.ಹೊಳೆನರಸೀಪುರ ಪುರಸಭೆ ಅಧ್ಯಕ್ಷ ಶ್ರೀಧರ್‌ ದಿಢೀರ್‌ ರಾಜೀನಾಮೆ

| Published : Feb 27 2025, 12:31 AM IST

ಸಾರಾಂಶ

ಹೊಳೆನರಸೀಪುರ ಪಟ್ಟಣದ ಪುರಸಭೆಗೆ ಒಟ್ಟು ೩ ಅವಧಿಗೆ ಸದಸ್ಯರಾಗಿದ್ದ ಕೆ.ಶ್ರೀಧರ್, ೨೦೨೪ರ ಆಗಸ್ಟ್ ೧೯ರಂದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ ಅವರು ದಿಢೀರನೇ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಹಾಗೂ ಶಾಸಕ ಎಚ್.ಡಿ.ರೇವಣ್ಣ ರಾಜೀನಾಮೆಯನ್ನು ದೃಢಪಡಿಸಿದ್ದಾರೆ. ಪುರಸಭೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಸಾಕಷ್ಟು ಸದಸ್ಯರು ಇದ್ದಾರೆ. ಆದರೆ ಶಾಸಕ ಎಚ್.ಡಿ.ರೇವಣ್ಣ ಅವರ ಆಶೀರ್ವಾದ ಪಡೆದ ಸದಸ್ಯ ಅಧ್ಯಕ್ಷ ಗದ್ದುಗೆ ಪಡೆಯುವುದು ಖಚಿತ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಪುರಸಭೆಗೆ ಒಟ್ಟು ೩ ಅವಧಿಗೆ ಸದಸ್ಯರಾಗಿದ್ದ ಕೆ.ಶ್ರೀಧರ್, ೨೦೨೪ರ ಆಗಸ್ಟ್ ೧೯ರಂದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ ಅವರು ದಿಢೀರನೇ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಹಾಗೂ ಶಾಸಕ ಎಚ್.ಡಿ.ರೇವಣ್ಣ ರಾಜೀನಾಮೆಯನ್ನು ದೃಢಪಡಿಸಿದ್ದಾರೆ. ೨೦೧೮ರಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ ವಿಜೇತರಾದ ಸದಸ್ಯರಿಗೆ ೨೦೨೩ರ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಮೊದಲ ಅವಧಿಯ ಕಾಲಮಿತಿ ಪೂರ್ಣಗೊಂಡ ನಂತರ ಒಂದು ವರ್ಷದಿಂದ ನಾಮಕಾವಸ್ಥೆ ಸದಸ್ಯರಂತಿದ್ದವರು, ಕಳೆದ ಆಗಸ್ಟ್ ೫ರಂದು ೨ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪಟ್ಟಿ ಪ್ರಕಟಗೊಂಡು, ಸದಸ್ಯರಲ್ಲಿ ನವ ಚೈತನ್ಯವನ್ನು ಮೂಡಿಸಿತ್ತು. ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಮಹಿಳೆಗೆ ಮೀಸಲಾತಿ ನಿಗಧಿಯಾಗಿದ್ದರಿಂದ ಕೆ.ಶ್ರೀಧರ್ ಅಧ್ಯಕ್ಷರಾಗಿ, ಸಾವಿತ್ರಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ ಕೆ.ಶ್ರೀಧರ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಪುರಸಭೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಸಾಕಷ್ಟು ಸದಸ್ಯರು ಇದ್ದಾರೆ. ಆದರೆ ಶಾಸಕ ಎಚ್.ಡಿ.ರೇವಣ್ಣ ಅವರ ಆಶೀರ್ವಾದ ಪಡೆದ ಸದಸ್ಯ ಅಧ್ಯಕ್ಷ ಗದ್ದುಗೆ ಪಡೆಯುವುದು ಖಚಿತ.

೧೯೭೦ರ ದಶಕದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆತ್ಮೀಯ ಒಡನಾಡಿಗಳಲ್ಲಿ ದಿ. ಎಚ್.ಸಿ.ಸಿಂಗ್ರೀಗೌಡ ಹಾಗೂ ದಿ. ಎಚ್.ಸಿ.ಕುಂಟಪ್ಪನವರು ಇದ್ದರು. ಜತೆಗೆ ೧೯೮೦ರ ದಶಕದಲ್ಲಿ ದಿ. ಎಚ್.ಸಿ.ಸಿಂಗ್ರೀಗೌಡ ಪುರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಹಾಗೂ ದಿ. ಎಚ್.ಸಿ.ಕುಂಟಪ್ಪನವರು ಕೆಎಸ್‌ಆರ್‌ಟಿಸಿ ಕರ್ತವ್ಯ ನಿರ್ವಹಿಸಿ, ನಿವೃತ್ತರಾದ ನಂತರ ರಾಜಕೀಯದಲ್ಲಿ ಸಕ್ರಿಯವಾಗಿದ್ದರು. ಇವರ ಪುತ್ರ ಎಚ್.ಕೆ.ಗಂಗಾಧರ ೨೦೦೨ರಿಂದ ೨೦೧೨ರವರೆಗೆ ೨ ಅವಧಿಯಲ್ಲಿ ಪುರಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಇವರು ಚುನಾವಣೆಯಿಂದ ದೂರವಾದರೂ ರಾಜಕೀಯ ತಂತ್ರಗಾರಿಕೆಯಲ್ಲಿ ಹೆಸರುಗಳಿಸಿದ್ದಾರೆ. ಜತೆಗೆ ಇಂದಿಗೂ ಪಟ್ಟಣದಲ್ಲಿ ಕ್ಯಾಪ್ಟನ್ ಎಂದೇ ಖ್ಯಾತರಾಗಿದ್ದಾರೆ. ಎಚ್.ಕೆ.ಗಂಗಾಧರ ಅವರ ಸಹೋದರ ಎಚ್.ಕೆ.ಪ್ರಸನ್ನ ಅವರು ಸಹೋದರನ ಮಾರ್ಗದರ್ಶನದಲ್ಲಿ ಶಾಸಕ ಎಚ್.ಡಿ.ರೇವಣ್ಣ ಅವರ ಕಟ್ಟಾ ಅನುಯಾಯಿಯಾಗಿದ್ದು, ಚುನಾವಣೆಗಳಲ್ಲಿ ಸಾಕಷ್ಟು ಸೇವೆಗೈದು, ಕ್ಯಾಪ್ಟನ್ ಎಚ್.ಕೆ.ಗಂಗಾಧರ ನೇತೃತ್ವದ ಯುವಕರ ಪಡೆಗೆ ಸಾರಥಿಯಾಗಿದ್ದು, ಇವರು ಸಹ ಪುರಸಭೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

ದೇವಾಂಗ ಬಡಾವಣೆ ೮ನೇ ವಾರ್ಡಿನ ಎ.ಜಗನ್ನಾಥ್ ಹಾಗೂ ೧೭ನೇ ವಾರ್ಡಿನ ಎಚ್.ಎ.ಶಿವಣ್ಣ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಪುರಸಭಾ ಸದಸ್ಯರಾದ ಎಚ್.ಎ.ಶಿವಣ್ಣ ಅವರ ಪತ್ನಿ ಲಕ್ಷ್ಮಿ ಅವರು ಪುರಸಭಾಧ್ಯಕ್ಷರಾಗಿದ್ದರು ಹಾಗೂ ದೇವಾಂಗ ಜನಾಂಗದವರು ಹಾಗೂ ಪುರಸಭಾ ಸದಸ್ಯರಾದ ಸಿ.ಜೆ.ವೀಣಾ ಅಧ್ಯಕ್ಷರಾಗಿದ್ದ ಕಾರಣದಿಂದಾಗಿ ಒಕ್ಕಲಿಗ ಜನಾಂಗದ ಪುರಸಭಾ ಸದಸ್ಯ ಎಚ್.ಕೆ.ಪ್ರಸನ್ನ ಅವರಿಗೆ ಅಧ್ಯಕ್ಷ ಸ್ಥಾನ ದೊರೆಯುವ ಸಾಧ್ಯತೆ ಹೆಚ್ಚಿದೆ. ೨೦೧೮ರಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ ಪುರಸಭೆಯ ೨೩ ಸದಸ್ಯರಲ್ಲಿ ೨೨ ಜೆಡಿಎಸ್ ಸದಸ್ಯರು ಹಾಗೂ ಒಬ್ಬರು ಕಾಂಗ್ರೆಸ್ ಸದಸ್ಯರು ಇದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೀಸಲಾತಿ ಪಟ್ಟಿ ಪ್ರಕಟಗೊಂಡ ನಂತರ ಅತೃಪ್ತ ಸದಸ್ಯರು ನ್ಯಾಯಾಲಯದ ಮೊರೆ ಹೋದ ಹಿನ್ನೆಲೆಯಲ್ಲಿ ೨೦೨೦ರ ನವೆಂಬರ್‌ನಲ್ಲಿ ೨.೫ ವರ್ಷದ ಮೊದಲ ಅವಧಿಯ ಹೊಸ ಮೀಸಲಾತಿ ಪಟ್ಟಿಯನ್ನು ಸರ್ಕಾರ ಪ್ರಕಟಿಸಿತು. ನವೆಂಬರ್ ೧೮ರಂದು ಪುರಸಭೆ ನೂತನ ಅಧ್ಯಕ್ಷೆಯಾಗಿ ದೇವಾಂಗ ಜನಾಂಗದ ಸಿ.ಜೆ.ವೀಣಾ ಅಧಿಕಾರ ಸ್ವೀಕರಿಸಿದರು. ನಂತರದಲ್ಲಿ ಆರ್‍ಯ ಈಡಿಗ ಜನಾಂಗದ ಜಿ.ಕೆ.ಸುಧಾನಳಿನಿ ಹಾಗೂ ಕುರುಹಿನಶೆಟ್ಟಿ ಜನಾಂಗದ ಎನ್.ಜ್ಯೋತಿ ಅಧ್ಯಕ್ಷೆಯಾಗಿ ಆಡಳಿತ ನಡೆಸಿದರು. ೨೦೨೩ರ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಪುರಸಭಾಧ್ಯಕ್ಷರಾಗಿದ್ದ ಎನ್.ಜ್ಯೋತಿ ಅಧ್ಯಕ್ಷರ ಕೊಠಡಿ ತೆರವುಗೊಳಿಸಿದರು ಮತ್ತು ನಂತರದಲ್ಲಿ ೨.೫ ವರ್ಷದ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.