ಕೋಮುವಾದ, ಭ್ರಷ್ಟಾಚಾರಿ ಸರ್ಕಾರದ ವಿರುದ್ಧ ಸಮರ : ಬೈರತಿ ಸುರೇಶ್

| Published : Apr 03 2024, 01:31 AM IST / Updated: Apr 03 2024, 05:12 AM IST

ಸಾರಾಂಶ

ದೇಶವನ್ನು ವಿಭಜಿಸಲು ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿ ಕೊಂಡಿರುವುದು, ಕೋಮುವಾದಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಜಾತ್ಯಾತೀತ ಪಕ್ಷವೆಂದು ಹೇಳಿಕೊಳ್ಳುವಂತ ನೈತಿಕತೆ ಕಳೆದು ಕೊಂಡಿದೆ

 ಕೋಲಾರ: ಕೇಂದ್ರದ ಕೋಮುವಾದಿ ಹಾಗೂ ಭ್ರಷ್ಟಾಚಾರ ಸರ್ಕಾರದ ವಿರುದ್ಧ ಕಾಂಗ್ರೆಸ್ ಚುನಾವಣೆಯಾಗಿದೆ, ಕಳೆದ ಎರಡು ಅವಧಿ ಕೇಂದ್ರದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರವು ಜನತೆಗೆ ಏನೇನು ಆಶ್ವಾಸನೆ ನೀಡಿತ್ತು ಅದು ಯಾವುದೂ ಈಡೇರಿಸದ ಬಿಜೆಪಿ ಪಕ್ಷವು ಸುಳ್ಳುಗಳ ಫ್ಯಾಕ್ಟರಿಯಾಗಿದೆ ಎಂದು ರಾಜ್ಯ ನಗರಾಭಿವೃದ್ದಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ತಾಲೂಕಿನ ಕುಂಬಾರಹಳ್ಳಿ ನಂದಿನಿ ಪ್ಯಾಲೇಸ್‌ನಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿ ಜೆ.ಡಿ.ಎಸ್ ಪಕ್ಷವು ಬಿಜೆಪಿ ಪಕ್ಷದ ಬಿ ಟೀಮ್ ಎಂದು ಈ ಹಿಂದೆಯೇ ತಿಳಿಸಿದ್ದನ್ನು ಈ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ರುಜೂವಾತು ಮಾಡಿದೆ. ದೇಶವನ್ನು ವಿಭಜಿಸಲು ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿ ಕೊಂಡಿರುವುದು, ಕೋಮುವಾದಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಜಾತ್ಯಾತೀತ ಪಕ್ಷವೆಂದು ಹೇಳಿಕೊಳ್ಳುವಂತ ನೈತಿಕತೆ ಕಳೆದು ಕೊಂಡಿದೆ ಎಂದು ಟೀಕಿಸಿದರು.

ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಳ

ಕೋಲಾರ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿತ್ತು 1500 ಪಾತಳ ಹೊಕ್ಕರೂ ನೀರು ಸಿಗುತ್ತಿರಲಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕೆ.ಸಿ.ವ್ಯಾಲಿ ನೀರು ಹಾಗೂ ಯರಗೋಳ್ ನೀರು ಹರಿಸಿದ ನಂತರ ಇಂದು ಅಂತರ್ಜಲ ಅಭಿವೃದ್ದಿಗೊಂಡಿದೆ, ಕಾಂಗ್ರೆಸ್ ಪಕ್ಷವು ಕೊಟ್ಟ ಮಾತಿನಂತೆ 5 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ನುಡಿದಂತೆ ನಡೆಯುವ ಪಕ್ಷವೆಂದು ಸಾಭೀತುಪಡಿಸಿದೆ ಎಂದು ವಿವರಿಸಿದರು.

ನಾಳೆ ಗೌತಮ್‌ ನಾಮಪತ್ರ

ಎಂಎಲ್‌ಸಿ ಹಾಗೂ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮ್ಮದ್ ಮಾತನಾಡಿ, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಪೈಪೋಟಿ ಹಾಗೂ ಲಾಭಿ ನಡೆದಿರುವುದು ಸತ್ಯ, ರಾಷ್ಟ್ರೀಯ ಪಕ್ಷಗಳಲ್ಲಿ ಇವೆಲ್ಲಾ ಸಹಜ, ಆದರೆ ನಮ್ಮ ಪಕ್ಷದಲ್ಲಿ ಯಾವುದೇ ರೀತಿ ಭಿನ್ನಮತ ಇಲ್ಲ, ಏ.೪ ಗುರುವಾರದಂದು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಕೆ.ವಿ.ಗೌತಮ್ ಅವರು ನಾಮ ಪತ್ರಸಲ್ಲಿಸಲಿದ್ದಾರೆ ಎಂದು ಹೇಳಿದರು. ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ರಾಜ್ಯದಲ್ಲಿ ೫ ಗ್ಯಾರಂಟಿ ಯೋಜನೆಗಳ ಕುರಿತು ಬಿಜೆಪಿ ಲಘುವಾಗಿ ಟೀಕಿಸುತ್ತಿದೆ. ಇದು ಬಡವರ ಪರ ಯೋಜನೆಗಳಾಗಿದೆ ಎಂಬುವುದನ್ನು ಅರ್ಥೈಸಿಕೊಳ್ಳಲಾಗದೆ ಹೋಗಿದೆ. ದೇಶದಲ್ಲಿ ಜನತೆ ಬದಲಾವಣೆ ನಿರೀಕ್ಷಿಸುತ್ತಿದ್ದಾರೆ. ಕಳೆದ 2023 ವಿಧಾನಸಭೆಯಲ್ಲಿ ರಾಜ್ಯದಲ್ಲಿ ಬದಲಾವಣೆ ತಂದಂತೆ ೨೦೨೪ರ ಲೋಕಸಭೆ ಚುನಾವಣೆಯಲ್ಲೂ ಜನತೆ ಬದಲಾವಣೆ ತರುತ್ತಾರೆ ಎಂದರು.

ಬಯಸದೆ ಬಂದ ಟಿಕೆಟ್‌ ಭಾಗ್ಯ

ಲೋಕಸಭಾ ಅಭ್ಯರ್ಥಿ ಕೆ.ವಿ.ಗೌತಮ್ ಮಾತನಾಡಿ, ಕಾಂಗ್ರೆಸ್ ಪಕ್ಷವು ನನಗೆ ಲೋಕಸಭೆಗೆ ಅವಕಾಶ ಮಾಡಿಕೊಡುವ ನಿರೀಕ್ಷೆಯನ್ನೆ ಹೊಂದಿರಲಿಲ್ಲ ನನಗೆ ಟಿಕೆಟ್ ನೀಡಿರುವುದು ಬಯಸದೆ ಬಂದ ಅವಕಾಶವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ನಿಸ್ವಾರ್ಥವಾಗಿ ದುಡಿದರೆ ತಾನಾಗೀಯೇ ಅವಕಾಶಗಳು ಹುಡುಕಿಕೊಂಡು ಬರುತ್ತದೆ ಅದಕ್ಕೆ ಯಾವ ಶಿಫಾರಸ್ಸು ಬೇಡ ಎಂಬುವುದಕ್ಕೆ ನಾನೇ ನಿದರ್ಶನವಾಗಿದ್ದೇನೆ ಎಂದರು.

ಶಾಸಕ ಕೊತ್ತೂರು ಮಂಜುನಾಥ್‌ರನ್ನು ಕೇವಲ ೧೫ ದಿನದ ಪ್ರಚಾರದಲ್ಲಿ ಬಹುಮತದಿಂದ ಗೆಲ್ಲಿಸಿದ್ದೀರಿ ಅದೇ ರೀತಿ ನನಗೆ ಸಿಕ್ಕಿರುವ ಅವಕಾಶ ಕೇವಲ ೨೪ ದಿನಗಳು ಮಾತ್ರ ಹಾಗಾಗಿ ನನ್ನನ್ನು ಆಶೀರ್ವಾದಿಸಿ ಲೋಕಸಭೆ ಕಳುಹಿಸುವಂತಾಗಬೇಕು, ನಾನು ಗೆದ್ದರೆ ಖರ್ಗೆಯವರು ಗೆದ್ದಂತೆ, ಪ್ರಜಾಪ್ರಭುತ್ವ ಗೆದ್ದಂತೆ ಆಗುತ್ತದೆ. ಕೋಲಾರವನ್ನು ಬೆಂಗಳೂರು ಮಾದರಿಯಲ್ಲಿ ಮುಂದಿನ ೫ ವರ್ಷಗಳಲ್ಲಿ ಅಭಿವೃದ್ದಿ ಪಡೆಸುತ್ತೇನೆಂದು ಭರವಸೆ ನೀಡಿದರು.ಶಾಸಕ ಕೊತ್ತೂರು ಮಂಜುನಾಥ್, ಮಾಜಿ ಸಚಿವರಾದ ಕೆ.ಶ್ರೀನಿವಾಸಗೌಡ, ಕೆ.ಎಸ್.ನಿಸಾರ್ ಅಹಮದ್, ಎಂಎಲ್‌ಸಿ ಎಂ.ಎಲ್.ಅನಿಲ್ ಕುಮಾರ್, ಶಾಸಕ ಕೆ.ವೈ.ನಂಜೇಗೌಡ, ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ್, ಮುಖಂಡರಾದ ಆದಿನಾರಾಯಣ, ಶ್ರೀಕೃಷ್ಣ, ಎಲ್.ಎ.ಮಂಜುನಾಥ್, ನಾಗನಾಳ ಸೋಮಣ್ಣ, ಊರುಬಾಗಿಲು ಶ್ರೀನಿವಾಸ್, ಮತ್ತಿತರರು ಇದ್ದರು.