ಸಾರಾಂಶ
ಯಶವಂತಪುರ ಕ್ಷೇತ್ರಕ್ಕೆ ನಾನೇ ಜೆಡಿಎಸ್ ಅಭ್ಯರ್ಥಿ. ನಾನೇಕೆ ಕ್ಷೇತ್ರ ಬಿಟ್ಟು ಕೊಡಲಿ ಎಂದು ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ ಟಿ.ಎನ್.ಜವರಾಯಿಗೌಡ ಪ್ರಶ್ನಿಸಿದ್ದಾರೆ.
ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರಕ್ಕೆ ನಾನೇ ಜೆಡಿಎಸ್ ಅಭ್ಯರ್ಥಿ. ನಾನೇಕೆ ಕ್ಷೇತ್ರ ಬಿಟ್ಟು ಕೊಡಲಿ ಎಂದು ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ ಟಿ.ಎನ್.ಜವರಾಯಿಗೌಡ ಪ್ರಶ್ನಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಆಪ್ತ ಎಂ.ರುದ್ರೇಶ್ ಅವರನ್ನು ಯಶವಂತಪುರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಿರಿಯರಾದ ಬಿ.ಎಸ್.ಯಡಿಯೂರಪ್ಪ ಅವರು ಏಕಾಏಕಿ ಯಶವಂತಪುರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಿಸಿರುವುದರಿಂದ ಎನ್‌ಡಿಎ ಮೈತ್ರಿಕೂಟಕ್ಕೆ ಧಕ್ಕೆಯಾಗಿದೆ. ಜೆಡಿಎಸ್ ಕಾರ್ಯಕರ್ತರಿಗೆ ನೋವಾಗಿದೆ. ಇದು ಏಕಪಕ್ಷೀಯ ದುಡುಕಿನ ನಿರ್ಧಾರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಮುಖ್ಯಮಂತ್ರಿಯಾಗಿ ಸಾಕಷ್ಟು ಅನುಭವಿರುವ ಯಡಿಯೂರಪ್ಪ ಅವರು ಏಕಾಏಕಿ ಅಭ್ಯರ್ಥಿ ಹೆಸರು ಘೋಷಣೆ ಮಾಡಿರುವುದು ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ. ಇದರಿಂದ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟಿರುವ ಅರ್ಥ ಮೂಡಿದೆ. ಯಡಿಯೂರಪ್ಪ ಅವರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಇದರಿಂದ ನಮ್ಮ ಜೆಡಿಎಸ್ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ ಎಂದರು.
ಎಚ್‌ಡಿಕೆ, ನಿಖಿಲ್ ಸ್ಪರ್ಧಿಸಿದರೆ ಬೆಂಬಲ:
ಎನ್‌ಡಿಎ ಮೈತ್ರಿಕೂಟದಲ್ಲಿ ಎಚ್.ಡಿ.ದೇವೇಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿ ಮತ್ತು ಮೈತ್ರಿ ಪಕ್ಷ ಬಿಜೆಪಿ ನಾಯಕರ ನೇತೃತ್ವದಲ್ಲಿ ಒಮ್ಮತದ ಅಭ್ಯರ್ಥಿಯಾಗಿ ಯಾರನ್ನು ಆಯ್ಕೆ ಮಾಡುತ್ತಾರೋ ಅದಕ್ಕೆ ನಾವು ಬದ್ಧ. ಯಶವಂತಪುರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲುವು ಸಾಧಿಸುವುದು ಬಹುತೇಕ ಖಚಿತ. ಹೀಗಿರುವಾಗ ಯಡಿಯೂರಪ್ಪ ಅವರ ಹೇಳಿಕೆಯಿಂದ ಸ್ವಲ್ಪಮಟ್ಟಿಗೆ ಮುಜುಗರವಾಗಿದೆ. ಈ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆ. ಈ ಕ್ಷೇತ್ರದಿಂದ ಎಚ್.ಡಿ.ಕುಮಾರಸ್ವಾಮಿ ಅಥವಾ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದರೆ ಸಂಪೂರ್ಣ ಬೆಂಬಲ ನೀಡುವುದಾಗಿ ಜವರಾಯಿಗೌಡ ಹೇಳಿದರು.
ಮೈತ್ರಿ ಬಿಟ್ಟು ಚುನಾವಣೆಯಾದರೆ ನಾನೇ ಸ್ಪರ್ಧಿ:
ಯಾವುದೇ ಕಾರಣಕ್ಕೆ ನಾನು ಕ್ಷೇತ್ರದಿಂದ ಹಾಗೂ ರಾಜಕಾರಣದಿಂದ ಹಿಂದೆ ಸರಿಯುವ ಮಾತಿಲ್ಲ. ಈ ಎಲ್ಲಾ ವಿದ್ಯಮಾನಗಳನ್ನು ನಮ್ಮ ಜೆಡಿಎಸ್ ವರಿಷ್ಠರ ಗಮನಕ್ಕೆ ತರಲಾಗುವುದು. ಯಶವಂತಪುರ ಕ್ಷೇತ್ರದಲ್ಲಿ ನಾನು ನಾಲ್ಕು ಬಾರಿ ತೀವ್ರ ಸ್ಪರ್ಧೆ ನೀಡಿ ಸೋತಿದ್ದೇನೆ. ನಾನೇಕೆ ಕ್ಷೇತ್ರ ಬಿಟ್ಟು ಕೊಡಲಿ? ಕ್ಷೇತ್ರದ ಜನ ನನ್ನ ಮೇಲೆ ಪ್ರೀತಿ ಇರಿಸಿಕೊಂಡಿದ್ದಾರೆ. ಮೈತ್ರಿ ಬಿಟ್ಟು ಚುನಾವಣೆಗೆ ಹೋದರೆ ನಾನೇ ಸ್ಪರ್ಧೆ ಮಾಡಿ ಗೆಲ್ಲುತ್ತೇನೆ. ಆಯಸ್ಸು, ಆರೋಗ್ಯ ಇದ್ದರೆ ಇನ್ನೂ ಮೂರು ಚುನಾವಣೆಗೆ ನಿಲ್ಲುತ್ತೇನೆ ಎಂದರು.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಯಶವಂತಪುರ ಕ್ಷೇತ್ರಕ್ಕೆ ರುದ್ರೇಶ್ ಮುಂದಿನ ಬಿಜೆಪಿ ಅಭ್ಯರ್ಥಿ ಎಂದಿದ್ದ ಬಿಎಸ್‌ವೈ
ಈ ಹೇಳಿಕೆಗೆ ಅದೇ ಕ್ಷೇತ್ರದ ಜೆಡಿಎಸ್‌ನ ಪ್ರಬಲ ಅಭ್ಯರ್ಥಿ ಜವರಾಯಿಗೌಡ ತೀವ್ರ ಆಕ್ಷೇಪ. ಕ್ಷೇತ್ರ ಬಿಡಲ್ಲ ಎಂದು ಸಡ್ಡು
ಇಂಥ ಹೇಳಿಕೆಯಿಂದ ಜೆಡಿಎಸ್ ಕಾರ್ಯಕರ್ತರಿಗೆ ನೋವಾಗಿದೆ. ಎನ್‌ಡಿಎ ಮೈತ್ರಿಕೂಟಕ್ಕೆ ಧಕ್ಕೆಯಾಗಿದೆ ಎಂದು ಎಚ್ಚರಿಕೆ
ಜೆಡಿಎಸ್ ನಾಯಕರ ಸಂಪರ್ಕಿಸದೇ ನೀಡದ ಏಕಪಕ್ಷೀಯ ಹೇಳಿಕೆ ದುಡುಕಿನದ್ದು ಎಂದು ಯಡಿಯೂರಪ್ಪ ವಿರುದ್ಧ ಅಸಮಾಧಾನ