ಸಾರಾಂಶ
ಕಲಬುರಗಿ : ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಅವಾಚ್ಯ ಶಬ್ದ ಬಳಸಿದ ಕುರಿತು ವಿಡಿಯೋ, ಆಡಿಯೋ ಕ್ಲಿಪಿಂಗ್ ಸಾಕ್ಷ್ಯ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸಿ.ಟಿ. ರವಿ ಅವಾಚ್ಯ ಶಬ್ದ ಬಳಿಸಿದ್ದು ಸತ್ಯ. ಸದನದ ಸದಸ್ಯರು ಅದಕ್ಕೆ ಸಾಕ್ಷಿ ಇದ್ದಾರೆ ಎಂದು ಸಮರ್ಥಿಸಿಕೊಂಡರು.ಸಿ.ಟಿ.ರವಿ ಬಳಸಿದ ಪದ ಅತ್ಯಂತ ಅನಾಗರಿಕವಾದದ್ದು. ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿ ಆಗಿದ್ದ ರವಿ ಬಾಯಲ್ಲಿ ಇಂಥಾ ಮಾತು ಬರುವುದು ನಾಚಿಕೆಗೇಡಿನದ್ದು. ಆ ಪದ ಬಳಸಿರುವುದನ್ನು ಇತರೆ ವಿಧಾನ ಪರಿಷತ್ ಸದಸ್ಯರು ಕೇಳಿಸಿಕೊಂಡಿದ್ದಾರೆ ಎಂದರು.
ಸಿ.ಟಿ. ರವಿ ಪ್ರಕರಣ ಕುರಿತಂತೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ, ನ್ಯಾಯಾಂಗ ತನಿಖೆ ಯಾಕೆ ಬೇಕು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಇದು ಕ್ರಿಮಿನಲ್ ಅಪರಾಧ ಪ್ರಕರಣ. ಬಿಜೆಪಿಯವರು ಅವರ ತಪ್ಪುಗಳನ್ನು ಮುಚ್ಚಿಕೊಳ್ಳಲು ನ್ಯಾಯಾಂಗ ತನಿಖೆ ಕೇಳುತ್ತಿದ್ದಾರೆ ಎಂದು ಹೇಳಿದರು.
ತನಿಖೆ ನಡೆಯುತ್ತಿದೆ, ಬೇರೆ ತನಿಖೆ ಏಕೆ?
ಸಿ.ಟಿ.ರವಿ ಬಳಸಿದ ಪದ ಅತ್ಯಂತ ಅನಾಗರಿಕವಾದದ್ದು. ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿ ಆಗಿದ್ದ ರವಿ ಬಾಯಲ್ಲಿ ಇಂಥಾ ಮಾತು ಬರುವುದು ನಾಚಿಕೆಗೇಡಿನದ್ದು. ಪ್ರಕರಣ ಕುರಿತು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನ್ಯಾಯಾಂಗ ತನಿಖೆ ಯಾಕೆ ಬೇಕು?
- ಸಿದ್ದರಾಮಯ್ಯ, ಮುಖ್ಯಮಂತ್ರಿ
--ಬೆಳಗಾವಿ ಬರಲು ಜನ ಕರೀತಿದ್ದಾರೆ
ಬೆಳಗಾವಿಯಿಂದ ನೀವು ಬದುಕಿ ಬಂದಿದ್ದೇ ಹೆಚ್ಚು ಎಂದು ಕೆಲವರು ಹೇಳಿದರು. ಯಾರು ಏನು ಮಾಡುತ್ತಾರೆ ನೋಡೋಣ, ಬೆಳಗಾವಿಗೆ ಬನ್ನಿ ಎಂದು ಬೆಳಗಾವಿ ಜನ ಹೇಳುತ್ತಿದ್ದಾರೆ. ಕೊಲೆ ಮಾಡಲು ಯತ್ನಿಸಿದವರು, ಕುಮ್ಮಕ್ಕು ಕೊಟ್ಟವರನ್ನು ಬಂಧಿಸದಿದ್ದರೆ ಬೆಳಗಾವಿ ಚಲೋ ಹೋರಾಟ ಮಾಡೋಣ ಎಂದು ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ವಿಪಕ್ಷ ನಾಯಕರು ತಿಳಿಸಿದ್ದಾರೆ.
- ಸಿ.ಟಿ.ರವಿ, ಮೇಲ್ಮನೆ ಸದಸ್ಯ
ಚಿಕ್ಕಮಗಳೂರು : ಬೆಳಗಾವಿಯಲ್ಲಿ ನಡೆದ ಅಧಿವೇಶನದ ವೇಳೆ ತಮ್ಮನ್ನು ಬಂಧಿಸಿದ ಸಂಬಂಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಹಕ್ಕುಚ್ಯುತಿ ಮಂಡಿಸುತ್ತೇವೆ ಹಾಗೂ ಮಾನವ ಹಕ್ಕು ಆಯೋಗಕ್ಕೂ ದೂರು ನೀಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಕೊಲೆ ಮಾಡಲು ಯಾರು ಪ್ರಯತ್ನ ಮಾಡಿದರು ಎಂಬ ಬಗ್ಗೆ ದೂರು ನೀಡಿದ್ದೇವೆ. ಆದರೆ ಇನ್ನೂ ಎಫ್ಐಆರ್ ದಾಖಲಾಗಿಲ್ಲ. ಕೊಲೆ ಮಾಡಲು ಯತ್ನಿಸಿದವರು ಹಾಗೂ ಅವರಿಗೆ ಕುಮ್ಮಕ್ಕು ಕೊಟ್ಟವರನ್ನು ಬಂಧಿಸಿ ಕ್ರಮ ಕೈಗೊಳ್ಳದಿದ್ದರೆ ಬೆಳಗಾವಿ ಚಲೋ ಹೋರಾಟ ಮಾಡೋಣ ಎಂದು ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ವಿಪಕ್ಷ ನಾಯಕರು ತಿಳಿಸಿದ್ದಾರೆ ಎಂದರು.
ಬೆಳಗಾವಿಯಿಂದ ನೀವು ಬದುಕಿ ಬಂದಿದ್ದೇ ಹೆಚ್ಚು ಎಂದು ಕೆಲವರು ಹೇಳಿದರು. ಯಾರು ಏನು ಮಾಡುತ್ತಾರೆ ನೋಡೋಣ, ಬೆಳಗಾವಿಗೆ ಬನ್ನಿ ಎಂದು ಬೆಳಗಾವಿ ಜನ ಹೇಳುತ್ತಿದ್ದಾರೆ ಎಂದೂ ಸಿ.ಟಿ.ರವಿ ತಿಳಿಸಿದರು.
ಮುಖ್ಯಮಂತ್ರಿ ಮತ್ತು ಸರ್ಕಾರಕ್ಕೆ ಸಂವಿಧಾನದ ಮೇಲೆ ನಂಬಿಕೆ ಇದ್ದಂತೆ ಕಾಣುತ್ತಿಲ್ಲ. ನಾನು ಕೊಟ್ಟಿರುವ ದೂರನ್ನು ಇದುವರೆಗೆ ಏಕೆ ದಾಖಲಿಸಿಲ್ಲ ಎಂಬುದನ್ನು ಮುಖ್ಯಮಂತ್ರಿಗಳು ತಿಳಿಸಬೇಕು. ಕಾನೂನಿನಲ್ಲಿ ನ್ಯಾಯ ಪಡೆಯುವ ಅಧಿಕಾರ ನನಗಿಲ್ಲವೇ ಎಂದು ಪ್ರಶ್ನಿಸಿದರು.ವಿ
ಧಾನಪರಿಷತ್‌ನಲ್ಲಿ ಆದ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಒತ್ತಾಯಿಸಿರುವುದು ಸತ್ಯಾಸತ್ಯತೆ ಹೊರಬರಲಿ ಎಂಬ ಕಾರಣಕ್ಕೆ. ಬೆಳಗಾವಿಯಿಂದ ನನ್ನನ್ನು ನಿಗೂಢ ಸ್ಥಳಗಳಿಗೆ ಕರೆದುಕೊಂಡು ಹೋಗಿದ್ದು ಅಪರಿಚಿತರಲ್ಲ. ಬದಲಾಗಿ ಕರ್ನಾಟಕ ರಾಜ್ಯ ಪೊಲೀಸರು. ಪೊಲೀಸರಿಗೆ ಆಗಾಗ ನಿರ್ದೇಶನ ಬರುತ್ತಿತ್ತು. ಹೀಗಾಗಿಯೇ ಪೊಲೀಸರ ಕಾಲ್ ರೆಕಾರ್ಡ್ ಚೆಕ್ ಮಾಡಿ ಎಂದು ಒತ್ತಾಯಿದ್ದೇನೆ ಎಂದರು.
ಮಾಧ್ಯಮ ಸ್ನೇಹಿತರು ಇಲ್ಲದೆ ಇದ್ದಿದ್ದಲ್ಲಿ ಬೇರೆಯದೇ ಹುನ್ನಾರ ಮಾಡುತ್ತಿದ್ದರು. ಪ್ರಕರಣದಲ್ಲಿ ಮುಖ್ಯಮಂತ್ರಿ ಪಾತ್ರ ಇಲ್ಲ ಎಂದು ಮೊದಲು ಭಾವಿಸಿದ್ದೆ. ಆದರೆ ಇದೀಗ ಎಲ್ಲರೂ ಸೇರಿಯೇ ಷಡ್ಯಂತ್ರ ಮಾಡಿದ್ದಾರೆ ಎಂಬ ಅನುಮಾನ ಮೂಡಿದೆ ಎಂದು ಆಪಾದಿಸಿದರು.