ಕೊಡಗಿನ ವಿನಯ್‌ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕು ಬಿಜೆಪಿಗನ ಮೊಬೈಲ್‌, ಡೆತ್‌ನೋಟ್‌ ಲ್ಯಾಬ್‌ಗೆ

| N/A | Published : Apr 06 2025, 01:50 AM IST / Updated: Apr 06 2025, 07:26 AM IST

ಕೊಡಗಿನ ವಿನಯ್‌ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕು ಬಿಜೆಪಿಗನ ಮೊಬೈಲ್‌, ಡೆತ್‌ನೋಟ್‌ ಲ್ಯಾಬ್‌ಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡುಗು ಜಿಲ್ಲೆ ಮೂಲದ ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ ಅತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಹೆಣ್ಣೂರು ಠಾಣೆ ಪೊಲೀಸರು, ಮೃತನ ಮೊಬೈಲ್‌ ಹಾಗೂ ಡೆತ್‌ನೋಟ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.

 ಬೆಂಗಳೂರು :  ಕೊಡುಗು ಜಿಲ್ಲೆ ಮೂಲದ ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ ಅತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಹೆಣ್ಣೂರು ಠಾಣೆ ಪೊಲೀಸರು, ಮೃತನ ಮೊಬೈಲ್‌ ಹಾಗೂ ಡೆತ್‌ನೋಟ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.

ವಿನಯ್ ಮೊಬೈಲ್‌ನಲ್ಲಿರುವ ದತ್ತಾಂಶ ಹಾಗೂ ಡಿಲೀಟ್‌ ಆಗಿರುವ ದತ್ತಾಂಶವನ್ನು ತಜ್ಞರು ರಿಟ್ರೈವ್ ಮಾಡಲಿದ್ದಾರೆ. ಅಂತೆಯೇ ವಿನಯ್‌ನ ಡೆತ್‌ನೋಟ್‌ ಬರಹದ ಅಸಲಿಯತ್ತನ್ನೂ ಪರೀಕ್ಷಿಸಿ ದೃಢೀಕರಿಸಲಿದ್ದಾರೆ.

ಇನ್ನು ಡೆತ್‌ನೋಟ್‌ನಲ್ಲಿ ವಿನಯ್‌ ತನ್ನ ಆತ್ಮಹತ್ಯೆಗೆ ಕೊಡಗು ಜಿಲ್ಲೆಯ ಕಾಂಗ್ರೆಸ್‌ ಶಾಸಕರಾದ ವಿರಾಜಪೇಟೆಯ ಎ.ಎಸ್‌.ಪೊನ್ನಣ್ಣ, ಮಡಿಕೇರಿಯ ಮಂಥರ್‌ ಗೌಡ ಹಾಗೂ ಕೊಡಗು ಜಿಲ್ಲೆ ಕಾಂಗ್ರೆಸ್‌ ಮುಖಂಡ ತೆನ್ನೇರಾ ಮೆಹೀನಾ ಹಾಗೂ ಇತರರ ಕಿರಕುಳವೇ ಕಾರಣ ಎಂದು ಆರೋಪಿಸಿದ್ದಾರೆ. ಸದ್ಯ ಎಫ್‌ಐಆರ್‌ನಲ್ಲಿ ಕೊಡಗು ಜಿಲ್ಲೆ ಕಾಂಗ್ರೆಸ್‌ ಮುಖಂಡ ತೆನ್ನೇರಾ ಮೊಹೀನಾ ಹೆಸರು ಮಾತ್ರ ಉಲ್ಲೇಖವಾಗಿದೆ. ಹೀಗಾಗಿ ಶೀಘ್ರದಲ್ಲೇ ಅವರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಆತ್ಮಹತ್ಯೆಗೆ ಶರಣಾದ ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ ಪತ್ನಿ ಮತ್ತು ಮಗುವಿನ ಜತೆಗೆ ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ನೆಲೆಸಿದ್ದರು. ನಾಗವಾರದ ಎಚ್‌ಬಿಆರ್‌ ಲೇಔಟ್‌ನ ಖಾಸಗಿ ಕಂಪನಿಯಲ್ಲಿ ಆಪರೇಷನ್‌ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ ವಿನಯ್‌ ಶುಕ್ರವಾರ ಮುಂಜಾನೆ ಸುಮಾರು 4.30ಕ್ಕೆ ತಾನು ಕೆಲಸ ಮಾಡುವ ಕಂಪನಿಯ ಗೋದಾಮಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಮೃತನ ಸಹೋದರ ಜೀವನ್‌ ನೀಡಿದ ದೂರಿನ ಮೇರೆಗೆ ಹೆಣ್ಣೂರು ಠಾಣೆ ಪೊಲೀಸರು ತೆನ್ನೀರಾ ಮೆಹೀನಾ ಸೇರಿ ಇತರರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ, ಬೆದರಿಕೆ, ಕಿರುಕುಳ ಆರೋಪದಡಿ ಎಫ್‌ಐಆರ್‌ ದಾಖಲಿಸಿದ್ದರು.