ಎಲ್ಲಾ ವರ್ಗದವರಿಗಾಗಿ ಕೆಲಸ ಮಾಡುವೆ: ಮನ್ಸೂರ್

| Published : Apr 24 2024, 02:32 AM IST

ಎಲ್ಲಾ ವರ್ಗದವರಿಗಾಗಿ ಕೆಲಸ ಮಾಡುವೆ: ಮನ್ಸೂರ್
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯವರಂತೆ ನಾನು ದ್ವೇಷದ ರಾಜಕಾರಣ ಮಾಡಲ್ಲ, ನಾನು ಎಲ್ಲ ವರ್ಗದವರಿಗಾಗಿ ಕೆಲಸ ಮಾಡುತ್ತೇನೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಮನ್ಸೂರ್‌ ಅಲಿ ಖಾನ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜನರ ಆಶೀರ್ವಾದ ಪಡೆದು ಸಂಸದನಾಗಿ ಸಮಾಜದ ಎಲ್ಲಾ ಸಮುದಾಯ, ವರ್ಗಗಳ ಅಭಿವೃದ್ಧಿಗಾಗಿ ಪ್ರಾಮಾಣಿವಾಗಿ ಕೆಲಸ ಮಾಡುತ್ತೇನೆ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಹೇಳಿದರು.

ಮಂಗಳವಾರ ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿದರಹಳ್ಳಿ, ದೊಡ್ಡಗುಬ್ಬಿ, ಮಾರ್ಗೊಂಡನಹಳ್ಳಿ ಮತ್ತು ಆವಲಹಳ್ಳಿ ಸೇರಿದಂತೆ ವಿವಿಧೆಡೆ ರೋಡ್ ಶೋ ನಡೆಸಿ, ಮನೆ ಮನೆಗೆ ತೆರಳಿ ಪ್ರಚಾರ ಮಾಡಿದ ಅವರು, ಬಿಜೆಪಿ ಅವಧಿಯಲ್ಲಿ ತಾರತಮ್ಯ, ದ್ವೇಷದ ವಾತಾವರಣ ನಿರ್ಮಾಣವಾಗಿದೆ. ರಾಜಕಾರಣಕ್ಕಾಗಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಲಾಗುತ್ತಿದೆ. ಆದರೆ, ನಾನು ಎಲ್ಲ ಸಮುದಾಯಗಳ ಅಭಿವೃದ್ಧಿ ಮತ್ತು ಸಮಾಜದಲ್ಲಿ ನೆಮ್ಮದಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ನಾಗರಿಕರ ಸ್ವಾತಂತ್ರ್ಯ, ಹಕ್ಕುಗಳ ರಕ್ಷಣೆ ಜೊತೆಗೆ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಬೇಕಿದೆ. ಕೇಂದ್ರದ ಮೋದಿ ಸರ್ಕಾರ ಕಳೆದ ಹತ್ತು ವರ್ಷಗಳಿಂದ ಬರೀ ಸುಳ್ಳುಗಳನ್ನು ಹೇಳಿಕೊಂಡ ರಾಜಕಾರಣ ಮಾಡುತ್ತಿದೆ. ಜನರಿಗೆ ಯಾವುದೇ ರೀತಿಯ ಅನುಕೂಲಗಳನ್ನು ಮಾಡಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬೇಸತ್ತಿರುವ ನಾಗರಿಕರು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ನೀಡಲಿದ್ದಾರೆ. ಚುನಾವಣೆಯಲ್ಲಿ ನನ್ನ ಕ್ರಮ ಸಂಖ್ಯೆ 1 ಅನ್ನು ಒತ್ತುವ ಮೂಲಕ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.

ಈ ವೇಳೆ ಮಾಜಿ ಸಚಿವ ಎಚ್.ನಾಗೇಶ್ ಸೇರಿದಂತೆ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.ಹೆಚ್ಚಿನ ಅನುದಾನ ತರುವೆ:

ಕೇಂದ್ರಕ್ಕೆ ಗರಿಷ್ಠ ತೆರಿಗೆ ನೀಡುವ ನಗರಗಳಲ್ಲಿ ಒಂದಾಗಿರುವ ಬೆಂಗಳೂರಿನ ಅಭಿವೃದ್ಧಿಗಾಗಿ ಕೇಂದ್ರ ಪ್ರಯೋಜಿತ ಯೋಜನೆಗಳ ಅನುಷ್ಠಾನಕ್ಕಾಗಿ ಗರಿಷ್ಠ ಪ್ರಮಾಣದ ಅನುದಾನವನ್ನು ತರುತ್ತೇನೆ ಎಂದು ಮನ್ಸೂರ್ ಭರವಸೆ ನೀಡಿದರು.

ಮೆಟ್ರೊ ರೈಲು ಮತ್ತು ಉಪ ನಗರ ರೈಲು ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವುದಕ್ಕೆ ಆದ್ಯತೆ ನೀಡುತ್ತೇನೆ. ಇದರಿಂದ ಕಡಿಮೆ ದರದಲ್ಲಿ ಹೆಚ್ಚಿನ ಜನರು ಸುರಕ್ಷಿತವಾಗಿ, ಶೀಘ್ರವಾಗಿ ಪ್ರಯಾಣಿಸಲು ಸಾಧ್ಯವಾಗುತ್ತದೆ. ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಈಗಿನ ಸಂಸದರು ಮೂರು ಅವಧಿಯಿಂದ ಅಧಿಕಾರದಲ್ಲಿದ್ದರೂ ಉಪನಗರ ರೈಲು ಯೋಜನೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದ್ದಾರೆ. ಮತ್ತೊಂದೆಡೆ ಮುಂಬೈ, ಚೆನ್ನೈನಂತಹ ನಗರಗಳು ಉಪನಗರ ಸಾರಿಗೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿವೆ ಎಂದು ಮನ್ಸೂರ್ ಹೇಳಿದರು.ಡಬ್ಬಲ್ ಗ್ಯಾರಂಟಿ: ರಾಜ್ಯದಲ್ಲಿ ಪಂಚ ಗ್ಯಾರಂಟಿಗಳಿಂದ ಜನರಿಗೆ ಅನುಕೂಲವಾಗಿದೆ. ಅದೇ ರೀತಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ನಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ವರ್ಷಕ್ಕೆ 1 ಲಕ್ಷ ರು. ನೀಡಲಾಗುತ್ತದೆ. ಇದರಿಂದ ಪ್ರತಿ ತಿಂಗಳು ಬಡವರು, ಅರ್ಹ ಕುಟುಂಬಗಳಿಗೆ ತಿಂಗಳಿಗೆ ಒಟ್ಟು 10 ಸಾವಿರ ರು. ನೇರ ನಗದು ಲಭ್ಯವಾಗುತ್ತದೆ. ಅದರ ಜೊತೆಗೆ ಯುವಜನರಿಗೆ ಉದ್ಯೋಗ, ಶಿಕ್ಷಣ, ಆರೋಗ್ಯ, ಉತ್ತಮ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಹೊಸ ರೂಪ ನೀಡಲಿದೆ ಎಂದು ಮನ್ಸೂರ್ ಖಾನ್ ತಿಳಿಸಿದರು.ನೇಕಾರರಿಗೆ ಬೇಡಿಕೆಗೆ ಸ್ಪಂದನೆ

ಸೋಮವಾರ ಎಸ್.ಆರ್.ನಗರದ ದೇವಾಂಗ ಭವನದಲ್ಲಿ ನೇಕಾರ ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿದ ಮನ್ಸೂರ್ ಖಾನ್ ಅವರು, ನೇಕಾರರ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ಬೇಡಿದರು.

ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ನೇಕಾರ ಸಮುದಾಯದ ಶ್ರೇಯೋಭಿವೃದ್ಧಿಗೆ ಅನೇಕ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದ ವಿವಿಧೆಡೆ ನೇಕಾರರಿಗೆ ಲೇಔಟ್‌ಗಳ ನಿರ್ಮಾಣ, ನೇಕಾರಿಕೆಗೆ 10 ಎಚ್‌ಪಿ ವರೆಗೆ ಉಚಿತ ವಿದ್ಯುತ್ ನೀಡಲಾಗಿದೆ. ನಗರದ ಬನ್ನಪ್ಪ ಪಾರ್ಕ್ ಬಳಿ ದೇವರ ದಾಸಿಮಯ್ಯನವರ ಪ್ರತಿಮೆ ಸ್ಥಾಪನೆ ಸೇರಿ ಅನೇಕ ಕ್ರಮಗಳನ್ನು ಶಾಸಕ ರಿಜ್ವಾನ್ ಅವರು ಕೈಗೊಂಡಿದ್ದಾರೆ. ಸಂಸದನಾದ ಬಳಿಕ ನಾನು ಕೂಡ ನೇಕಾರರ ಬೇಡಿಕೆಗಳಿಗೆ ಧ್ವನಿಯಾಗುತ್ತೇನೆ ಎಂದು ಮನ್ಸೂರ್ ಖಾನ್ ಹೇಳಿದರು.

ತಮ್ಮ ಬೇಡಿಕೆಗಳನ್ನು ತಿಳಿಸಿದ ನೇಕಾರ ಮುಖಂಡರು, ಮನ್ಸೂರ್ ಅವರಿಗೆ ಬೆಂಬಲಿಸುವುದಾಗಿ ಭರವಸೆ ನೀಡಿದರು.