7ರಂದು ದೆಹಲಿಯಲ್ಲಿ ರಾಜ್ಯ ಸರ್ಕಾರ ಧರಣಿ

| Published : Feb 03 2024, 01:50 AM IST / Updated: Feb 03 2024, 07:38 AM IST

ಸಾರಾಂಶ

ಕೇಂದ್ರದ ಮಲತಾಯಿ ಧೋರಣೆಯಿಂದ ಕಳೆದ ಐದು ವರ್ಷಗಳಲ್ಲಿ ರಾಜ್ಯಕ್ಕೆ 62 ಸಾವಿರ ಕೋಟಿ ರು. ನಷ್ಟವಾಗಿದ್ದು, ಈ ಸಂಬಂಧ ಫೆ.7ರಂದು ರಾಜ್ಯ ಸರ್ಕಾರವು ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು 

ಕೇಂದ್ರದ ಮಲತಾಯಿ ಧೋರಣೆಯಿಂದ ಕಳೆದ ಐದು ವರ್ಷಗಳಲ್ಲಿ ರಾಜ್ಯಕ್ಕೆ 62 ಸಾವಿರ ಕೋಟಿ ರು. ನಷ್ಟವಾಗಿದ್ದು, ಈ ಸಂಬಂಧ ಫೆ.7ರಂದು ರಾಜ್ಯ ಸರ್ಕಾರವು ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. 

ಶುಕ್ರವಾರ ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ. 

ಪ್ರತಿಭಟನೆಗೆ ಸ್ಥಳಾವಕಾಶದ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದಿದ್ದು, ಅನುಮತಿ ದೊರೆತ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತೇವೆ. ಕಾಂಗ್ರೆಸ್‌ ಜನಪ್ರತಿನಿಧಿಗಳು ಭಾಗವಹಿಸಲಿರುವ ಪ್ರತಿಭಟನೆಯಲ್ಲಿ ಪ್ರತಿಪಕ್ಷದ ಸಂಸದರು, ಶಾಸಕರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಫೆ.6ರಂದು ದೆಹಲಿ ಚಲೋ ನಡೆಸಿ ದೆಹಲಿಗೆ ಪ್ರಯಾಣಿಸಲಾಗುವುದು. ಫೆ.7ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ರಾಜ್ಯದ ಹಿತ ಕಾಯಲು ಪಕ್ಷಾತೀತವಾಗಿ ಹೋರಾಟ ಮಾಡಲು ತೀರ್ಮಾನಿಸಿದ್ದು, ಪ್ರತಿಭಟನೆಗೆ ರಾಜ್ಯದ ಎಲ್ಲಾ ಸಂಸದರಿಗೆ ಆಹ್ವಾನ ನೀಡಲಾಗುವುದು. 

ಕೇಂದ್ರ ಸರ್ಕಾರದ ಬಜೆಟ್ ಗಾತ್ರ ದುಪ್ಪಟ್ಟಾಗಿದ್ದರೂ ರಾಜ್ಯಕ್ಕೆ ಬರುವ ಅನುದಾನದ ಪ್ರಮಾಣದಲ್ಲಿ ಅತ್ಯಲ್ಪ ಏರಿಕೆ ಇದೆ. ರಾಜ್ಯ ದೇಶದಲ್ಲೇ ಪ್ರಗತಿಪರ ರಾಜ್ಯವಾಗಿದ್ದು, ಮಹಾರಾಷ್ಟ್ರ ಬಿಟ್ಟರೆ ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಪಾವತಿ ಮಾಡುತ್ತಿರುವ ರಾಜ್ಯ ಕರ್ನಾಟಕವಾಗಿದೆ.

ಕೇಂದ್ರ ಬಜೆಟ್ ಮಾತ್ರವಲ್ಲದೇ, ಕಳೆದ ಐದು ವರ್ಷಗಳ ಬಜೆಟ್ ನೋಡಿದರೆ ನಮಗೆ ನಮ್ಮ ಪಾಲು ನ್ಯಾಯಯುತವಾಗಿ ಸಿಕ್ಕಿಲ್ಲ. ರಾಜ್ಯದ 28 ಸಂಸದರ ಪೈಕಿ 27 ಸಂಸದರು ಎನ್‌ಡಿಎ ಮೈತ್ರಿಕೂಟದವರೇ ಆಗಿದ್ದರೂ ನಮಗೆ ಸೂಕ್ತ ನ್ಯಾಯ ಸಿಗುತ್ತಿಲ್ಲ ಎಂದು ಕಿಡಿಕಾರಿದರು. 

ಬಿಜೆಪಿ ಸರ್ಕಾರದ ವೇಳೆ ಡಬಲ್ ಎಂಜಿನ್ ಸರ್ಕಾರದಿಂದ ನಮಗೆ ಲಾಭ ಆಗಬಹುದು ಎಂದು ಭಾವಿಸಿದ್ದೆವು. ಆದರೆ ಸಚಿವ ಸಂಪುಟದಲ್ಲಿ ಚರ್ಚಿಸಿದಾಗ ರಾಜ್ಯಕ್ಕೆ 62 ಸಾವಿರ ಕೋಟಿ ನಷ್ಟವಾಗಿದೆ. 

ಇದನ್ನು ಹೇಗೆ ಅರಗಿಸಿಕೊಳ್ಳುವುದು? ಕೇಂದ್ರ ಸರ್ಕಾರದ ಬಜೆಟ್ ಗಾತ್ರ ಡಬಲ್ ಆಗಿದ್ದರೂ ರಾಜ್ಯದ ಪಾಲಿನ ಅನುದಾನ ಮಾತ್ರ ಹೆಚ್ಚಳವಾಗಿಲ್ಲ. ಯಾವುದೇ ಯೋಜನೆ ತೆಗೆದುಕೊಂಡರೂ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದೆ. 

ಕೇಂದ್ರದ ಅನುದಾನದಲ್ಲಿ ಕರ್ನಾಟಕ ಮತ್ತು ಗುಜರಾತ್ ನಡುವೆ ಹೋಲಿಕೆ ಮಾಡುವುದಿಲ್ಲ. ಬೇರೆಯವರಿಗೆ ಎಷ್ಟಾದರೂ ನೀಡಲಿ, ಆದರೆ ನಮಗೆ ನ್ಯಾಯಯುತವಾಗಿ ಸಿಗಬೇಕಾದ ನಮ್ಮ ಪಾಲನ್ನು ನೀಡಿ ಎಂಬುದಾಗಿ ಕೇಳುತ್ತಿದ್ದೇವೆ ಎಂದರು.

ಸಾಯುವಾಗಲೂ ಭಾರತೀಯ: ಡಿಕೆಶಿ
‘ನಾನು ಭಾರತೀಯ. ಹುಟ್ಟುತ್ತಾ ಭಾರತೀಯನಾಗಿದ್ದೇನೆ. ಸಾಯುವಾಗಲೂ ಭಾರತೀಯನಾಗಿ ಸಾಯುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. 

ಸಂಸದ ಡಿ.ಕೆ. ಸುರೇಶ್ ಹೇಳಿಕೆ ಸಂಬಂಧ ಬಿಜೆಪಿ ಕ್ಷಮೆಯಾಚನೆಗೆ ಒತ್ತಾಯಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಭಾರತ ಅಖಂಡ ದೇಶ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ಭಾರತವೊಂದೇ. 

ಬಿಜೆಪಿ ಈ ವಿಚಾರ ರಾಜಕೀಯ ಮಾಡುತ್ತಿದೆ. ಸಂಸದ ಸುರೇಶ್ ಅವರು ಬಿಜೆಪಿ ಸರ್ಕಾರದಿಂದ ಕರ್ನಾಟಕ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ಆಗಿರುವ ಅನ್ಯಾಯವನ್ನು ಪ್ರಶ್ನಿಸಿದ್ದಾರೆ. ಹೀಗೆ ಅನ್ಯಾಯ ಮುಂದುವರಿದರೆ ಮುಂದೆ ಇಂತಹ ಆಲೋಚನೆಗಳು ಬರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ ಎಂದರು.

ಸಂಸತ್ತಿನ ಎದುರೇ ಪ್ರತಿಭಟನೆ ಮಾಡ್ತೀವಿ:
ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಬರ ನಿರ್ವಹಣೆಗೆ ಕೊಡಬೇಕಿದ್ದ ಅನುದಾನ ಕೂಡ ಕೊಟ್ಟಿಲ್ಲ. ಇದನ್ನು ವಿರೋಧಿಸಿ ಫೆ.7ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಬಜೆಟ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಂಸತ್ತಿನ ಎದುರೇ ಈ ಪ್ರತಿಭಟನೆ ಮಾಡಲಾಗುವುದು. - ಸಿದ್ದರಾಮಯ್ಯ ಮುಖ್ಯಮಂತ್ರಿ

ರಾಜ್ಯದ ಪಾಲು ಸಿಗುತ್ತಿಲ್ಲ: ಕಳೆದ ಐದು ವರ್ಷಗಳ ಬಜೆಟ್ ನೋಡಿದರೆ ನಮಗೆ ನಮ್ಮ ಪಾಲು ನ್ಯಾಯಯುತವಾಗಿ ಸಿಕ್ಕಿಲ್ಲ. ರಾಜ್ಯದ 28 ಸಂಸದರ ಪೈಕಿ 27 ಸಂಸದರು ಎನ್‌ಡಿಎ ಮೈತ್ರಿಕೂಟದವರೇ ಆಗಿದ್ದರೂ ನಮಗೆ ಸೂಕ್ತ ನ್ಯಾಯ ದೊರೆಯುತ್ತಿಲ್ಲ.- ಡಿ.ಕೆ.ಶಿವಕುಮಾರ್‌ ಉಪಮುಖ್ಯಮಂತ್ರಿ