ಸಾರಾಂಶ
ಡಾ। ಬಿ.ಆರ್.ಅಂಬೇಡ್ಕರ್ ಅವರು 1952ರ ಸಂಸತ್ ಚುನಾವಣೆಯಲ್ಲಿ ಸೋಲನುಭವಿಸಲು ಯಾರು ಕಾರಣ ಎನ್ನುವ ಬಗ್ಗೆ ಶುಕ್ರವಾರ ವಿಧಾನ ಪರಿಷತ್‌ನಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಪರಸ್ಪರ ಆರೋಪ, ಪ್ರತ್ಯಾರೋಪ, ಘೋಷಣೆ, ಪತ್ರ ಪ್ರದರ್ಶನ, ಗದ್ದಲ ಕೋಲಾಹಲದ ಜೊತೆಗೆ ರಾಜೀನಾಮೆ ಸವಾಲಿಗೂ ಕಾರಣವಾಯಿತು.
ವಿಧಾನ ಪರಿಷತ್ತು : ಡಾ। ಬಿ.ಆರ್.ಅಂಬೇಡ್ಕರ್ ಅವರು 1952ರ ಸಂಸತ್ ಚುನಾವಣೆಯಲ್ಲಿ ಸೋಲನುಭವಿಸಲು ಯಾರು ಕಾರಣ ಎನ್ನುವ ಬಗ್ಗೆ ಶುಕ್ರವಾರ ವಿಧಾನ ಪರಿಷತ್‌ನಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಪರಸ್ಪರ ಆರೋಪ, ಪ್ರತ್ಯಾರೋಪ, ಘೋಷಣೆ, ಪತ್ರ ಪ್ರದರ್ಶನ, ಗದ್ದಲ ಕೋಲಾಹಲದ ಜೊತೆಗೆ ರಾಜೀನಾಮೆ ಸವಾಲಿಗೂ ಕಾರಣವಾಯಿತು.
ಬಜೆಟ್ ಮೇಲಿನ ಚರ್ಚೆ ವೇಳೆ ಕಾಂಗ್ರೆಸ್ ಸದಸ್ಯ ಸುಧಾಮ ದಾಸ್, ಸಂವಿಧಾನ ಬದಲಾವಣೆ, ಮೀಸಲಾತಿ ರದ್ದು ವಿಚಾರವಾಗಿ ಬಿಜೆಪಿ ವಿರುದ್ಧ ಮಾಡಿದ ಟೀಕೆಗೆ ಬಿಜೆಪಿಯ ಹೇಮಲತಾ ನಾಯಕ್ ಆಕ್ಷೇಪ ವ್ಯಕ್ತಪಡಿಸಿದಾಗ ಶುರುವಾದ ವಾಗ್ವಾದ, ಅಂಬೇಡ್ಕರ್ ಅವರ ಚುನಾವಣಾ ಸೋಲಿಗೆ ಕಾರಣ ಯಾರು ಎನ್ನುವ ವಿಚಾರಕ್ಕೆ ತಿರುಗಿತು.ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸಂವಿಧಾನವನ್ನು ನಾವು ಮುಟ್ಟೇ ಇಲ್ಲ, ಅದಕ್ಕೆ ದ್ರೋಹ ಬಗೆದಿದ್ದೇ ಕಾಂಗ್ರೆಸ್ ಎಂದರು.
ಪ್ರತಿಪಕ್ಷದ ಮುಖ್ಯಸಚೇತಕ ರವಿಕುಮಾರ್, ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಸಂಸತ್ ಸದಸ್ಯರಾಗಿ ಮಾಡಲಿಲ್ಲ ಎಂದು ದೂರಿದರು. ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್, ಅಂಬೇಡ್ಕರ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದು ಯಾರು ಎಂದು ಪ್ರಶ್ನಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಅಂಬೇಡ್ಕರ್ ಅವರು ‘ನನ್ನ ಸೋಲಿಗೆ ದಾಂಗೆ ಮತ್ತು ಸಾರ್ವಕರ್ ಕಾರಣ’ ಎಂದು ತಮ್ಮ ಸ್ನೇಹಿತನಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಇದಕ್ಕಿಂತ ಸಾಕ್ಷಿ ಬೇಕಾ? ಎಂದು ಪತ್ರವನ್ನು ಸದನದಲ್ಲಿ ಪ್ರದರ್ಶಿಸಿದರು.
ಆಗ ಛಲವಾದಿ ನಾರಾಯಣಸ್ವಾಮಿ ಅವರು, ಇದು ಅಪ್ಪಟ ಸುಳ್ಳು. ಕಮಲಕಾಂತ್ ಅವರಿಗೆ ಬರೆದಿರುವ ಪತ್ರ ನಮ್ಮ ಬಳಿಯೂ ಇದೆ ಎಂದು ಓದಿದ ಅವರು, ನನ್ನ ಸೋಲಿಗೆ ಸಾವರ್ಕರ್ ಕಾರಣ ಎಂದು ಬೇರೊಬ್ಬರು ತಮ್ಮ ಬಳಿ ಹೇಳಿಕೊಂಡಿರುವುದಾಗಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆಯೇ ಹೊರತು ಆ ಮಾತನ್ನು ಅವರೇ ಹೇಳಿಲ್ಲ. ಅವರೇ ಹೇಳಿರುವುದಾಗಿ ಸಾಬೀತುಪಡಿಸಿದರೆ ರಾಜೀನಾಮೆ ನೀಡುವ ಸವಾಲು ಹಾಕಿದರು.
ಇದರ ನಡುವೆ, ಬಿಜೆಪಿಯ ಸಿ.ಟಿ.ರವಿ, ಅಂಬೇಡ್ಕರ್ ಅವರಿಗೆ ಸೋಲಾದಾಗ ತಮ್ಮ ಗೆಳತಿ ಲೇಡಿ ಮೌಂಟ್ ಬ್ಯಾಟನ್‌ಗೆ ಪತ್ರಬರೆದು ಸೋಲನ್ನು ವಿಜೃಂಭಿಸಿದವರು ಯಾರು? ಎಂದು ನೆಹರೂ ಅವರ ಪತ್ರವೊಂದರ ದರ್ಶನ ಮಾಡಿದರು. ಮಧ್ಯಪ್ರವೇಶಿಸಿದ ಪ್ರಿಯಾಂಕ್ ಖರ್ಗೆ, ಅಂಬೇಡ್ಕರ್ ಅವರು ತಮ್ಮ ಸೋಲಿಗೆ ಸಾವರ್ಕರ್ ಕಾರಣ ಎಂದು ಉಲ್ಲೇಖಿಸಿರುವ ಪತ್ರವನ್ನು ಸಭಾಪತಿ ಅವರು ಅವಕಾಶ ಕೊಟ್ಟರೆ ಓದಿ ಸ್ಪಷ್ಟಪಡಿಸುತ್ತೇನೆ ಎಂದರು.
ಆದರೆ ಸಭಾಪತಿ ಅವರು, ಹೀಗೇ ಆದರೆ ಸದನ ಹೇಗೆ ನಡೆಸೋದು? ಇಂದು ಅಧಿವೇಶನದ ಕೊನೆಯ ದಿನ, ಬಜೆಟ್ ಮೇಲೆ ಸಾಕಷ್ಟು ಜನ ಚರ್ಚೆ ಮಾಡಬೇಕಿದೆ. ಮುಖ್ಯಮಂತ್ರಿಯವರು ಉತ್ತರ ಕೊಡಬೇಕು. ಹಾಗಾಗಿ ಇಲ್ಲಿಗೆ ಮುಗಿಸಿ ಬಜೆಟ್ ಮೇಲಿನ ಚರ್ಚೆ ಮುಂದುವರೆಯಲಿ ಎಂದರು.
ಈ ವೇಳೆ, ಕಾಂಗ್ರೆಸ್ ಸದಸ್ಯ ಜೈ ಭೀಮ್ ಘೋಷಣೆ ಕೂಗಿದರೆ, ಪ್ರತಿಯಾಗಿ ಬಿಜೆಪಿ ಸದಸ್ಯರು ಕೂಡ ಜೈ ಭೀಮ್, ಜೈ ಅಂಬೇಡ್ಕರ್ ಘೋಷಣೆ ಕೂಗಿದರು. ಇದರ ನಡುವೆ ಪುಟ್ಟಣ್ಣ ಅವರಿಂದ ಅಸಂವಿಧಾನಿಕ ಪದ ಬಳಕೆ ವಿಚಾರವಾಗಿ ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರಿಂದ ಸದನವನ್ನು ಮುಂದೂಡಲಾಯಿತು.