ಸುಮಲತಾರಿಗೆ ಟಿಕೆಟ್ ಕೇಳಿದ್ದರಲ್ಲಿ ತಪ್ಪೇನು: ಮಾಜಿ ಸಚಿವ ಕೆ.ಸಿ. ನಾರಾಯಣಗೌಡ

| Published : Feb 05 2024, 01:48 AM IST

ಸುಮಲತಾರಿಗೆ ಟಿಕೆಟ್ ಕೇಳಿದ್ದರಲ್ಲಿ ತಪ್ಪೇನು: ಮಾಜಿ ಸಚಿವ ಕೆ.ಸಿ. ನಾರಾಯಣಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಅವರು ನಮ್ಮ ಕ್ಷೇತ್ರಕ್ಕೆ ಬಂದು ನನ್ನ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದಾರೆ. ಅವರಿಗೆ ಟಿಕೆಟ್ ನೀಡಿದರೆ ತಪ್ಪೇನು ಎಂದು ಕೇಳಿದ್ದೇನೆ. ಮಂಡ್ಯ ಬಿಜೆಪಿ ಟಿಕೆಟ್ ಅವರಿಗೇ ಕೊಡಬೇಕು. ಈ ಬಗ್ಗೆ ಹೈಕಮಾಂಡ್ ಅವರಿಗೂ ಹೇಳಿದ್ದೇನೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅವರಿಗೆ ಟಿಕೆಟ್ ನೀಡುವಂತೆ ನಾನು ಕೇಳಿರುವುದರಲ್ಲಿ ತಪ್ಪೇನು ಕಾಣಿಸುತ್ತಿಲ್ಲ ಎಂದು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಅವರು ಸಮರ್ಥಿಸಿಕೊಂಡರು.

ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್‍ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಅವರು ನಮ್ಮ ಕ್ಷೇತ್ರಕ್ಕೆ ಬಂದು ನನ್ನ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದಾರೆ. ಅವರಿಗೆ ಟಿಕೆಟ್ ನೀಡಿದರೆ ತಪ್ಪೇನು ಎಂದು ಕೇಳಿದ್ದೇನೆ. ಮಂಡ್ಯ ಬಿಜೆಪಿ ಟಿಕೆಟ್ ಅವರಿಗೇ ಕೊಡಬೇಕು. ಈ ಬಗ್ಗೆ ಹೈಕಮಾಂಡ್ ಅವರಿಗೂ ಹೇಳಿದ್ದೇನೆ ಎಂದರು.

ಮಂಡ್ಯದಲ್ಲಿ ಬಿಜೆಪಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟು ಜೆಡಿಎಸ್ ಬೇರೆ ಕ್ಷೇತ್ರಗಳಿಗೆ ಹೋಗಲಿ, ನಾನು ಬಿಜೆಪಿ ಬಿಟ್ಟುಹೋಗುವ ಮಾತೇ ಇಲ್ಲ. ನನ್ನ ತೀರ್ಮಾನ ಏನೇ ಇದ್ದರೂ ಹೇಳುತ್ತೇನೆಂದು ದೃಢವಾಗಿ ಹೇಳಿದರು.

ಮಾಜಿ ಸಚಿವ ರಾಮ್‌ದಾಸ್ ಮಾತನಾಡಿ, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅವರು ದೇಶ ವಿಭಜನೆ ಮಾತನಾಡಿದ್ದಾರೆ. ಇದು ನಾಚಿಗೇಡಿನ ವಿಚಾರವಾಗಿದ್ದು, ಇದನ್ನು ಖಂಡಿಸಬೇಕು ಎಂದರು.

ಯುಪಿಎ ಸರ್ಕಾರ ಇದ್ದಾಗ ರಾಜ್ಯಕ್ಕೆ ಎಷ್ಟು ಹಣವನ್ನು ಕೊಟ್ಟಿದ್ದರು ಎಂಬುದನ್ನು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯೇ ಹೇಳಬೇಕು. ನಿಮಗೆ ಮಾತನಾಡಲು ಬೇರೆ ವಿಚಾರವೇ ಇಲ್ಲವೇ ಎಂದು ಛೇಡಿಸಿದರು.

ಈ ಬಾರಿಯ ಚುನಾವಣೆ ಭಾರತ ದೇಶ ಉಳಿಸುವ ಚುನಾವಣೆಯೇ ಹೊರತು ಯಾವುದೇ ಜಾತಿ, ಧರ್ಮದ ಮೇಲೆ ನಡೆಯಲ್ಲ. ತಾಕತ್ತಿದ್ದರೆ ಈ ಹಿಂದೆ ಯಾವ ಯೋಜನೆಗಳನ್ನು ಜಾರಿ ಮಾಡಿದ್ದೀರಿ ಹೇಳಿ ಎಂದು ಕಾಂಗ್ರೆಸ್‌ಗೆ ಸವಾಲು ಹಾಕಿದರು.