವರೇ ಬರಲಿ ಆ ಪಕ್ಷದ ತೀರ್ಮಾನ ಅವರಿಗೆ ಬಿಟ್ಟದ್ದು. ನಾವು ಸ್ವಾಗತನೂ ಮಾಡಲ್ಲ. ಸವಾಲು ಹಾಕಲ್ಲ.
ಆದರೆ, ಈ ಬಾರಿ ಪಕ್ಕಾ ಮಂಡ್ಯ ನಾಟಿ ಸ್ಟೈಲ್‌ನಲ್ಲಿ ಚುನಾವಣೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.ನಾನೂ ಸಹ ಶ್ರೀರಾಮನ ಭಕ್ತನೇ. ನಾವು ಹಿಂದುವಾಗಿ ಪೂಜೆ ಮಾಡುತ್ತೇವೆ. ಮೇಲುಕೋಟೆಯ ಚಲುವನಾರಾಯಣಸ್ವಾಮಿಯ ಹೆಸರೇ ಇಟ್ಟುಕೊಂಡಿದ್ದೇನೆ.
ನಾನೂ ಸಹ ಚಲುವನಾರಾಯಣಸ್ವಾಮಿ ಭಕ್ತನೇ ಎಂದು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಅವರಿಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ಸೇರುವಂತೆ ಸುಮಲತಾ ಅವರನ್ನು ಯಾರು ಸಂಪರ್ಕ ಮಾಡಿಲ್ಲ: ಸಂಸದೆ ಸುಮಲತಾ ಬಿಜೆಪಿಯಿಂದಲೇ ಸಂಸದರಾಗಲು ಇಚ್ಚಿಸಿರುವುದಾಗಿ ಹೇಳಿದ್ದಾರೆ.
ಹೀಗಾಗಿ ನಮ್ಮ ಪಕ್ಷ ಸೇರುವಂತೆ ಕಾಂಗ್ರೆಸ್‌ನ ಯಾವುದೇ ನಾಯಕರು, ಶಾಸಕರಾಗಲಿ ಅವರನ್ನು ಸಂಪರ್ಕ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.ನಾನು ಕಾಂಗ್ರೆಸ್‌ಗೆ ಹೋಗಲ್ಲ.
ಬಿಜೆಪಿಯಿಂದಲೇ ಟಿಕೆಟ್ ಬಯಸುತ್ತನೇ ಎಂದು ತಿಳಿಸಿದ್ದಾರೆ. ಹೀಗಾಗಿ ನಮ್ಮನ್ನು ಏಕೆ ಸಂಪರ್ಕಿಸುತ್ತಾರೆ ಎಂದು ಪ್ರಶ್ನಿಸಿದರು. ಅವರಿಗೂ ನಮಗೂ ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ.
ಅಂಬರೀಶ್ ಮತ್ತು ನಾನು ಒಳ್ಳೆಯ ಸ್ನೇಹಿತರು, ಅವರ ಕಾಲಾನಂತಹ ಸುಮಲತಾ ರಾಜಕಾರಣಕ್ಕೆ ಬಂದಿದ್ದಾರೆ. ಅವರನ್ನು ನಾನಾಗಲೀ, ನಮ್ಮ ಶಾಸಕರು ಮತ್ತು ನಮ್ಮ ನಾಯಕರಾಗಲೀ ಯಾರೂ ಸಂಪರ್ಕ ಮಾಡಿಲ್ಲ.
ಒಂದು ವೇಳೆ ಸಂಪರ್ಕ ಮಾಡಿದ್ದರೆ ಯಾರು ಎಂಬುದನ್ನು ಸಂಸದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಮಲತಾ ಅವರು ಅಧಿಕೃತವಾಗಿ ಬಿಜೆಪಿ ಪರ ಪ್ರಚಾರ ಮಾಡಿದ್ದಾರೆ.
ಈ ಚಲುವರಾಯಸ್ವಾಮಿ ಕರೆಯಲಿಲ್ಲ, ಕೇಳಲಿಲ್ಲ ಎನ್ನುತ್ತಾರೆ. ನಾವು ಹಿಂದೆ ಕೇಳಿದ್ದೆವು. ಆದರೆ, ಬರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಹಿಂದೆ ಜಿಲ್ಲೆಯಲ್ಲಿ ನಾವು ಎಲ್ಲ 11 ಶಾಸಕ ಸ್ಥಾನವನ್ನೂ ಕಳೆದುಕೊಂಡಿದ್ದೆವು. ಈಗ ರಾಜ್ಯ ಮತ್ತು ಜಿಲ್ಲೆಯ ಜನರ ಆಶೀರ್ವಾದದಿಂದ 10 ಸ್ಥಾನಗಳನ್ನು ಗಳಿಸಿದ್ದೇವೆ.
ಜಿಲ್ಲೆಯ ಜನ ಅಭಿವೃದ್ಧಿ ಕಡೆಗೆ ಗಮನ ಹರಿಸಲು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಬೇರೆ ಜಿಲ್ಲೆಗಳಿಗಿಂತ ನಮ್ಮ ಜಿಲ್ಲೆ ತುಂಬಾ ಹಿಂದುಳಿದಿದೆ. ನಾವು ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯವುದರ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದರು.
ಲೋಕಸಭಾ ಚುನಾವಣೆ ಅಭ್ಯರ್ಥಿ ಆಯ್ಕೆಯಲ್ಲಿ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಶೀಘ್ರ ಕಾಂಗ್ರೆಸ್ ಅಭ್ಯರ್ಥಿಯನ್ನು ರಾಷ್ಟ್ರ ಮತ್ತು ರಾಜ್ಯ ನಾಯಕರು ಘೋಷಣೆ ಮಾಡುತ್ತಾರೆ. ಬಹುಶಃ ಫೆಬ್ರವರಿ ಎರಡನೇ ವಾರದೊಳಗೆ ಅಭ್ಯರ್ಥಿ ಘೋಷಣೆ ಆಗಲಿದೆ ಎಂದರು.ಶಾಸಕ ಪಿ. ರವಿಕುಮಾರ್ ಇತರರು ಇದ್ದರು.