ಸಾರಾಂಶ
ವಿಧಾನಪರಿಷತ್ : ಮಹರ್ಷಿ ವಾಲ್ಮೀಕಿ ನಿಗಮ ಹಗರಣದ ಚರ್ಚೆ ವೇಳೆ ಬಿಜೆಪಿಯ ಸಿ.ಟಿ.ರವಿ ಅವರು ಕಾಂಗ್ರೆಸ್‌ನ ಪುಟ್ಟಣ್ಣ ಅವರನ್ನು ನಿತ್ಯ ಸುಮಂಗಲಿ ಎಂದು ಕರೆದ ವಿಚಾರ ಗದ್ದಲಕ್ಕೆ ಕಾರಣವಾಯಿತು.
ಮಹರ್ಷಿ ವಾಲ್ಮೀಕಿ ನಿಗಮ ಹಗರಣದ ವಿಚಾರವಾಗಿ ಸಿ.ಟಿ.ರವಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾಗ ಮಧ್ಯ ಪ್ರವೇಶಿಸಿದ ಪುಟ್ಟಣ್ಣ, ಹಿಂದೆ ಬಿಜೆಪಿ ಸರ್ಕಾರ ರಚನೆಯಾಗಿದ್ದು ಹೇಗೆ ಎಂಬುದನ್ನು ಬಿಜೆಪಿಯ ಎಚ್.ವಿಶ್ವನಾಥ್ ಅವರು ಸದನಕ್ಕೆ ತಿಳಿಸಬೇಕು. ಅಧಿಕಾರಕ್ಕೆ ಹೇಗೆ ಬಂದರು ಎಂದು ಹೇಳಿ ಎಂದು ಆಗ್ರಹಿಸಿದರು.
ಅದಕ್ಕೆ ಸಿ.ಟಿ.ರವಿ, ಅಧಿಕಾರಕ್ಕಾಗಿ ಕೆಲವರು ನಿತ್ಯ ಸುಮಂಗಲಿಗಳಾಗುತ್ತಾರೆ ಎಂದು ಪುಟ್ಟಣ್ಣ ಪಕ್ಷಾಂತರ ಮಾಡಿದ ಬಗ್ಗೆ ಸೂಚ್ಯವಾಗಿ ಹೇಳಿದರು.
ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಉಮಾಶ್ರೀ, ನೀವು ಬಳಸಿದ ಪದ ನಿಮ್ಮ ಮನಸ್ಥಿತಿಯನ್ನು ತೋರಿಸುತ್ತದೆ. ಮಹಿಳೆಯರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು.
ಅದಕ್ಕೆ ಧ್ವನಿಗೂಡಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳೆಯರನ್ನು ಕೀಳಾಗಿ ಕಾಣುವುದನ್ನು ಇನ್ನಾದರೂ ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಗದ್ದಲ ಏರ್ಪಟ್ಟಿತು. ಕೊನೆಗೆ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ನಿತ್ಯ ಸುಮಂಗಲಿ ಪದವನ್ನು ಕಡತದಿಂದ ತೆಗೆಯುವಂತೆ ಸೂಚಿಸಿದ ನಂತರ ಗದ್ದಲ ತಿಳಿಯಾಯಿತು.