ಪ್ರೀತಂಗೌಡಗೆ ಬುದ್ಧಿ ಹೇಳುವಂತೆ ವಿಜಯೇಂದ್ರಗೆ ಆಗ್ರಹ : ಜೆಡಿಎಸ್‌ ಕಾರ್ಯಕರ್ತರು ಅಸಮಾಧಾನ

| Published : Aug 08 2024, 01:39 AM IST / Updated: Aug 08 2024, 04:40 AM IST

ಸಾರಾಂಶ

ಮಂಡ್ಯದಲ್ಲಿ ನಡೆದ ಬಿಜೆಪಿ-ಜೆಡಿಎಸ್‌ ನೇತೃತ್ವದ ಮೈಸೂರು ಚಲೋ ಪಾದಯಾತ್ರೆಯಲ್ಲಿ ಹಾಸನ ಕ್ಷೇತ್ರದ ಪ್ರೀತಂಗೌಡ ಭಾಗವಹಿಸಿದ್ದಕ್ಕೆ ಜೆಡಿಎಸ್‌ ಕಾರ್ಯಕರ್ತರು ಅಸಮಾಧಾನ ಆಕ್ರೋಶ ವ್ಯಕ್ತಪಡಿಸಿದರು.

 ಮಂಡ್ಯ :  ಮಂಡ್ಯದಲ್ಲಿ ನಡೆದ ಬಿಜೆಪಿ-ಜೆಡಿಎಸ್‌ ನೇತೃತ್ವದ ಮೈಸೂರು ಚಲೋ ಪಾದಯಾತ್ರೆಯಲ್ಲಿ ಹಾಸನ ಕ್ಷೇತ್ರದ ಪ್ರೀತಂಗೌಡ ಭಾಗವಹಿಸಿದ್ದಕ್ಕೆ ಜೆಡಿಎಸ್‌ ಕಾರ್ಯಕರ್ತರು ಅಸಮಾಧಾನ ಆಕ್ರೋಶ ವ್ಯಕ್ತಪಡಿಸಿದರು.

ಪಾದಯಾತ್ರೆ ಸಾಗುತ್ತಿರುವ ಸಮಯದಲ್ಲಿ ಮಹಾವೀರ ವೃತ್ತದ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಅಡ್ಡ ಹಾಕಿದ ಜೆಡಿಎಸ್‌ ಕಾರ್ಯಕರ್ತರು ಮಾಜಿ ಶಾಸಕ ಪ್ರೀತಂಗೌಡರಿಗೆ ಬುದ್ಧಿ ಹೇಳುವಂತೆ ಸಲಹೆ ನೀಡಿದರು. ಇಲ್ಲದಿದ್ದರೆ ನಾವೇ ಅವರಿಗೆ ಬುದ್ಧಿ ಕಲಿಸಬೇಕಾಗುವುದೆಂಬ ಎಚ್ಚರಿಕೆಯನ್ನೂ ನೀಡಿದ್ದಾರೆ ಎನ್ನಲಾಗಿದೆ.

ಮೈಷುಗರ್‌ ವೃತ್ತಕ್ಕೆ ಪಾದಯಾತ್ರೆ ಆಗಮಿಸಿದ ವೇಳೆ ನಿಖಿಲ್ ಕುಮಾರಸ್ವಾಮಿ ಮಾತನಾಡುವ ವೇಳೆ ಪ್ರೀತಂಗೌಡ ಬೆಂಬಲಿಗರೊಂದಿಗೆ ಆಗಮಿಸಿ ಗೊಂದಲ ಸೃಷ್ಟಿಸಿದ್ದಾರೆ. ಉದ್ದೇಶಪೂರ್ವಕವಾಗಿ ಬೆಂಬಲಿಗರ ಮೂಲಕ ತಮ್ಮ ಪರ ಜೈಕಾರ ಕೂಗಿಸಿ ಪ್ರಚೋದನೆಗೊಳಪಡಿಸಿದ್ದಾರೆ. ಅವರನ್ನು ಪಾದಯಾತ್ರೆಗೆ ಬರುವಂತೆ ಆಹ್ವಾನಿಸಿದ್ದವರು ಯಾರು. ನೂರಾರು ಬೆಂಬಲಿಗರನ್ನು ಕರೆದುಕೊಂಡು ಬರುವ ಅಗತ್ಯವೇನಿತ್ತು. ಬಂದವರು ಪಾದಯಾತ್ರೆಯಲ್ಲಿ ಶಾಂತಿಯುತವಾಗಿ ಭಾಗವಹಿಸದೆ ಗೊಂದಲ ಸೃಷ್ಟಿಸಿದ್ದೇಕೆ. ಕಾರ್ಯಕರ್ತರಲ್ಲಿ ವೈಮನಸ್ಸು, ಭಿನ್ನಮತ ಸೃಷ್ಟಿಗೆ ಕಾರಣರಾಗಿರುವ ಪ್ರೀತಂಗೌಡ ಅವರನ್ನು ದೂರವಿಡುವಂತೆ ಒತ್ತಾಯಿಸಿದರು ಎಂದು ಗೊತ್ತಾಗಿದೆ.