ಸಾರಾಂಶ
ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣರ ಲೈಂಗಿಕ ಹಗರಣದ ಬಗ್ಗೆ 2023ರ ಡಿಸೆಂಬರ್ ತಿಂಗಳಲ್ಲೇ ಬಿಜೆಪಿಗೆ ಮಾಹಿತಿ ಇದ್ದರೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಜ್ವಲ್ ಪರವಾಗಿ ಏಕೆ ಪ್ರಚಾರ ಮಾಡಿದರು? ಎಂದು ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಪ್ರಶ್ನಿಸಿದ್ದಾರೆ.
ಪ್ರಜ್ವಲ್ ರೇವಣ್ಣರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಂಗಳವಾರ ನಗರದ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲು ಯತ್ನಿಸಿದ ಬಿ.ವಿ. ಶ್ರೀನಿವಾಸ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಪ್ರಜ್ವಲ್ ರೇವಣ್ಣರದ್ದು ಜಗತ್ತಿನ ಅತಿ ದೊಡ್ಡ ಲೈಂಗಿಕ ಹಗರಣವಾಗಿದೆ. ಈ ಕೃತ್ಯದಿಂದ ಹೆಣ್ಣು ಮಕ್ಕಳಿಗೆ ಭೀತಿ ಉಂಟಾಗಿದ್ದು, ಸುರಕ್ಷತೆ, ಭದ್ರತೆ, ಗೌರವಕ್ಕೆ ಖಾತರಿ ಇಲ್ಲದಂತಾಗಿದೆ. ಪ್ರಧಾನಮಂತ್ರಿ ಮೋದಿಯವರು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ, ರಕ್ಷಣೆ ನೀಡಿ ಎನ್ನುತ್ತಾರೆ. ಮತ್ತೊಂದೆಡೆ ಸಂಸದ ಪ್ರಜ್ವಲ್ ರೇವಣ್ಣ ಹಗರಣದ ಬಗ್ಗೆ ಮೌನ ವಹಿಸಿದ್ದಾರೆ ಎಂದು ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.
ಪರಾರಿಗೆ ಬಿಜೆಪಿ ನೆರವು:
ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷವಾಗಿರುವ ಜೆಡಿಎಸ್‌ನ ಸಂಸದ ಮಾಡಿರುವ ಕೃತ್ಯವನ್ನು ಬಿಜೆಪಿಯವರು ಹೇಗೆ ಸಮರ್ಥಿಸಿಕೊಳ್ಳಲು ಸಾಧ್ಯ? ಜರ್ಮನಿಗೆ ಪ್ರಜ್ವಲ್ಓ ಡಿ ಹೋಗಲು ಬಿಜೆಪಿಯವರು ನೆರವಾಗಿದ್ದಾರೆ. ಪ್ರಕರಣದ ಬಗ್ಗೆ ಪ್ರಧಾನಿ ಮೋದಿ ಉತ್ತರ ನೀಡಬೇಕು. ಕೂಡಲೇ ಪ್ರಜ್ವಲ್‌ರನ್ನು ಗಡಿಪಾರು ಮಾಡಿಸಿ ಬಂಧಿಸಬೇಕು ಎಂದು ಶ್ರೀನಿವಾಸ್ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಜ್ವಲ್ ರೇವಣ್ಣ ವಿರುದ್ಧಎನ್‌ಎಸ್‌ಯುಐ ಧರಣಿ
ಬೆಂಗಳೂರು: ಲೈಂಗಿಕ ಹಗರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ಕಾರ್ಯಕರ್ತರು ನಗರದ ಮಹಾರಾಣಿ ಕಾಲೇಜು ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಪೆನ್‌ಡ್ರೈವ್ ಸ್ವಾಮಿ ಎಂಬ ಬರಹವಿದ್ದ ಪ್ರಜ್ವಲ್ ರೇವಣ್ಣ ಫೋಟೋ ಹಿಡಿದು ಕುಳಿತಿದ್ದ ವಿದ್ಯಾರ್ಥಿನಿಯರು ಲೈಂಗಿಕ ಹಗರಣದ ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು, ಹೆಣ್ಣು ಮಕ್ಕಳಿಗೆ, ಜನ ಸಾಮಾನ್ಯರಿಗೆ ದಾರಿ ತೋರಿಸಬೇಕಿತ್ತು. ಆದರೆ, ಅವರೇ ಹೆಣ್ಣು ಮಕ್ಕಳಿಗೆ ಬೆದರಿಕೆ ಹಾಕಿ, ಅಮಿಷ ಒಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇಂತಹ ವ್ಯಕ್ತಿಗಳಿಂದ ಹೆಣ್ಣು ಮಕ್ಕಳು, ಜನ ಸಾಮಾನ್ಯರು ಸುರಕ್ಷತೆ, ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಪ್ರತಿಭಟನೆ ನೇತೃತ್ವ ವಹಿಸಿದ ಎನ್‌ಎಸ್‌ಯುಐ ಮುಖಂಡ ಕೀರ್ತಿ ಗಣೇಶ್ ಹೇಳಿದರು.
ಆರೋಪಿಯು ಪ್ರಭಾವಿ ರಾಜಕಾರಣಿಯ ಕುಟುಂಬದವರು, ಸಂಸದ ಎಂಬ ಕಾರಣಕ್ಕೆ ಮೃಧು ಧೋರಣಿ ಅನುಸರಿಸದೇ ಸಾಮಾನ್ಯ ಆರೋಪಿಯಂತೆ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.