ಸಾರಾಂಶ
ಕಾಂಗ್ರೆಸ್‌ನವರಿಗೆ ಹೋರಾಟ ಹೊಸದೇನಲ್ಲ. ನಮ್ಮ ರಾಜ್ಯದ ಸಂಪತ್ತು ಉಳಿಸಲಿಕ್ಕೆ ನಾವು ರಾಜ್ಯದಲ್ಲಿ ಹೋರಾಟ ಮಾಡಿದ್ದೇವೆ. ನಾಡು, ನುಡಿ, ಜಲಕ್ಕಾಗಿ ಪಾದಯಾತ್ರೆ ಮಾಡಿದ್ದೇವೆ. ಆದರೆ, ಬಿಜೆಪಿ-ಜೆಡಿಎಸ್‌ನವರ ಪಾದಯಾತ್ರೆ ಏಕೆಂದು ಯಾರಿಗೂ ತಿಳಿಯುತ್ತಿಲ್ಲ. ಸದನದಲ್ಲಿ ಅವಕಾಶ ಕೊಟ್ಟರೂ ಚರ್ಚೆ ಮಾಡಲಿಲ್ಲ. ಈಗ ಮೈಸೂರು ಚಲೋ ಮಾಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ದೇವೇಗೌಡರ ಕುಟುಂಬವನ್ನು ಸರ್ವನಾಶ ಮಾಡಲು ಹೊರಟಿರುವವರ ಜೊತೆ ಸೇರಿ ಪಾದಯಾತ್ರೆ ಮಾಡುತ್ತಿರುವುದನ್ನು ನೋಡಿದರೆ ಎಚ್.ಡಿ.ಕುಮಾರಸ್ವಾಮಿಗೆ ಅಧಿಕಾರದಾಹ ಎಷ್ಟಿದೆ ಎನ್ನುವುದು ಅರ್ಥವಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.ನಗರದಲ್ಲಿ ನಡೆದ ಕಾಂಗ್ರೆಸ್ ಜನಾಂದೋಲನ ಸಭೆಯಲ್ಲಿ ಮಾತನಾಡಿ, ನಿಮ್ಮ ಕುಟುಂಬದ ಪೆನ್‌ಡ್ರೈವ್ ಹಂಚಿದ್ದು ಕಾಂಗ್ರೆಸ್‌ವರಲ್ಲ, ಬಿಜೆಪಿಯವರು ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೂ ಅಂತಹವರ ಜೊತೆ ಸೇರಿ ಪಾದಯಾತ್ರೆ ನಡೆಸುತ್ತಿದ್ದೀರಿ. ನಿಮಗೆ ಅಷ್ಟೊಂದು ಅಧಿಕಾರ ದಾಹ ಇದೆಯಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನವರಿಗೆ ಹೋರಾಟ ಹೊಸದೇನಲ್ಲ. ನಮ್ಮ ರಾಜ್ಯದ ಸಂಪತ್ತು ಉಳಿಸಲಿಕ್ಕೆ ನಾವು ರಾಜ್ಯದಲ್ಲಿ ಹೋರಾಟ ಮಾಡಿದ್ದೇವೆ. ನಾಡು, ನುಡಿ, ಜಲಕ್ಕಾಗಿ ಪಾದಯಾತ್ರೆ ಮಾಡಿದ್ದೇವೆ. ಆದರೆ, ಬಿಜೆಪಿ-ಜೆಡಿಎಸ್‌ನವರ ಪಾದಯಾತ್ರೆ ಏಕೆಂದು ಯಾರಿಗೂ ತಿಳಿಯುತ್ತಿಲ್ಲ. ಸದನದಲ್ಲಿ ಅವಕಾಶ ಕೊಟ್ಟರೂ ಚರ್ಚೆ ಮಾಡಲಿಲ್ಲ. ಈಗ ಮೈಸೂರು ಚಲೋ ಮಾಡುತ್ತಿದ್ದಾರೆ ಎಂದು ಮೂದಲಿಸಿದರು.ಪಾದಯಾತ್ರೆ ವಿಚಾದಲ್ಲಿ ಬಿಜೆಪಿಯವರಲ್ಲೇ ಸಾಕಷ್ಟು ಭಿನ್ನಾಭಿಪ್ರಾಯ ಇದೆ. ಆ ಪಕ್ಷದವರೆಲ್ಲರೂ ಸೇರಿ ಪಾದಯಾತ್ರೆ ಮಾಡುತ್ತಿಲ್ಲ. ವಿಜಯೇಂದ್ರ ಅಂಡ್ ಗ್ಯಾಂಗ್ ಮಾತ್ರ ಭಾಗವಹಿಸಿದೆ. ಬಿಜೆಪಿಯ ಹಿರಿಯರು ಯಾರೂ ಪಾಲ್ಗೊಂಡಿಲ್ಲ.
ಜೆಡಿಎಸ್‌ನವರಿಗೂ ಇಷ್ಟ ಇರಲಿಲ್ಲ. ಮೋದಿ, ಶಾ ಕಾಲಿಡಿದು ಒಪ್ಪಿಸಿದ್ದಾರೆ ಎಂದು ವ್ಯಂಗ್ಯವಾಡಿದರು.ಬಿಜೆಪಿ ಹೈಕಮಾಂಡ್ ಮನವೊಲಿಸಲು ಈ ಪಾದಯಾತ್ರೆ. ನಮ್ಮ ಹಕ್ಕು ನಾವು ಕೇಳುತ್ತಿರುವುದಕ್ಕೆ ಹೈಕಮಾಂಡ್ ಒತ್ತಡ ಹಾಕುತ್ತಿದೆ. ಸಿಬಿಐ, ಇಡಿ, ಐಟಿ ಬಳಿಕ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದು ಆಳುವ ಸರ್ಕಾರವಲ್ಲ, ಆಳಿಸುವ ಸರ್ಕಾರ. ನೀವು ಪಾದಯಾತ್ರೆಯನ್ನ ಕನ್ನಡಿಗರ ಅಸ್ಮಿತೆ ಉಳಿಸಲು ದೆಹಲಿಗೆ ಮಾಡಿ ಎಂದು ಸಲಹೆ ನೀಡಿದರು.
ಸಮಾವೇಶದಲ್ಲಿ ಕುಸಿದುಬಿದ್ದ ಪೊಲೀಸ್ ಪೇದೆಕನ್ನಡಪ್ರಭ ವಾರ್ತೆ ಮಂಡ್ಯಮಂಡ್ಯದಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶ ನಡೆಯುವಾಗಲೇ ಪೊಲೀಸ್ ಪೇದೆಯೊಬ್ಬರು ಕುಸಿದುಬಿದ್ದು ಅಸ್ವಸ್ಥಗೊಂಡ ಘಟನೆ ಜರುಗಿತು. ವೇದಿಕೆ ಮುಂಭಾಗ ಭದ್ರತೆಗೆ ನಿಯೋಜನೆಗೊಂಡಿದ್ದ ಮಂಡ್ಯ ಪೂರ್ವ ಠಾಣೆ ಹೆಡ್ ಕಾನ್ ಸ್ಟೇಬಲ್ ಕೃಷ್ಣಚಾರಿ ಮೂರ್ಛೆರೋಗದಿಂದ ಕುಸಿದು ಅಸ್ವಸ್ಥಗೊಂಡರು. ಪೇದೆ ಅಸ್ವಸ್ಥಗೊಳ್ಳುತ್ತಿದ್ದಂತೆ ಸಮಾವೇಶದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಆ ಸಮಯದಲ್ಲಿ ಮಾತನಾಡುತ್ತಿದ್ದ ಸಚಿವ ಸಂತೋಷ್ ಲಾಡ್ ಕೆಲ ಕಾಲ ಭಾಷಣ ನಿಲ್ಲಿಸಿದರು. ಬಳಿಕ ಕೃಷ್ಣಚಾರಿಯನ್ನು ಸಹದ್ಯೋಗಿಗಳು ಆಸ್ಪತ್ರೆಗೆ ಕರೆದೊಯ್ದರು.