ಕಳೆದ ಎರಡು-ಮೂರು ದಿನಗಳಿಂದ ನಾಡಿನ ಮೂರು ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌, ಜೆಡಿಎಸ್ ಹಾಗೂ ಬಿಜೆಪಿಯನ್ನು ತುದಿಗಾಲ ಮೇಲೆ ನಿಲ್ಲಿಸಿದ್ದ ಸಿ.ಪಿ.ಯೋಗೇಶ್ವರ್‌ ಅಂತಿಮವಾಗಿ ಕಾಂಗ್ರೆಸ್‌ ಸೇರ್ಪಡೆಯಾಗುವ ಮೂಲಕ ಚನ್ನಪಟ್ಟಣ ಚುನಾವಣಾ ಕಣವನ್ನು ರಂಗೇರಿಸಿದ್ದಾರೆ.

ಬೆಂಗಳೂರು : ಯಾವ ಪಕ್ಷದಿಂದ ಕಣಕ್ಕೆ ಇಳಿಯುತ್ತಾರೆ ಎಂಬ ಕುತೂಹಲ ಮೂಡಿಸಿ ಕಳೆದ ಎರಡು-ಮೂರು ದಿನಗಳಿಂದ ನಾಡಿನ ಮೂರು ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌, ಜೆಡಿಎಸ್ ಹಾಗೂ ಬಿಜೆಪಿಯನ್ನು ತುದಿಗಾಲ ಮೇಲೆ ನಿಲ್ಲಿಸಿದ್ದ ಸಿ.ಪಿ.ಯೋಗೇಶ್ವರ್‌ ಅಂತಿಮವಾಗಿ ಕಾಂಗ್ರೆಸ್‌ ಸೇರ್ಪಡೆಯಾಗುವ ಮೂಲಕ ಚನ್ನಪಟ್ಟಣ ಚುನಾವಣಾ ಕಣವನ್ನು ರಂಗೇರಿಸಿದ್ದಾರೆ.

ಬಿಜೆಪಿಯಿಂದ ಟಿಕೆಟ್‌ ಬಯಸಿದ್ದ ಯೋಗೇಶ್ವರ್‌, ಮೈತ್ರಿಕೂಟವು ಕಮಲ ಚಿಹ್ನೆಯಡಿ ಸ್ಪರ್ಧಿಸಲು ಅವಕಾಶ ನೀಡಿದ್ದರೆ ಪಕ್ಷ ಬದಲಿಸುತ್ತಿರಲಿಲ್ಲ. ಆದರೆ, ಚನ್ನಪಟ್ಟಣದಲ್ಲಿ ಆಳವಾದ ಬೇರು ಹೊಂದಿರುವ ಜೆಡಿಎಸ್‌ ಈ ಬಾರಿ ಸೋಲುಂಡರೂ ಸರಿ ಪಕ್ಷದ ಸಂಘಟನೆ ಕಳೆದುಕೊಳ್ಳಬಾರದು ಎಂಬ ಕಾರಣಕ್ಕೆ ಬಿಜೆಪಿಗೆ ಕ್ಷೇತ್ರ ಬಿಟ್ಟುಕೊಡಲು ಒಪ್ಪದೇ ಇದ್ದುದರಿಂದ ಬಿಜೆಪಿ ತೊರೆಯುವುದು ಯೋಗೇಶ್ವರ್‌ಗೆ ಅನಿವಾರ್ಯವಾಗಿತ್ತು.

ಏಕೆಂದರೆ, ಸ್ಥಳೀಯ ಜೆಡಿಎಸ್‌ ನಾಯಕರ ತೀವ್ರ ವಿರೋಧದ ಕಾರಣ ಆ ಪಕ್ಷದ ಟಿಕೆಟ್‌ ಪಡೆದು ಸ್ಪರ್ಧಿಸುವುದು ಆತ್ಮಹತ್ಯೆ ಮಾಡಿಕೊಂಡಂತೆ ಎಂಬ ಅರಿವು ಇದ್ದ ಕಾರಣ ಯೋಗೇಶ್ವರ್‌ಗೆ ಇದ್ದ ಪರ್ಯಾಯಗಳು ಎರಡೇ. ಒಂದು ಕಾಂಗ್ರೆಸ್‌ ಸೇರುವುದು. ಮತ್ತೊಂದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌ನಿಂದ ಡಮ್ಮಿ ಅಭ್ಯರ್ಥಿ ಕಣಕ್ಕೆ ಇಳಿಯುವಂತೆ ನೋಡಿಕೊಂಡು ಜೆಡಿಎಸ್‌ ವಿರುದ್ಧ ಸೆಣಸುವುದು.

ಈ ಪೈಕಿ ಅವರು ಕಾಂಗ್ರೆಸ್‌ ಪಕ್ಷ ಸೇರ್ಪಡೆಯನ್ನು ಆಯ್ಕೆ ಮಾಡುಕೊಳ್ಳುವಲ್ಲಿ ಡಿ.ಕೆ.ಶಿವಕುಮಾರ್‌ ಹಾಗೂ ಅವರ ಆಪ್ತ ಬಳಗ ನಡೆಸಿದ ಪ್ರಯತ್ನ ಹಾಗೂ ನೀಡಿದ ಆಫರ್‌ಗಳು ಪ್ರಧಾನ ಪಾತ್ರ ವಹಿಸಿವೆ ಎಂದೇ ಮೂಲಗಳು ಹೇಳಿವೆ.

ವಾಸ್ತವವಾಗಿ ತಮ್ಮ ರಾಜಕೀಯ ಪ್ರತಿಸ್ಪರ್ಧಿ ಹಾಗೂ ಇತ್ತೀಚೆಗೆ ತಮ್ಮ ತೀವ್ರ ಟೀಕಾಕಾರರಾಗಿರುವ ಹಾಗೂ ರಾಜಕೀಯ ಸಂಚಲನ ನಡೆದು ಸರ್ಕಾರ ಬೀಳುತ್ತದೆ ಹಾಗೂ ತಾನು ಶೀಘ್ರ ಮುಖ್ಯಮಂತ್ರಿಯಾಗುವೆ ಎಂಬ ಹೇಳಿಕೆಯನ್ನು ನೀಡುತ್ತಿರುವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮರ್ಮಾಘಾತವಾಗಬೇಕಾದರೆ ಅವರದೇ ಕ್ಷೇತ್ರವಾದ ಚನ್ನಪಟ್ಟಣದಲ್ಲಿ ಸೋಲುಣಿಸುವುದು ಡಿ.ಕೆ.ಶಿವಕುಮಾರ್‌ ಅವರ ಪ್ರಥಮ ಆದ್ಯತೆಯಾಗಿತ್ತು.

ಹೀಗಾಗಿಯೇ ಇಲ್ಲಿ ಯಾರೇ ಅಭ್ಯರ್ಥಿಯಾದರೂ ನಾನೇ ಅಭ್ಯರ್ಥಿಯಾದಂತೆ ಎಂದು ಘೋಷಿಸಿಕೊಂಡು ಶಿವಕುಮಾರ್‌ ಕಳೆದ ನಾಲ್ಕು ತಿಂಗಳಿನಿಂದ ತೀವ್ರ ಸಂಘಟನೆ ಹಾಗೂ ಚುನಾವಣೆ ಸಿದ್ಧತೆಯನ್ನು ನಡೆಸಿದ್ದರು. ಉಪ ಚುನಾವಣೆ ಮೇಲೆ ಕಣ್ಣಿಟ್ಟಿದ್ದ ಅವರು ಬರೋಬ್ಬರಿ 1,000 ಕೋಟಿ ರು.ಗಳಷ್ಟು ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ತಳಮಟ್ಟದಲ್ಲಿ ಪಕ್ಷ ಸಂಘಟನೆ, ಜೆಡಿಎಸ್‌ ನಾಯಕರನ್ನು ಸೆಳೆಯುವ ಮೂಲಕ ಸೊರಗಿದ್ದ ಪಕ್ಷ ಸಂಘಟನೆಗೆ ನೀರೆರೆದಿದ್ದರು. ತನ್ಮೂಲಕ ಡಿ.ಕೆ.ಸುರೇಶ್‌ ಅವರನ್ನು ಕಣಕ್ಕಿಳಿಸಲೇ ಇಷ್ಟು ತಯಾರಿ ನಡೆಸುತ್ತಿದ್ದಾರೆ ಎಂಬ ಮಟ್ಟಿಗೆ ಶಿವಕುಮಾರ್ ಕ್ಷೇತ್ರವನ್ನು ಗಂಭೀರವಾಗಿ ತೆಗೆದುಕೊಂಡಿದ್ದರು.

ಜತೆಗೆ, ಕಾಂಗ್ರೆಸ್‌ ಅಭ್ಯರ್ಥಿ ಯಾರನ್ನು ಮಾಡಬೇಕು ಎಂಬದನ್ನು ಗೌಪ್ಯವಾಗಿಟ್ಟು ಮೈತ್ರಿ ಕೂಟದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು.

ಯಾವಾಗ ಯೋಗೇಶ್ವರ್‌ ಅಲುಗಾಡತೊಡಗಿದರೋ ಆಗ ಶಿವಕುಮಾರ್‌ ಆಪ್ತ ಬಣ ಕಾರ್ಯಪ್ರವೃತ್ತವಾಗಿ ಅವರನ್ನು ಕಾಂಗ್ರೆಸ್‌ಗೆ ಕರೆತರುವ ಪ್ರಯತ್ನ ಆರಂಭಿಸಿತ್ತು. ಈ ಪ್ರಯತ್ನ ಇದೀಗ ಫಲ ನೀಡಿದೆ. ಈ ಫಲ ನೀಡಲು ಪ್ರಮುಖ ಕಾರಣ ಕಾಂಗ್ರೆಸ್‌ ಕೂಡ ಕ್ಷೇತ್ರದಲ್ಲಿ ತನ್ನ ಬಲ ವೃದ್ಧಿಸಿಕೊಂಡಿದೆ ಎಂಬುದು ಯೋಗೇಶ್ವರ್‌ ಅರಿವಿಗೆ ಬಂದಿರುವುದು.

ಚನ್ನಪಟ್ಟಣ ಕ್ಷೇತ್ರದಲ್ಲಿ ಯೋಗೇಶ್ವರ್‌ಗೆ ತಮ್ಮದೆ ಆದ ಮತ ಬ್ಯಾಂಕ್‌ ಇದೆ. ಇದರ ಜತೆಗೆ ಯಾವುದಾದರೂ ಒಂದು ಪಕ್ಷದ ಮತ ಬ್ಯಾಂಕ್‌ ಕೂಡಿಕೊಂಡರೆ ಯೋಗೇಶ್ವರ್‌ ಅವರನ್ನು ತಡೆದು ನಿಲ್ಲಿಸುವುದು ಅಸಾಧ್ಯ. ಹೀಗಾಗಿಯೇ ಯೋಗೇಶ್ವರ್‌ ಬಿಜೆಪಿಯ ಚಿಹ್ನೆಯಡಿ ಮೈತ್ರಿಕೂಟದ ಬಲ ಬಯಸಿದ್ದರು. ಆದರೆ, ಅದು ಕೈಗೂಡದೇ ಇದ್ದಾಗ ಮತ್ತೊಂದು ಪ್ರಬಲ ಮತ ಬ್ಯಾಂಕ್‌ ಹೊಂದಿರುವ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ.

ಇದರ ಜತೆಗೆ, ಕಾಂಗ್ರೆಸ್‌ ಅಧಿಕಾರದಲ್ಲಿರುವುದು ಹಾಗೂ ಚುನಾವಣೆಯ ಖರ್ಚುವೆಚ್ಚಕ್ಕೆ ದೊಡ್ಡ ಪ್ರಮಾಣದಲ್ಲಿ ಕೆಪಿಸಿಸಿಯೇ ಕೊಡುಗೆ ನೀಡಲಿರುವುದು ಕಾರಣವಾಗಿದೆ. ಇದಲ್ಲದೆ, ಚುನಾವಣೆಯಲ್ಲಿ ಎಂತಹುದೇ ಫಲಿತಾಂಶ ಬಂದರೂ ಸಂಪುಟ ದರ್ಜೆಯ ಸ್ಥಾನಮಾನವೊಂದು (ಸಚಿವ ಸ್ಥಾನವಾಗಬಹುದು ಅಥವಾ ಪ್ರಭಾವಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವಾಗಬಹುದು) ನೀಡುವ ಖಚಿತ ಭರವಸೆ ದೊರಕಿದೆ. ಹೀಗಾಗಿಯೇ ಯೋಗೇಶ್ವರ್‌ ಕಾಂಗ್ರೆಸ್‌ ತೆಕ್ಕೆಗೆ ಬಿದ್ದಿದ್ದಾರೆ.