ಚನ್ನಪಟ್ಟಣ ಟಿಕೆಟ್‌ಗಾಗಿ ಕಸರತ್ತು ಮುಂದುವರಿಸಿದ ಯೋಗೇಶ್ವರ್‌ - ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ ಭೇಟಿ

| Published : Oct 08 2024, 12:26 PM IST

CP Yogeshwar
ಚನ್ನಪಟ್ಟಣ ಟಿಕೆಟ್‌ಗಾಗಿ ಕಸರತ್ತು ಮುಂದುವರಿಸಿದ ಯೋಗೇಶ್ವರ್‌ - ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಗಮನ ಸೆಳೆಯುತ್ತಿರುವ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಟಿಕೆಟ್‌ ಆಕಾಂಕ್ಷಿಗಳು ಟಿಕೆಟ್‌ಗಾಗಿ ಕಸರತ್ತು ಮುಂದುವರಿಸಿದ್ದಾರೆ.

ನವದೆಹಲಿ : ರಾಜ್ಯದ ಗಮನ ಸೆಳೆಯುತ್ತಿರುವ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಟಿಕೆಟ್‌ ಆಕಾಂಕ್ಷಿಗಳು ಟಿಕೆಟ್‌ಗಾಗಿ ಕಸರತ್ತು ಮುಂದುವರಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಶತಾಯ ಗತಾಯ ಟಿಕೆಟ್ ಪಡೆಯಲೇಬೇಕೆಂದು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಯೋಗೇಶ್ವರ್‌ ದೆಹಲಿಗೆ ಭೇಟಿ ನೀಡಿದ್ದು, ಸೋಮವಾರ ರಾಜ್ಯ ಬಿಜೆಪಿ ಉಸ್ತುವಾರಿ ಡಾ.ರಾಧಾ ಮೋಹನ್‌ ದಾಸ್‌ ಅಗರವಾಲ್‌ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಅಗರವಾಲ್‌ ಜೊತೆ ಮಾತುಕತೆ ನಡೆಸಿದ ಯೋಗೇಶ್ವರ್‌, ಕ್ಷೇತ್ರವನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ಮನವಿ ಮಾಡಿದ್ದಾರೆ. ರಾಜ್ಯದಲ್ಲಿನ ಹಾಗೂ ಕ್ಷೇತ್ರದಲ್ಲಿನ ಪ್ರಸಕ್ತ ರಾಜಕೀಯ ಪರಿಸ್ಥಿತಿ, ಸ್ಪರ್ಧೆಯಿಂದ ಕ್ಷೇತ್ರದಲ್ಲಿ ಬಿಜೆಪಿಗೆ ಭವಿಷ್ಯದಲ್ಲಿ ಆಗಬಹುದಾದ ಲಾಭಗಳ ಕುರಿತು ಅಗರವಾಲ್‌ಗೆ ವಿವರಿಸಿದರು.

ಕಾಂಗ್ರೆಸ್‌ ಅದರಲ್ಲೂ ವಿಶೇಷವಾಗಿ ಡಿ.ಕೆ.ಸಹೋದರರು ಕ್ಷೇತ್ರದ ಮೇಲೆ ತಮ್ಮ ಹಿಡಿತ ಸಾಧಿಸಲು ನಡೆಸುತ್ತಿರುವ ಪ್ರಯತ್ನ, ಅವರು ಅನುಸರಿಸಬಹುದಾದ ಚುನಾವಣಾ ತಂತ್ರಗಾರಿಕೆ, ಡಿ.ಕೆ.ಸಹೋದರರನ್ನು ಸಮರ್ಥವಾಗಿ ಎದುರಿಸಿ, ಜಿಲ್ಲೆಯಲ್ಲಿ ಬಿಜೆಪಿಯನ್ನು ಬಲಗೊಳಿಸಲು ತಮ್ಮ ಸ್ಪರ್ಧೆ ಎಷ್ಟು ಮುಖ್ಯ ಎಂಬುದರ ಕುರಿತು ಅಗರವಾಲ್‌ಗೆ ಮನವರಿಕೆ ಮಾಡಿಕೊಡುವ ಯತ್ನ ನಡೆಸಿದರು ಎನ್ನಲಾಗಿದೆ.

ಈ ವೇಳೆ, ಯೋಗೇಶ್ವರ್‌ ಮಾತುಗಳನ್ನು ಸಾವಧಾನದಿಂದ ಕೇಳಿಸಿಕೊಂಡ ಅಗರವಾಲ್‌ ಅವರು ಯೋಗೇಶ್ವರ್‌ಗೆ ವಾಸ್ತವಿಕ ಸಂಗತಿ ಹಾಗೂ ಮೈತ್ರಿ ಧರ್ಮ ಪಾಲನೆಯ ಅಗತ್ಯಗಳ ಬಗ್ಗೆ ಮನವರಿಕೆ ಮಾಡಿ, ಅವರ ಮನವೊಲಿಕೆಗೆ ಯತ್ನಿಸಿದರು ಎನ್ನಲಾಗಿದೆ. ಬಳಿಕ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಮತ್ತೊಮ್ಮೆ ಮಾತುಕತೆ ನಡೆಸಿ, ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಸಲಹೆ ನೀಡಿದರು ಎಂದು ತಿಳಿದು ಬಂದಿದೆ.