ಆಯುಷ್ ಇಲಾಖೆಯಿಂದ ಭಾನುವಾರ ವಿಧಾನಸೌಧದ ಎದುರು ಏರ್ಪಡಿಸಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನ. ಯೋಗ ಸಾವಿರಾರು ವರ್ಷಗಳಷ್ಟು ಪುರಾತನವಾದದ್ದು, ಮಾನಸಿಕ ಮತ್ತು ಶಾರೀರಿಕ ಏಕತೆಗೆ ಯೋಗ ಅಗತ್ಯ ಎಂದು ರಾಜ್ಯಪಾಲ ಥಾವರ ಚಂದ್ ಗೆಹ್ಲೋತ್ ಅಭಿಪ್ರಾಯಪಟ್ಟರು.
ಬೆಂಗಳೂರು : ಯೋಗ ಸಾವಿರಾರು ವರ್ಷಗಳಷ್ಟು ಪುರಾತನವಾದದ್ದು, ಮಾನಸಿಕ ಮತ್ತು ಶಾರೀರಿಕ ಏಕತೆಗೆ ಯೋಗ ಅಗತ್ಯ ಎಂದು ರಾಜ್ಯಪಾಲ ಥಾವರ ಚಂದ್ ಗೆಹ್ಲೋತ್ ಅಭಿಪ್ರಾಯಪಟ್ಟರು.
ಆಯುಷ್ ಇಲಾಖೆಯಿಂದ ಭಾನುವಾರ ವಿಧಾನಸೌಧದ ಎದುರು ಏರ್ಪಡಿಸಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನ ಉದ್ಘಾಟಿಸಿ ನಾಡಿನ ಜನತೆಗೆ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯ ತಿಳಿಸಿ ಭಾಷಣ ಆರಂಭಿಸಿದ ರಾಜ್ಯಪಾಲರು, ಮಾನವನ ಆರೋಗ್ಯಕ್ಕೆ ಉತ್ತಮ ಮಾರ್ಗ ತೋರಿಸಿದ್ದು ಯೋಗ. ಪ್ರಸ್ತುತ ವಿಶ್ವದಲ್ಲಿ ಜನರು ಪರಸ್ಪರ ಪೈಪೋಟಿಗೆ ಬಿದ್ದು, ಒತ್ತಡದಿಂದ ಮಾನಸಿಕ ಮತ್ತು ಶಾರೀರಿಕ ಸಮಸ್ಯೆಗಳಿದ್ದು,. ಇದನ್ನು ಮನಗಂಡ ಪ್ರಧಾನಿ ನರೇಂದ್ರ ಮೋದಿ ಅವರು 12 ವರ್ಷಗಳ ಹಿಂದೆ ಜೂನ್ 21ರ ದಿನವನ್ನು ಅಂತಾರಾಷ್ಟ್ರೀಯ ಯೋಗದಿನ ಎಂದು ಘೋಷಿಸಿದರು. ಯುವಕರು ಪ್ರತಿ ದಿನ ಯೋಗಕ್ಕೆ ಸಮಯ ಮೀಸಲಿಡಬೇಕು. ಯೋಗ ಫಾರ್ ಹೆಲ್ದೀ ಹೆಲ್ತ್ ಅನ್ನೋ ಘೋಷಣೆ ಅನ್ವಯ ಯೋಗದಿನ ಆಚರಿಸಲಾಗಿದೆ. ಯೋಗವನ್ನು ಜೀವನದ ಅಂಗವಾಗಿ ಮಾಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಯೋಗದ ಕುರಿತು ಪ್ರಚಾರ ನಡೆಸಿ ಜಾಗೃತಿ ಮೂಡಿಸುತ್ತಿದೆ ಎಂದರು.
ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯೋಗ ಅಗತ್ಯ, ನಾವು ಮಾತ್ರವಲ್ಲ. ಮನೆಯವರೆಲ್ಲಾ ಯೋಗ ಅಳವಡಿಸಿಕೊಳ್ಳಬೇಕು, ಆಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ನಮ್ಮ ದೇಶಕ್ಕೆ ಮಾತ್ರವಲ್ಲ ವಿದೇಶಕ್ಕೂ ಯೋಗ ಹಬ್ಬಿದೆ, ಯೋಗ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು, ಪ್ರತಿದಿನವೂ ಯೋಗ ದಿನವಾಗಬೇಕು. ಮುಂದಿನ ಪೀಳಿಗೆಗೆ ಯೋಗವನ್ನು ನಾವು ವರ್ಗಾಯಿಸಬೇಕು. ಯೋಗಾಭ್ಯಾಸದಿಂದ ರೋಗರುಜಿನಗಳನ್ನು ಕಡಿಮೆ ಮಾಡಿಕೊಂಡು ಆಸ್ಪತ್ರೆಗೆ ಹೋಗುವುದನ್ನ ಕಡಿಮೆ ಮಾಡಬೇಕು ಎಂದರು.
ನಾಡಿನ ಪ್ರಜೆಗಳನ್ನು ಆರೋಗ್ಯವಂತರನ್ನಾಗಿಸುವುದಕ್ಕಾಗಿ ಆರೋಗ್ಯ ಇಲಾಖೆ ಕೆಲಸ ಮಾಡುತ್ತದೆ, ಗ್ರಾಮ ಗ್ರಾಮಕ್ಕೂ ಯೋಗ ವಿಸ್ತರಿಸಲಾಗುವುದು. ಈಗಾಗಲೇ ಹಲವು ಗ್ರಾಮದಲ್ಲಿ ಯೋಗಗುರುಗಳಿದ್ದಾರೆ. ಇದನ್ನು ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಬೇಕಾಗಿದೆ ಎಂದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂಬಯಿಯಲ್ಲಿದ್ದ ಕಾರಣ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಅನಾರೋಗ್ಯದ ಕಾರಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ ಎಂದರು.
40 ನಿಮಿಷ ಯೋಗ:
ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಘೋಷವಾಕ್ಯದಡಿ ಭಾನುವಾರ ಬೆಳಗ್ಗೆ 7ರಿಂದ ಆರಂಭವಾದ ಯೋಗಾಭ್ಯಾಸ 40 ನಿಮಿಷಗಳ ಕಾಲ ನಡೆಯಿತು. ಸಿನಿಮಾ ನಟಿಯರಾದ ಸುಧಾರಾಣಿ, ಹರಿಪ್ರಿಯ, ನಟ ವಶಿಷ್ಠ ಸಿಂಹ ಗಮನ ಸೆಳೆದರು. ಅಲ್ಲದೆ, ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಯೋಗ ಶಿಕ್ಷಕರು ಸೇರಿದಂತೆ 2 ಸಾವಿರಕ್ಕೂ ಅಧಿಕ ಯೋಗ ಪಟುಗಳು ಭಾಗಿಯಾಗಿದ್ದರು.
ಗಮನ ಸೆಳೆದ ಮಲ್ಲಗಂಭ ಪ್ರದರ್ಶನ
ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಧಾರವಾಡದ ಮಲ್ಲಗಂಭ ಅಕಾಡೆಮಿಯಿಂದ ಮಲ್ಲಗಂಭ ಪ್ರದರ್ಶನ ನಡೆಯಿತು. 7 ಬಾರಿ ವಿಶ್ವದಾಖಲೆ ಮಾಡಿರುವ ಮಲ್ಲಗಂಭ ಸಾಹಸ ಕಲಾವಿದರು ನಡೆಸಿಕೊಟ್ಟ ಪ್ರದರ್ಶನ ನೆರೆದಿದ್ದವರ ಗಮನ ಸೆಳೆಯಿತು. ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿರುವ ತಂಡದ ನೇತೃತ್ವವನ್ನು ಸರ್ಕಾರಿ ಶಾಲೆಯ ಶಿಕ್ಷಕರು ವಹಿಸಿದ್ದರು.
