ನೀರು ಬಿಟ್ಟಾಗ ಎಲ್ಹೋಗಿತ್ತು ನಿಮ್ಮ ಗಂಡಸ್ತನ: ಬಿ.ವೈ.ವಿಜಯೇಂದ್ರ

| Published : Apr 17 2024, 01:19 AM IST

ನೀರು ಬಿಟ್ಟಾಗ ಎಲ್ಹೋಗಿತ್ತು ನಿಮ್ಮ ಗಂಡಸ್ತನ: ಬಿ.ವೈ.ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

‘ನನ್ನ ತೆರಿಗೆ ನನ್ನ ಹಕ್ಕು’ ಎನ್ನುತ್ತಿದ್ದ ಲೋಕಸಭೆ ಚುನಾವಣೆ ಬಳಿಕ ಡಿ.ಕೆ.ಶಿವಕುಮಾರ್ ‘ಸಿಎಂ ಸೀಟ್ ನನ್ನ ಹಕ್ಕು’ ಎನ್ನಲು ರೆಡಿಯಾಗಿದ್ದಾರೆ. ಕುಮಾರಸ್ವಾಮಿ ಗೆಲುವು ತಡೆಯುವ ಶಕ್ತಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ಗೆ ಇಲ್ಲ, ಅವರು ಗೆದ್ದು ಕೇಂದ್ರ ಸಚಿವರಾಗಿ ಮೋದಿ ಕೈ ಬಲ ಪಡಿಸುತ್ತಾರೆ.

ಕನ್ನಡ ಪ್ರಭ ವಾರ್ತೆ ಮಳವಳ್ಳಿ

ಸುಪ್ರೀಂ ಕೋರ್ಟ್ ನೆಪ ಹೇಳಿ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟರಲ್ಲ ಆಗ ಎಲ್ಹೋಗಿತ್ತು ನಿಮ್ಮ ತಾಕತ್ತು. ನೀರು ಬಿಟ್ಟು ರೈತರಿಗೆ ಅನ್ಯಾಯ ಮಾಡಿದಿರಲ್ಲಾ ಅವಾಗ ಎಲ್ಹೋಗಿತ್ತು ನಿಮ್ಮ ಗಂಡಸ್ತನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾರ್ಮಿಕವಾಗಿ ಪ್ರಶ್ನಿಸಿದರು.

ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಬಡವರಿಗೆ ಅಕ್ಕಿ ಕೊಡುತ್ತಿರುವುದು ಪ್ರಧಾನಿ ಮೋದಿಯೇ ಹೊರತು ಕಾಂಗ್ರೆಸ್ ಸರ್ಕಾರವಲ್ಲ, ಮದ್ಯದ ಬೆಲೆ ಏರಿಸಿ ಗಂಡಸರ ಜೇಬಿಗೆ ಕತ್ತರಿ ಹಾಕಿ ಹೆಂಗಸರ ಅಕೌಂಟಿಗೆ ಹಾಕುತ್ತಿದ್ದಾರೆ. ಬಸ್ ದರ, ವಿದ್ಯುತ್ ದರ ಏರಿಸಿ ಒಂದು ಕೈಲಿ ಕಿತ್ತುಕೊಂಡು ಇನ್ನೊಂದು ಕೈಲಿ ಕೊಡುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಮುಗ್ದ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುವುದರ ಮೂಲಕ ಗ್ಯಾರಂಟಿ.. ಗ್ಯಾರಂಟಿ.. ಎಂದು ರಾಜ್ಯದ ಜನರಿಗೆ ಮಕ್ಮಲ್ ಟೋಪಿ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.

ರೈತರಿಗೆ ಅನ್ಯಾಯ ಮಾಡುವ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರವಾಗಿದೆ. ಬಂದು ೧೦ ತಿಂಗಳು ಕಳೆದರೂ ರೈತರ ಸಂಕಷ್ಟ ಕೇಳುತ್ತಿಲ್ಲ. ದೆಹಲಿಯಲ್ಲಿ ‘ನಮ್ಮ ತೆರಿಗೆ ನಮ್ಮ ಹಕ್ಕು’ ಎಂಬ ಹೋರಾಟದ ನಾಟಕವಾಡುತ್ತಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಲೋಕಸಭಾ ಚುನಾವಣೆ ಬಳಿಕ ಸಿಎಂ ಸ್ಥಾನಕ್ಕೇರಲು ಗುದ್ದಲಿ ಪೂಜೆ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದರು.

ಅಧಿಕಾರ, ಹಣ ಬಲದ ಅಮಲಿನಲ್ಲಿರುವ ಕಾಂಗ್ರೆಸ್‌ಗೆ ಇಲ್ಲಿ ಸೇರಿರುವ ಜನಸಮೂಹ ಇದು ತಕ್ಕ ಉತ್ತರ ನೀಡಿದೆ. ದೇಶದ ಜನರು ಮೋದಿ ಪರವಾಗಿದ್ದಾರೆ. ಜನಬಲದಿಂದ ಕುಮಾರಸ್ವಾಮಿ ಗೆಲುತ್ತಾರೆ. ದೇಶದ ಭವಿಷ್ಯದ ದೃಷ್ಟಿಯಿಂದ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ದೇವೇಗೌಡರು ಹೇಳಿದ್ದಾರೆ. ಆ ಸಂಕಲ್ಪದಿಂದಲೇ ಬಿಜೆಪಿ ಜೊತೆ ಜೆಡಿಎಸ್ ಕೈಜೋಡಿಸಿದೆ. ‘ನನ್ನ ತೆರಿಗೆ ನನ್ನ ಹಕ್ಕು’ ಎನ್ನುತ್ತಿದ್ದ ಲೋಕಸಭೆ ಚುನಾವಣೆ ಬಳಿಕ ಡಿ.ಕೆ.ಶಿವಕುಮಾರ್ ‘ಸಿಎಂ ಸೀಟ್ ನನ್ನ ಹಕ್ಕು’ ಎನ್ನಲು ರೆಡಿಯಾಗಿದ್ದಾರೆ. ಕುಮಾರಸ್ವಾಮಿ ಗೆಲುವು ತಡೆಯುವ ಶಕ್ತಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ಗೆ ಇಲ್ಲ, ಅವರು ಗೆದ್ದು ಕೇಂದ್ರ ಸಚಿವರಾಗಿ ಮೋದಿ ಕೈ ಬಲ ಪಡಿಸುತ್ತಾರೆ ಎಂದರು.

ಬಡವರು, ಬಾಬಾ ಸಾಹೇಬರ ಬಗ್ಗೆ ಕಾಳಜಿ ಇಲ್ಲದ ಕಾಂಗ್ರೆಸ್ ಸರ್ಕಾರ ಸಂವಿಧಾನದ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ಜನರಿಂದ ಜನರಿಗಾಗಿ ಜನರಿಗೋಸ್ಕರ ಪ್ರಾಣ ಕೊಡುವ ಸಂಸದರನ್ನು ಮಂಡ್ಯ ಜಿಲ್ಲೆಯಲ್ಲಿ ಗೆಲ್ಲಿಸಬೇಕು, ಕುಮಾರಸ್ವಾಮಿ ಮಾತ್ರ ಮಂಡ್ಯ ಜಿಲ್ಲೆಗೆ ನ್ಯಾಯ ಕೊಡುವ ಕೆಲಸ ಮಾಡಲು ಸಾಧ್ಯ. ಶ್ರೀಮಂತರು, ಹೊಟ್ಟೆ ತುಂಬಿದವರು ಗೆದ್ದರೆ ಮಂಡ್ಯಕ್ಕೆ ಪ್ರಯೋಜನವಿಲ್ಲ. ೩ ಲಕ್ಷ ಮತಗಳ ಅಂತರದಿಂದ ಕುಮಾರಸ್ವಾಮಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಇಲ್ಲಿನ ಶಾಸಕ ಕುಮಾರಣ್ಣನ ಮೇಲೆ ತೊಡೆ ತಟ್ಟುತ್ತಿದ್ದಾರೆ. ೪೬ ಸಾವಿರ ಲೀಡ್‌ನಲ್ಲಿ ಗೆದ್ದಿದ್ದೀನಿ ಎಂದು ಬೀಗುತ್ತಿದ್ದಾರೆ. ನರೇಂದ್ರಸ್ವಾಮಿ ಯಡಿಯೂರಪ್ಪಗೆ ಮೋಸ ಮಾಡಿ, ಅಸೆಂಬ್ಲಿಯಲ್ಲಿ ಅವಮಾನ ಮಾಡಿದ್ದಾರೆ, ಯಡಿಯೂರಪ್ಪರನ್ನ ಹೀಯಾಳಿಸಿ ಶಾಸಕ ಸ್ಥಾನದಿಂದ ಅನರ್ಹ ಆಗಿದ್ದ ಬಳಿಕ ಸುಪ್ರೀಂ ನಲ್ಲಿ ಸದಸ್ಯತ್ವ ಪಡೆದುಕೊಂಡಿದ್ದು ಯಾರಿಂದ ಅಂತ ತಿಳಿದುಕೊಳ್ಳಿ ಮಿಸ್ಟರ್ ಎಂಎಲ್‌ಎ ಎಂದು ಟೀಕಿಸಿದರು.

ರೈತರ ಸಾಲಮನ್ನಾ ಮಾಡಿದ್ದು ಕುಮಾರಣ್ಣ, ಇವತ್ತು ಕಾಂಗ್ರೆಸ್ ಸರ್ಕಾರ ದಲಿತರ ಹಣವನ್ನ ವರ್ಗಾವಣೆಮಾಡಿಕೊಂಡು ಮೋಸ ಮಾಡಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಚಿತ್ರಹಿಂಸೆ ಕೊಟ್ಟಿದ್ದು ಕಾಂಗ್ರೆಸ್ ಪಕ್ಷವಾಗಿದೆ. ಸಂವಿಧಾನ ಬದಲಾವಣೆ ಮಾಡುವ ಪ್ರಶ್ನೆ ಇಲ್ಲ ಎಂದು ನರೇಂದ್ರ ಮೋದಿಯೇ ಹೇಳಿದ್ದಾರೆ, ಹೆಣ್ಣು ಮಕ್ಕಳಿಗೆ ಮೋಸ ಮಾಡಿದ್ದು ಕಾಂಗ್ರೆಸ್, ಇವತ್ತು ಕುಮಾರಸ್ವಾಮಿ ಹೇಳಿಕೆ ಇಟ್ಟುಕೊಂಡು ಬೀದಿಯಲ್ಲಿ ಅಪಪ್ರಚಾರ ಮಾಡ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಸೈಕಲ್ ಕೊಟ್ಟಿದ್ದು ಯಾರು, ಹೆಣ್ಣುಮಗುವಿಗೆ ಭಾಗ್ಯ ಲಕ್ಷ್ಮಿ ಯೋಜನೆ ಕೊಟ್ಟಿದ್ದು ಕುಮಾರಸ್ವಾಮಿ, ಯಡಿಯೂರಪ್ಪ ಸರ್ಕಾರ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ರವಿಕುಮಾರ್, ಮಾಜಿ ಸಚಿವರಾದ ಸಿಎಸ್ ಪುಟ್ಟರಾಜು, ನಾರಯಣ್‌ಗೌಡ, ವಿಧಾನ ಪರಿಷತ್‌ ಸದಸ್ಯ ಶ್ರೀಕಂಠೇಗೌಡ, ಮುಖಂಡರಾದ ಶ್ರೀಧರ್, ವೀರೇಗೌಡ, ರೂಪ, ಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದೇಶ್, ಡಿ.ರಮೇಶ್, ಅಶೋಕ್‌ ಜಯರಾಮು, ಯಮದೂರು ಸಿದ್ದರಾಜು ಸೇರಿದಂತೆ ಇತರರು ಇದ್ದರು.