‘ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ. ಜ. 8 ಮತ್ತು ಜ.9 ರವರೆಗೆ ಕಾಯಿರಿ’ ಎಂದು ಡಿ.ಕೆ. ಶಿವಕುಮಾರ್ ಅವರ ಆಪ್ತ ಶಾಸಕರಾದ ಇಕ್ಬಾಲ್ ಹುಸೇನ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸುವರ್ಣ ವಿಧಾನಸೌಧ : ‘ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ. ಜ. 8 ಮತ್ತು ಜ.9 ರವರೆಗೆ ಕಾಯಿರಿ’ ಎಂದು ಡಿ.ಕೆ. ಶಿವಕುಮಾರ್ ಅವರ ಆಪ್ತ ಶಾಸಕರಾದ ಇಕ್ಬಾಲ್ ಹುಸೇನ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮುಂದಿನ ಐದು ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂಬ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ‘ಯಾವುದೇ ಶಾಸಕರಾಗಲಿ ವರಿಷ್ಠರ ಬಗ್ಗೆ ನಂಬಿಕೆ ಇಡಬೇಕು. ವರಿಷ್ಠರ ತೀರ್ಮಾನಕ್ಕೆ ಕಾಯಬೇಕು. ಜ. 8 ಮತ್ತು 9 ರವರೆಗೆ ಕಾಯಿರಿ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ’ ಎಂದು ಹೇಳಿದರು. ಇದಕ್ಕೂ ಮೊದಲು ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು ಎಷ್ಟೇ ಪ್ರಶ್ನಿಸಿದರೂ ‘ಜಾಗ ಬಿಡ್ರಪ್ಪಾ. ನಾನು ಏನೂ ಮಾತನಾಡಲ್ಲ’ ಎಂದು ಕೈ ಮುಗಿದರು.
ಬಳಿಕ ಪ್ರತಿಕ್ರಿಯಿಸಿದ ಇಕ್ಬಾಲ್ ಹುಸೇನ್ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ಸ್ಪಷ್ಟಪಡಿಸಿದರು.
ಜನವರಿವರೆಗೆ ಕಾಯಿರಿ- ಶಿವಗಂಗಾ:
ಡಿ.ಕೆ. ಶಿವಕುಮಾರ್ ಅವರ ಮತ್ತೊಬ್ಬ ಆಪ್ತ ಶಾಸಕ ಬಸವರಾಜ ಶಿವಗಂಗಾ, ‘ಈಗ ಏನೂ ಮಾತನಾಡುವುದಿಲ್ಲ. ನಾನು ಜನವರಿಗಾಗಿ ಕಾಯುತ್ತಿದ್ದೇನೆ. ನಾನು ಹಿಟ್ ಅಂಡ್ ರನ್ ಮಾಡುವುದಿಲ್ಲ. ನೂರಕ್ಕೆ ನೂರು ಮಾತನಾಡುತ್ತೇನೆ. ಜ.2 ರಂದು ಬಂದು ಮಾತನಾಡುತ್ತೇನೆ’ ಎಂದು ಹೇಳಿದರು.
ಯಾರ ಹಣೆ ಬರಹದಲ್ಲಿ ಏನು ಬರೆದಿದೆಯೋ ಗೊತ್ತಿಲ್ಲ. ನಮ್ಮ ಸರ್ಕಾರ 2028ಕ್ಕೆ ಮುಗಿಯಲ್ಲ. ಇನ್ನೂ ಏಳೂವರೆ ವರ್ಷಗಳ ಕಾಲ ನಮ್ಮ ಸರ್ಕಾರವೇ ಇರುತ್ತದೆ. ಸಂದರ್ಭ ಬಂದಾಗ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದರು.
ಯತೀಂದ್ರಗೆ ಆಲ್ ದಿ ಬೆಸ್ಟ್ ಹೇಳಿದ ರವಿ ಗಣಿಗ:
ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಹೇಳಿಕೆ ನೀಡಿರುವ ಶಾಸಕ ಯತಿಂದ್ರ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಯಾವುದೇ ನೋಟಿಸ್ ನೀಡದೇ ಇರುವುದು ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂದು ಮಾಧ್ಯಮಗಳ ಅಭಿಪ್ರಾಯವನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಮಂಡ್ಯ ಶಾಸಕ ರವಿ ಗಣಿಗ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಯತೀಂದ್ರ ಸಿದ್ದರಾಮಯ್ಯ ಏನು ಹೇಳಿದ್ದಾರೋ ಗೊತ್ತಿಲ್ಲ. ಆಲ್ ದಿ ಬೆಸ್ಟ್ ಟು ಯತೀಂದ್ರ ಸಿದ್ದರಾಮಯ್ಯ ಎಂದರು.
ಹೈಕಮಾಂಡ್ ಏನು ಹೇಳುತ್ತದೆಯೋ ಅದೇ ಅಂತಿಮ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಇಬ್ಬರೂ ಹೇಳಿದ್ದಾರೆ. ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾದರೆ ಅವರ ಸಂಪುಟದಲ್ಲಿ ಸಚಿವನಾಗುವುದಿಲ್ಲ ಎಂದು ಕೆ.ಎನ್. ರಾಜಣ್ಣ ಹೇಳಿದ್ದಾರೆ. ಹಾಗಾದರೆ ಮುಖ್ಯಮಂತ್ರಿ ಆಗುತ್ತಾರೆ ಎಂದಲ್ಲವೇ? ಎಂದು ಪ್ರಶ್ನಿಸಿದರು.
ಹೈಕಮಾಂಡ್ ತೀರ್ಮಾನ ಅಂತಿಮ- ಬಾಲಕೃಷ್ಣ:
ಮಾಗಡಿ ಶಾಸಕ ಬಾಲಕೃಷ್ಣ ಮಾತನಾಡಿ, ಸಿದ್ದರಾಮಯ್ಯ ಅವರು ಪೂರ್ಣಾವಧಿ ಮುಖ್ಯಮಂತ್ರಿ ಆಗುವುದು ಯತೀಂದ್ರ ಅವರ ಕೈಯಲ್ಲಿ ಆಗಲಿ ಬಾಲಕೃಷ್ಣ ಅವರ ಕೈಯಲ್ಲಿ ಆಗಲಿ ಇಲ್ಲ. ಶಾಸಕಾಂಗ ಪಕ್ಷದ ತೀರ್ಮಾನವೇ ಬೇರೆ ಹೈಕಮಾಂಡ್ ತೀರ್ಮಾನವೇ ಬೇರೆ. ಯಾವ ಸಂದರ್ಭದಲ್ಲಿ ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅವರನ್ನೇ ಮುಂದುವರಿಸಬಹುದು ಅಥವಾ ಹೊಸ ಮುಖ್ಯಮಂತ್ರಿಯನ್ನು ಮಾಡಬಹುದು ಎಂದು ಹೇಳಿದರು.
ನನಗೆ ನೋಟಿಸ್ ನೀಡಿದ್ದಾರೆ
ಮಾತನಾಡಲ್ಲ: ರಂಗನಾಥ್
ಕುಣಿಗಲ್ ಶಾಸಕ ಎಚ್.ಡಿ. ರಂಗನಾಥ್ ಮಾತನಾಡಿ, ‘ಮುಖ್ಯಮಂತ್ರಿ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ. ನನಗೆ ನೋಟಿಸ್ ನೀಡಿದ್ದಾರೆ. ಹೀಗಾಗಿ ನಾನು ವ್ಯಾಖ್ಯಾನವನ್ನಾಗಲೀ, ಪ್ರತಿಕ್ರಿಯೆಯನ್ನಾಗಲೀ ಮಾಡುವುದಿಲ್ಲ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಅನ್ಯೋನ್ಯವಾಗಿ ಸರ್ಕಾರ ನಡೆಸುತ್ತಿದ್ದಾರೆ. ಶಿಸ್ತಿನ ಸಿಪಾಯಿಗಳಾಗಿ ಒಟ್ಟಾಗಿರುವುದು ನಮ್ಮ ಕರ್ತವ್ಯ. ಯತೀಂದ್ರ ಬಹಳಷ್ಟು ಚಿಂತನೆ ಮಾಡಿ ಮಾತನಾಡುವ ವ್ಯಕ್ತಿ. ಹೀಗಾಗಿ ಅವರು ಹೇಳಿದ ವಿಷಯ ಅವರನ್ನೇ ಕೇಳಿ’ ಎಂದು ಹೇಳಿದರು.
- 5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಎಂದು ಸಿಎಂ ಪುತ್ರ ಯತೀಂದ್ರ ಹೇಳಿಕೆ
- ಯತೀಂದ್ರ ಹೇಳಿಕೆ ಬೆನ್ನಲ್ಲೇ ತಿರುಗೇಟು ನೀಡುವ ಧಾಟಿಯಲ್ಲಿ ಡಿಕೆಶಿ ಆಪ್ತರ ನುಡಿ
- ಹೊಸ ವರ್ಷದಲ್ಲಿ ಡಿಕೆಶಿ ಸಿಎಂ ಆಗೇಆಗ್ತಾರೆ ಎಂದು ಡಿಸಿಎಂ ಬಣ ಪ್ರಬಲ ವಿಶ್ವಾಸ
- ಯಾರ ಹಣೆಯಲ್ಲಿ ಏನು ಬರೆದಿದೆಯೋ ಗೊತ್ತಿಲ್ಲ ಎಂದು ಶಿವಗಂಗಾ ಮಾರ್ಮಿಕ ನುಡಿ
- ಸಿದ್ದು 5 ವರ್ಷ ಸಿಎಂ ಎಂಬುದು ನಮ್ಮ ಕೈಲಿಲ್ಲ, ವರಿಷ್ಠರ ತೀರ್ಮಾನ ಫೈನಲ್: ಬಾಲಕೃಷ್ಣ

