ರಾಜ್ಯದ ಸಮೀಕ್ಷೆ ಬಹಿಷ್ಕಾರಕ್ಕೆ ಕರೆ ನೀಡಿದ ಬಿಜೆಪಿಗರು ಕೇಂದ್ರದ ಜಾತಿ ಗಣತೀನೂ ವಿರೋಧಿಸುತ್ತಾರಾ?: ಸಿದ್ದು

| Published : Sep 30 2025, 01:00 AM IST

ರಾಜ್ಯದ ಸಮೀಕ್ಷೆ ಬಹಿಷ್ಕಾರಕ್ಕೆ ಕರೆ ನೀಡಿದ ಬಿಜೆಪಿಗರು ಕೇಂದ್ರದ ಜಾತಿ ಗಣತೀನೂ ವಿರೋಧಿಸುತ್ತಾರಾ?: ಸಿದ್ದು
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಬಹಿಷ್ಕರಿಸುವಂತೆ ಕರೆ ನೀಡಿರುವ ಬಿಜೆಪಿ ನಾಯಕರು ಸಾರ್ವಜನಿಕರ ಎದುರು ಬೆತ್ತಲಾಗುತ್ತಿದ್ದಾರೆ. ರಾಜ್ಯ ಸರ್ಕಾರದ ಸಮೀಕ್ಷೆ ಬಗ್ಗೆ ಆಕ್ಷೇಪಿಸುತ್ತಿರುವವರು, ಕೇಂದ್ರ ಸರ್ಕಾರ ನಡೆಸುವ ಜಾತಿ ಗಣತಿಯನ್ನೂ ವಿರೋಧಿಸುತ್ತಾರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

- ಹೌದೆಂದಾದರೆ ಈಗಲೇ ಹೇಳಿ ಬಿಡಲಿ । ಜಾತಿ ಗಣತಿ ಬಹಿಷ್ಕಾರ ಹೇಳಿಕೆ ನೀಡಿದ ಬಿಜೆಪಿಗರಿಗೆ ತರಾಟೆ

----

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಬಹಿಷ್ಕರಿಸುವಂತೆ ಕರೆ ನೀಡಿರುವ ಬಿಜೆಪಿ ನಾಯಕರು ಸಾರ್ವಜನಿಕರ ಎದುರು ಬೆತ್ತಲಾಗುತ್ತಿದ್ದಾರೆ. ರಾಜ್ಯ ಸರ್ಕಾರದ ಸಮೀಕ್ಷೆ ಬಗ್ಗೆ ಆಕ್ಷೇಪಿಸುತ್ತಿರುವವರು, ಕೇಂದ್ರ ಸರ್ಕಾರ ನಡೆಸುವ ಜಾತಿ ಗಣತಿಯನ್ನೂ ವಿರೋಧಿಸುತ್ತಾರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವಿರುದ್ಧವಾಗಿ ಮಾತನಾಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಾರಂಭಿಸುತ್ತಿದ್ದಂತೆಯೇ ‘ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್‌’ ಎಂದು ಘೋಷಣೆ ಕೂಗುವವರ ಆಂತರ್ಯದ ನಿಜ ಬಣ್ಣ ಬಯಲಾಗುತ್ತಿದೆ. ರಾಜ್ಯ ಬಿಜೆಪಿ ನಾಯಕರು ಒಬ್ಬೊಬ್ಬರಾಗಿ ನಮ್ಮ ಸಮೀಕ್ಷೆ ಬಹಿಷ್ಕರಿಸುವಂತೆ ಕರೆ ನೀಡುತ್ತಾ, ಸಾರ್ವಜನಿಕರೆದುರು ಬೆತ್ತಲಾಗುತ್ತಿದ್ದಾರೆ ಎಂದಿದ್ದಾರೆ.

ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸುತ್ತಿರುವ ಸಮೀಕ್ಷೆ ಒಂದು ಜಾತಿ-ಧರ್ಮಕ್ಕೆ ಸೀಮಿತವಾದುದಲ್ಲ. ರಾಜ್ಯ ಏಳು ಕೋಟಿ ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಾಗಿದೆ. ಇದು ಯಾರ ವಿರುದ್ಧವೂ ಅಲ್ಲ, ಎಲ್ಲರ ಪರ ಸಮೀಕ್ಷೆ ಮಾಡಲಾಗುತ್ತಿದೆ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮಾನತೆ ಸಾಧಿಸಿ ಸರ್ವರಿಗೂ ಸಮಪಾಲು, ಸಮಬಾಳು ನೀಡುವುದೇ ಇದರ ಮುಖ್ಯ ಉದ್ದೇಶ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ನಡೆಸುವ ಸಮೀಕ್ಷೆಯಿಂದ ಕೇವಲ ದಲಿತ, ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸ್ಥಿತಿಗತಿ ಮಾತ್ರವಲ್ಲ, ಮುಂದುವರಿದ ಜಾತಿಗಳಲ್ಲಿನ ಬಡವರು ಮತ್ತು ಅವಕಾಶ ವಂಚಿತರ ಬಗ್ಗೆಯೂ ತಿಳಿಯಲಿದೆ. ಈ ವಾಸ್ತವಸ್ಥಿತಿ ಅರಿಯುವುದು ಬಿಜೆಪಿ ಅವರಿಗೆ ಬೇಡವಾಗಿದೆ. ಸಂಪತ್ತು, ಅವಕಾಶ ಮತ್ತು ಪ್ರಾತಿನಿಧ್ಯ ಎಲ್ಲರಿಗೂ ಸಿಗಬಾರದು. ಉಳ್ಳವರ ಕೈಯಲ್ಲೇ ಅದು ಇರಬೇಕು. ಹಿಂದುಳಿದವರು ಹಿಂದೆಯೇ ಉಳಿಯಬೇಕು. ಮಹಿಳೆಯರು ಅವಕಾಶ ವಂಚಿತರಾಗಿಯೇ ಇರಬೇಕು. ವರ್ಣ ಮತ್ತು ವರ್ಗಗಳ ನಡುವಿನ ಅಸಮಾನತೆ ಮುಂದುವರಿಯಬೇಕು ಎನ್ನುವುದು ಮನುವಾದವಾಗಿದ್ದು, ಬಿಜೆಪಿ ನಾಯಕರದ್ದು ಅದೇ ಮನುವಾದಿ ಮನಸ್ಥಿತಿ.

ಬಿಹಾರದಲ್ಲಿ ಬಿಜೆಪಿ ಮೈತ್ರಿ ಸರ್ಕಾರ ಈಗಾಗಲೇ ಜಾತಿ ಆಧಾರಿತ ಸಮೀಕ್ಷೆ ನಡೆಸಿದೆ. ತೆಲಂಗಾಣದಲ್ಲೂ ನಡೆದಿದೆ. ಅಲ್ಲಿನ ಬಿಜೆಪಿ ನಾಯಕರು ಬಾಯಿ ಮುಚ್ಚಿಕೊಂಡಿದ್ದಾರೆ. ಇದೆಲ್ಲಕ್ಕಿಂತ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾತಿ ಗಣತಿ ಮಾಡಲು ಹೊರಟಿದೆ. ಹಾಗಾದರೆ ಕರ್ನಾಟಕದಲ್ಲಿ ಸಮೀಕ್ಷೆ ವಿರೋಧಿಸುತ್ತಿರುವ ಬಿಜೆಪಿ ನಾಯಕರು, ಕೇಂದ್ರ ಸರ್ಕಾರದ ಜಾತಿ ಗಣತಿ ವಿರೋಧಿಸುತ್ತಾರಾ? ಹಾಗೆ ವಿರೋಧಿಸುವುದಾದರೆ ಅದನ್ನು ಗಟ್ಟಿಧ್ವನಿಯಲ್ಲಿ ಈಗಲೇ ಹೇಳಲಿ. ಪ್ರಧಾನಿ ಅವರ ಎದುರು ತಲೆ ಎತ್ತಿ ಮಾತನಾಡುವ ದಮ್ಮು-ತಾಕತ್ತು ಇಲ್ಲ ಬಿಜೆಪಿ ನಾಯಕರಿಗೆ ವಿರೋಧಿಸುವ ಧೈರ್ಯ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕರ ಈ ಆತ್ಮವಂಚಕ ನಡವಳಿಕೆಯನ್ನು ರಾಜ್ಯದ ಜನರು ಅರ್ಥ ಮಾಡಿಕೊಳ್ಳಬೇಕು. ಅವರ ರಾಜಕೀಯ ಪ್ರೇರಿತ ಠಕ್ಕತನದ ಹೇಳಿಕೆಗಳನ್ನು ಕಸದ ಬುಟ್ಟಿಗೆ ಎಸೆದು ಎಲ್ಲರೂ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು. ಆಮೂಲಕ ನಾವೆಲ್ಲ ಸಮ ಸಮಾಜ ನಿರ್ಮಾಣ ಮಾಡಿ, ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡೋಣ ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.