ನಮ್ಮ ಹಕ್ಕಿನ ತೆರಿಗೆ ನಾವು ಕೇಳಿದರೆ ತಪ್ಪೇನು?: ಸಿದ್ದು

| Published : Feb 25 2024, 01:45 AM IST / Updated: Feb 25 2024, 12:00 PM IST

ಸಾರಾಂಶ

ನಾವು ಕೇಂದ್ರಕ್ಕೆ ತೆರಿಗೆ ಕಟ್ಟುತ್ತೇವೆ. ಅನುದಾನ ಕೊಡಿ ಎನ್ನುತ್ತೇವೆ. ಅದು ನಮ್ಮ ಹಕ್ಕು. ನಮ್ಮ ತೆರಿಗೆ ಹಕ್ಕನ್ನು ಕೇಳಿದ್ದರಲ್ಲಿ ತಪ್ಪೇನು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ/ನವಲಗುಂದ

ನಾವು ಕೇಂದ್ರಕ್ಕೆ ತೆರಿಗೆ ಕಟ್ಟುತ್ತೇವೆ. ಅನುದಾನ ಕೊಡಿ ಎನ್ನುತ್ತೇವೆ. ಅದು ನಮ್ಮ ಹಕ್ಕು. ನಮ್ಮ ತೆರಿಗೆ ಹಕ್ಕನ್ನು ಕೇಳಿದ್ದರಲ್ಲಿ ತಪ್ಪೇನು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಸಂಸದ ಅನಂತ ಕುಮಾರ ಹೆಗಡೆಯವರ ಆರೋಪ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಕರ್ನಾಟಕಕ್ಕೆ ನ್ಯಾಯಯುತವಾದ ಹಕ್ಕನ್ನು ನೀಡಿ ಎಂದು ಕೇಳಿದ್ದರಲ್ಲಿ ತಪ್ಪೇನು? ಕೇಂದ್ರ ಸರ್ಕಾರದವರು ದುಡ್ಡು ಕೊಡುತ್ತೀವಿ ಎಂದರೂ ಅಕ್ಕಿ ಕೊಡಲಿಲ್ಲ. 

ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡುತ್ತೇವೆ. ಅದಕ್ಕಾಗಿ 5,300 ಕೋಟಿ ರು. ಕೊಡುತ್ತೇವೆ ಎಂದು ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ್ದರು. 

ಈವತ್ತಿನವರೆಗೂ ಒಂದೇ ಒಂದು ರುಪಾಯಿಯನ್ನೂ ಕೊಡದೆ ರಾಜ್ಯಕ್ಕೆ ವಂಚಿಸಿದರು. 11,495 ಕೋಟಿ ವಿಶೇಷ ಅನುದಾನ ಕೊಡೊದಾಗಿ ಹೇಳಿ ಕಡೆಗೆ ತಿರಸ್ಕಾರ ಮಾಡಿದರು. ಇದನ್ನು ಕೇಳಿದರೆ ರಾಜ್ಯ ಬಿಜೆಪಿ ನಾಯಕರು ಪ್ರತಿಭಟನೆ ಮಾಡುತ್ತಾರೆ. 

ಇವರಿಗೆ ಮಾನ ಮರ್ಯಾದೆ ಇದೆಯಾ? ಎಂದು ಪ್ರಶ್ನಿಸಿದರು.ಒಂದು ಕಡೆ ನಮ್ಮ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಬಿಜೆಪಿಯವರು ನಿರಂತರವಾಗಿ ಅವಮಾನಿಸುತ್ತಿದ್ದಾರೆ. 

ಮತ್ತೊಂದು ಕಡೆ ನಮ್ಮ ಗ್ಯಾರಂಟಿಗಳನ್ನು ಕದ್ದು ಅದಕ್ಕೆ ಮೋದಿ ಗ್ಯಾರಂಟಿ ಎಂದು ಹೆಸರು ಬದಲಾಯಿಸಿದ್ದಾರೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಇಂದು ಅರಸೀಕೆರೆ ತಾಲೂಕಿನಲ್ಲಿ 152 ಕೋಟಿ ರುಪಾಯಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ್ದೇನೆ. 

ಅಂದರೆ, ಸರ್ಕಾರ ಆರ್ಥಿಕವಾಗಿ ಸುಭದ್ರವಾಗಿದೆ ಎಂದರ್ಥವಲ್ಲವೇ? ಎಂದು ಪ್ರಶ್ನಿಸಿದರು. ಸಿದ್ದು ಸರ್ಕಾರದಲ್ಲಿ ಸರ್ಕಾರಿ ನೌಕರರಿಗೆ ಸಂಬಳ ನೀಡಲೂ ಹಣವಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಯಾರಾದರೂ ಸರ್ಕಾರಿ ನೌಕರರು ಸಂಬಳ ಬಂದಿಲ್ಲ ಎಂದು ನಿಮಗೆ ಹೇಳಿದ್ದಾರಾ ಎಂದು ಮರು ಪ್ರಶ್ನಿಸಿದರು.